ಭಾನುವಾರ, ಫೆಬ್ರವರಿ 23, 2020
19 °C
ಮಲ್ಪೆಯಿಂದ ಹುಸಿ ಬಾಂಬ್‌ ಕರೆ ಮಾಡಿದ್ದ ಆರೋಪಿ

ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಆದಿತ್ಯರಾವ್‌ ಇಲ್ಲಿನ ಕರ್ಣಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಲಾಕರ್‌ನಲ್ಲಿ ಪುಡಿಯೊಂದರ ದಾಸ್ತಾನು ಪತ್ತೆಯಾಗಿದೆ. ಅದು ಸೈನೈಡ್‌ ಎಂದು ಆರೋಪಿಯೇ ಹೇಳಿಕೊಂಡಿದ್ದಾನೆ.

ಆರೋಪಿಯನ್ನು ಶನಿವಾರ ಉಡುಪಿಗೆ ಕರೆತಂದ ಮಂಗಳೂರಿನ ಪೊಲೀಸರು ಹಲವೆಡೆ ಸ್ಥಳ ಮಹಜರು ನಡೆಸಿದರು. ಕರ್ಣಾಟಕ ಬ್ಯಾಂಕ್‌ ಕುಂಜಿಬೆಟ್ಟು ಶಾಖೆಗೆ ಆದಿತ್ಯ ರಾವ್‌ನನ್ನು ಕರೆತರಲಾಗಿತ್ತು. ಆತನ ಲಾಕರ್‌ನ ಕೀಲಿ ಕಳೆದು ಹೋಗಿದ್ದರಿಂದ ಕೀ ರಿಪೇರಿ ಮಾಡುವ ವ್ಯಕ್ತಿಯನ್ನು  ಕರೆಸಿ ಲಾಕರ್ ಬಾಗಿಲು ತೆರೆಯಲಾಯಿತು. ಬಳಿಕ ಅದರೊಳಗಿದ್ದ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

‘ಲಾಕರ್‌ನಲ್ಲಿ 150 ಗ್ರಾಂ.ನಷ್ಟು ಪುಡಿ ಸಿಕ್ಕಿದೆ. ಅದು ಸೈನೈಡ್‌ ಎಂದು ಆರೋಪಿಯೇ ಹೇಳಿದ್ದಾನೆ. ಆದರೆ, ಈಗಲೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಪುಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪರೀಕ್ಷಾ ವರದಿ ಬಂದ  ಬಳಿಕ ಖಚಿತ ಮಾಹಿತಿ ದೊರೆಯಲಿದೆ’ ಎಂದು ಪೊಲೀಸ್‌ನ ಮೂಲಗಳು ತಿಳಿಸಿವೆ.

ಮಲ್ಪೆಯಿಂದ ಕರೆ

ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಬಳಿಕ ಮಲ್ಪೆಗೆ ಬಂದಿದ್ದ ಆರೋಪಿ ಇಲ್ಲಿನ ಗೂಡಂಗಡಿ ಒಂದರ ಬಳಿಯಿಂದ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ ವ್ಯವಸ್ಥಾಪಕರಿಗೆ ಕರೆಮಾಡಿ ಇಂಡಿಗೊ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಸಿದ್ದ. ಈ ಬಗ್ಗೆಯೂ ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ಮಹಜರು ನಡೆಸಿದರು.

ಮಂಗಳೂರು ಉತ್ತರ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್‌ನನ್ನು ಮಲ್ಪೆಗೆ ಕರೆತಂದಿತ್ತು. ಬಾಂಬ್ ಬೆದರಿಕೆ ಕರೆ ಮಾಡಿದ ಬಳಿಕ ಆದಿತ್ಯ ಮೊಬೈಲ್‌ನಿಂದ ಸಿಮ್‌ ತೆಗೆದು ಬಿಸಾಡಿದ್ದ ಎನ್ನಲಾಗಿದ್ದು, ಪೊಲೀಸರು ಗೂಡಂಗಡಿಯ ಸುತ್ತಲೂ ಶೋಧ ನಡೆಸಿದರು. ಆದರೆ, ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ. 

ಬಳಿಕ ಆದಿತ್ಯ ಕೆಲಸ ಮಾಡುತ್ತಿದ್ದ ಕಾರ್ಕಳದ ಬಾರ್‌ಗೆ ಕರೆದೊಯ್ದು, ಅಲ್ಲಿಯೂ ಸ್ಥಳ ತನಿಖೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು