ಶುಕ್ರವಾರ, ಡಿಸೆಂಬರ್ 6, 2019
21 °C
ಕೃಷಿ ಇಲಾಖೆಯ ಉದ್ಯೋಗಿ, ಸರ್ಕಾರಿ ಕಾಲೇಜಿನಲ್ಲ ಅತಿಥಿ ಉಪನ್ಯಾಸಕ, ಅರಣ್ಯ ಇಲಾಖೆ ಸಂಯೋಜಕ

ಏಕಕಾಲಕ್ಕೆ ಮೂರು ಸಂಬಳ ಎಣಿಸಿದ ಟೈಪಿಸ್ಟ್‌!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೃಷಿ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಕಾಯಂ ಹುದ್ದೆಯಲ್ಲಿ ಕೆಲಸ ಮಾಡುತ್ತಲೇ ಕಾನೂನು ಬಾಹಿರವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ, ಮತ್ತೊಂದೆಡೆ ಅರಣ್ಯ ಇಲಾಖೆಯ ಸಹ ಸಂಯೋಜಕನಾಗಿ ಕರ್ತವ್ಯ ನಿರ್ವಹಿಸಿ ಸಂಬಳ ಪಡೆದ ನಗರದ ರವಿಕಿರಣ ಜೇಮ್ಸ್‌ ಕಟ್ಟಿಮನಿ ಎಂಬುವವರ ಮೇಲೆ ಇಲ್ಲಿನ ವಿಶ್ವವಿದ್ಯಾಲಯ ಠಾಣೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಸ್ತುತ ರವಿಕಿರಣ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (ಜಿಕೆವಿಕೆ) ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹುದ್ದೆ ಪಡೆಯಲು ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡಿದ್ದರ ಬಗ್ಗೆ ನೇಮಕಾತಿ ಸಂದರ್ಭದಲ್ಲಿ ದಾಖಲೆ ಸಲ್ಲಿಸಿದ್ದೇ ಅವರಿಗೆ ಮುಳುವಾಗಿದೆ. 

ರವಿಕಿರಣ್‌ 2015ರಲ್ಲಿ ಕಲಬುರ್ಗಿಯ ಕೃಷಿ ಇಲಾಖೆಯಡಿ ಬರುವ ಜೈವಿಕ ಗೊಬ್ಬರ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡಿದ್ದಾಗಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಪೂರ್ಣ ವೇತನವನ್ನು ಪಡೆದಿದ್ದಾರೆ. ಆದರೆ ಅದೇ ಸಮಯಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಪ್ರಾಣಿಶಾಸ್ತ್ರ ವಿಷಯವನ್ನು ಬೋಧಿಸಿದ್ದಾರೆ. ಹೀಗೆ 2014–15, 2015–16 ಹಾಗೂ 2016–17ರಲ್ಲಿ ಮೂರು ವರ್ಷ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ ₹ 2,88,084 ವೇತನ ಪಡೆದಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದು, ಅವುಗಳನ್ನು ಕಲಬುರ್ಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಿಂಚೋಳಿಯ ವಕೀಲ ಶ್ರೀಮಂತ ಕಟ್ಟಿಮನಿ ಅವರು ಯಾದಗಿರಿಯ ಅರಣ್ಯ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ರವಿಕಿರಣ ಸಂಯೋಜಕರಾಗಿ ಪಡೆದ ಸಂಬಳದ ವಿವರವನ್ನು ಪಡೆದಿದ್ದಾರೆ. ಅಲ್ಲಿ ₹ 3.54 ಲಕ್ಷ ಸಂಬಳ ಪಡೆದಿರುವ ಬಗ್ಗೆ ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಈ ದಾಖಲೆಗಳನ್ನು ಲಗತ್ತಿಸಿ ಸರ್ಕಾರಕ್ಕೆ ಪತ್ರ ಬರೆದಾಗ ಕೃಷಿ ಇಲಾಖೆ ನಿರ್ದೇಶಕರು ಕಲಬುರ್ಗಿಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ. 

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರವಿಕಿರಣ ಏಕಕಾಲಕ್ಕೆ ಜೈವಿಕ ಗೊಬ್ಬರ ಗುಣನಿಯಂತ್ರಣ ಪ್ರಯೋಗಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಅರಣ್ಯ ಸಂಯೋಜಕರಾಗಿ ಕೆಲಸ ಮಾಡಿದ್ದಾಗಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ವೇತನ ಪಡೆದಿದ್ದು ದೃಢಪಟ್ಟಿದೆ.

ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ರವಿಕುಮಾರ್‌ ಅವರ ಸೇವಾ ವಿವರಗಳು, ವೇತನ ಜಮಾ ಆದ ಖಾತೆಯ ವಿವರಗಳನ್ನು ನೀಡುವಂತೆ ಜೈವಿಕ ಗೊಬ್ಬರ ಗುಣ ನಿಯಂತ್ರಣ ಪ್ರಯೋಗಾಲಯದ ಸಹಾಯಕ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ರವಿಕಿರಣ ನಮ್ಮಲ್ಲಿ ಬೆರಳಚ್ಚುಗಾರರಾಗಿರುವಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದು ದೃಢಪಟ್ಟಿದೆ. ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಹೇಳಿದ್ದಾರೆ.

ಕೃಷಿ ಇಲಾಖೆಯ ಕಾಯಂ ಹುದ್ದೆಯಲ್ಲಿದ್ದ ರವಿಕಿರಣ ಅವರು ಸರ್ಕಾರಿ ಕಾಲೇಜು ಹಾಗೂ ಅರಣ್ಯ ಇಲಾಖೆಯಲ್ಲಿ ಅಕ್ರಮವಾಗಿ ಕೆಲಸ ಮಾಡುವ ಮೂಲಕ ಇಬ್ಬರು ಉದ್ಯೋಗಾಕಾಂಕ್ಷಿಗಳ ಅವಕಾಶ ಕಿತ್ತುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರುದಾರರಾದ ಶ್ರೀಮಂತ ಕಟ್ಟಿಮನಿ ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ರವಿಕಿರಣ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಹಾಕಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಶಹಾಪುರದ ಅರಣ್ಯ ಇಲಾಖೆ ಸಂಯೋಜಕರಾಗಿ ಕೆಲಸ ಮಾಡಿದ್ದರ ಬಗ್ಗೆ ದಾಖಲೆಗಳನ್ನು ಸಲ್ಲಿಸಿದ್ದರು. ಇವುಗಳ ಆಧಾರದ ಮೇಲೆ ಸಂದರ್ಶನದಲ್ಲಿ ಹೆಚ್ಚುವರಿ ಅಂಕಗಳನ್ನು ಪಡೆದು ನೇಮಕವಾಗಿದ್ದಾರೆ ಎನ್ನಲಾಗಿದೆ. ಏಕಕಾಲಕ್ಕೆ ಮೂರು ಕಡೆ ಕೆಲಸ ಮಾಡಲು ಹೇಗೆ ಸಾಧ್ಯ ಎಂಬ ಸಂಶಯದ ಬೆನ್ನುಬಿದ್ದ ಶ್ರೀಮಂತ ಕಟ್ಟಿಮನಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ‍ವಿವರ ಪಡೆದಾಗ ಏಕಕಾಲಕ್ಕೆ ಮೂರು ಕಡೆ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ.

ಈ ವಿಚಾರವನ್ನು ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಅವರು ಕಳೆದ ಜನವರಿ 10ರಂದು ಬೆಂಗಳೂರು ವಿ.ವಿ. ಕುಲಪತಿ ಹಾಗೂ ಕೃಷಿ ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪ್ರತಿಕ್ರಿಯಿಸಿ (+)