ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಾನ್‌– 3: ಬೆಳಗಾವಿ ವಿಮಾನ ನಿಲ್ದಾಣ ಟೇಕಾಫ್‌

Last Updated 12 ಅಕ್ಟೋಬರ್ 2019, 16:34 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರದ ‘ಉಡಾನ್‌ 3’ ಯೋಜನೆಯಿಂದಾಗಿ ಬೆಳಗಾವಿ ವಿಮಾನ ನಿಲ್ದಾಣ ಚೇತರಿಸಿಕೊಂಡಿದೆ. ಕಳೆದ ವರ್ಷ ಕೆಲವು ದಿನಗಳವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸದೇ ಸ್ಥಗಿತಗೊಂಡಿತ್ತು. ಶಾಶ್ವತವಾಗಿ ಬಂದ್‌ ಆಗುವ ಭೀತಿ ಎದುರಿಸುತ್ತಿತ್ತು. ಆ ಭೀತಿ ಈಗ ದೂರವಾಗಿದ್ದು, ಈ ವರ್ಷ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರು ಇಲ್ಲಿಂದ ವಿಮಾನ ಹಾರಾಟ ನಡೆಸಿದ್ದಾರೆ.

ಪ್ರಸ್ತುತ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್‌, ಅಹಮದಾಬಾದ್‌ಗೆ ಪ್ರತಿದಿನ 10 ವಿಮಾನಗಳು ಹಾರಾಟ ನಡೆಸುತ್ತಿವೆ. ಬೆಂಗಳೂರಿಗೆ– 5 (ಸ್ಪೈಸ್‌ ಜೆಟ್‌ 2, ಇಂಡಿಗೋ–1, ಅಲೈಯನ್ಸ್‌ ಏರ್‌–1 ಸ್ಟಾರ್‌ ಏರ್‌ –1) ಹೈದರಾಬಾದ್‌ –1 (ಸ್ಪೈಸ್‌ ಜೆಟ್‌), ಮುಂಬೈ– 2 (ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌), ಪುಣೆ– 1 (ಅಲೈಯನ್ಸ್‌ ಏರ್‌), ಅಹಮದಾಬಾದ್‌– 1 (ಸ್ಟಾರ್‌ ಏರ್‌) ವಿಮಾನ ಹಾರಾಟ ಮಾಡುತ್ತಿವೆ.

ಸರಾಸರಿಯಾಗಿ ಒಂದು ದಿನಕ್ಕೆ 21,000 ಜನ ಪ್ರಯಾಣಿಕರು ನಿಲ್ದಾಣವನ್ನು ಉಪಯೋಗಿಸುತ್ತಿದ್ದಾರೆ. ಇದು, ಇದುವರೆಗಿನ ದಾಖಲೆಯ ಪ್ರಮಾಣವಾಗಿದೆ. 2018ರಲ್ಲಿ 19,000 ಜನರು ಉಪಯೋಗಿಸಿದ್ದು, ಹಳೆಯ ದಾಖಲೆಯಾಗಿತ್ತು.

5 ಕಂಪನಿಗಳಿಗೆ ಸಮ್ಮತಿ:ಈ ಯೋಜನೆಯಡಿ ಬೆಳಗಾವಿಯಿಂದ ವಿವಿಧ ನಗರಗಳಿಗೆ ವಿಮಾನ ಹಾರಾಟ ನಡೆಸಲು ಬಿಡ್‌ ಸಲ್ಲಿಸಿದ್ದ ಕಂಪನಿಗಳ ಪೈಕಿ 5 ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇವುಗಳಲ್ಲಿ ಈಗಾಗಲೇ 4 ಕಂಪನಿಗಳು ಹಾರಾಟ ನಡೆಸಿದ್ದು, ಹೈದರಾಬಾದ್ ಮೂಲದ ಟ್ರೂ ಜೆಟ್‌ ಸಂಸ್ಥೆ ಇನ್ನಷ್ಟೇ ಆರಂಭಿಸಬೇಕಾಗಿದೆ.

ಟ್ರೂ ಜೆಟ್‌ ಶೀಘ್ರ ಆರಂಭ:ಟ್ರೂ ಜೆಟ್‌ ವಿಮಾನಯಾನ ಸಂಸ್ಥೆಯು ಬೆಳಗಾವಿಯಿಂದ ಹೈದರಾಬಾದ್‌ಗೆ ಈ ತಿಂಗಳ ಅಂತ್ಯದ ವೇಳೆಗೆ ಸೇವೆ ಪ್ರಾರಂಭಿಸುವ ನಿರೀಕ್ಷೆ ಇದೆ. ಸಂಸ್ಥೆಯ ಪ್ರತಿನಿಧಿಗಳು ಇತ್ತೀಚೆಗೆ ನಿಲ್ದಾಣಕ್ಕೆ ಭೇಟಿ ನೀಡಿ, ವಿಮಾನ ನಿಲ್ಲಿಸಲು ಸ್ಥಳ ಗುರುತಿಸಿಕೊಡುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಕೋರಿದ್ದರು. ಅವರ ಮನವಿಯ ಮೇರೆಗೆ ಸ್ಥಳಾವಕಾಶವನ್ನೂ ಹಂಚಿಕೆ ಮಾಡಲಾಗಿದೆ. ಈ ಮಾರ್ಗದ ಜೊತೆ ತಿರುಪತಿ, ಮೈಸೂರು ಹಾಗೂ ಕಡಪಾಕ್ಕೂ ಸೇವೆ ಆರಂಭಿಸುವ ಸಾಧ್ಯತೆ ಇದೆ.

ಚೆನ್ನೈ, ನವದೆಹಲಿಗೆ ಬೇಡಿಕೆ
‘ಬಹುತೇಕ ಎಲ್ಲ ವಿಮಾನಗಳು ಶೇ 80ರಷ್ಟು ಭರ್ತಿಯಾಗಿ ಹಾರಾಟ ನಡೆಸುತ್ತಿವೆ. ಚೆನ್ನೈ ಹಾಗೂ ನವದೆಹಲಿಗೆ ವಿಮಾನ ಆರಂಭಿಸುವಂತೆ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಸ್ಪೈಸ್‌ ಜೆಟ್‌ ಹಾಗೂ ಇಂಡಿಗೋ ಕಂಪನಿಯ ಪ್ರತಿನಿಧಿಗಳ ಜೊತೆ ಮಾತುಕತೆ ನಡೆದಿದೆ. ಸದ್ಯದಲ್ಲಿ ಈ ನಗರಗಳಿಗೂ ಸೇವೆ ಆರಂಭವಾಗಬಹುದು’ ಎಂದು ವಿಮಾನ ನಿಲ್ದಾಣದ ನಿರ್ದೇಶ ರಾಜೇಶಕುಮಾರ್‌ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

*
ವಿಮಾನ ನಿಲ್ದಾಣದಿಂದ ಕಾರ್ಗೊ ಸೇವೆ ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕರೆ ವಿಮಾನ ನಿಲ್ದಾಣದ ಬಳಕೆ ಇನ್ನೂ ಹೆಚ್ಚಾಗಲಿದೆ.
– ರಾಜೇಶ ಮೌರ್ಯ, ವಿಮಾನ ನಿಲ್ದಾಣದ ನಿರ್ದೇಶಕ

ಉಡಾನ್‌– 3 ಮಾರ್ಗಗಳ ಹಂಚಿಕೆ
ವಿಮಾನಯಾನ ಸಂಸ್ಥೆ:ಮಾರ್ಗ
ಇಂಡಿಗೋ:ಹೈದರಾಬಾದ್‌
ಅಲೈನ್ಸ್‌:ಪುಣೆ
ಸ್ಪೈಸ್‌ಜೆಟ್‌:ಹೈದರಾಬಾದ್‌, ಮುಂಬೈ
ಸ್ಟಾರ್‌ಏರ್‌:ಅಹಮದಾಬಾದ್‌, ಸೂರತ್‌, ಜೈಪುರ್‌, ಜೋಧಪುರ, ನಾಗ್ಪುರ, ನಾಸಿಕ್‌, ತಿರುಪತಿ
ಟ್ರೂಜೆಟ್‌: ಹೈದರಾಬಾದ್‌, ಕಡಪಾ, ತಿರುಪತಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT