ಜೆಡಿಎಸ್‌ಗೆ ದಕ್ಕಿದ ಉಡುಪಿ–ಚಿಕ್ಕಮಗಳೂರು: ‘ಕೈ’ಬಂಡಾಯ

ಶನಿವಾರ, ಮಾರ್ಚ್ 23, 2019
31 °C

ಜೆಡಿಎಸ್‌ಗೆ ದಕ್ಕಿದ ಉಡುಪಿ–ಚಿಕ್ಕಮಗಳೂರು: ‘ಕೈ’ಬಂಡಾಯ

Published:
Updated:

ಉಡುಪಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಸೀಟು ಹಂಚಿಕೆ ಒಪ್ಪಂದದಂತೆ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ ಪಾಲಾಗಿದೆ.

ಆದರೆ, ಕರಾವಳಿಯಲ್ಲಿ ನೆಲೆ ಇಲ್ಲದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡಲಾಗಿದೆ ಎಂದು ಹೈಕಮಾಂಡ್ ನಿರ್ಧಾರಕ್ಕೆ ‘ಕೈ’ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ಎಐಸಿಸಿ ಸದಸ್ಯ ಹಾಗೂ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಅಮೃತ್ ಶೆಣೈ ‘ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದು ಆಘಾತಕಾರಿ. ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ರಾಜಕೀಯ ಅಸ್ತಿತ್ವವೇ ಇಲ್ಲ. ಪಕ್ಷದ ತಪ್ಪುಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುತ್ತೇನೆ. ಬಳಿಕ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್‌ನ ಮತ್ತೊಬ್ಬ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಸೊರಕೆ ಅವರು ಕೂಡ ಅಸಮಾಧಾನಗೊಂಡಿದ್ದು, ಹೈಕಮಾಂಡ್ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡುವುದಾಗಿ ತಿಳಿಸಿದರು.

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇದುವರೆಗೂ ನಡೆದ ಚುನಾವಣೆಗಳಲ್ಲಿ ಜೆಡಿಎಸ್‌ ಗೆದ್ದಿಲ್ಲ. 2009ರಲ್ಲಿ ಜೆಡಿಎಸ್‌ ಸ್ಪರ್ಧಿಸಿರಲಿಲ್ಲ. 2014ರ ಚುನಾವಣೆ ಹಾಗೂ 2012ರ ಉಪ ಚುನಾವಣೆಗಳಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಕ್ಷೇತ್ರ ಪುನರ್ ವಿಂಗಡಣೆಗೂ ಹಿಂದೆ ನಡೆದ ಚುನಾವಣೆಗಳಲ್ಲೂ ಉಡುಪಿ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಗಳು ಒಮ್ಮೆಯೂ ಜಯಗಳಿಸಿಲ್ಲ.

ಪ್ರಸ್ತುತ ಉಡುಪಿ–ಚಿಕ್ಕಮಗಳೂರು ವ್ಯಾಪ್ತಿಗೊಳಪಡುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ನ ಒಬ್ಬ ಶಾಸಕರೂ ಇಲ್ಲ. ಉಡುಪಿಯ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್‌ಗೆ ನೆಲೆಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಕ್ಷೇತ್ರ ಬಿಟ್ಟುಕೊಟ್ಟಿದ್ದು ಯಾವ ಉದ್ದೇಶಕ್ಕೆ ಎಂದು ಕಾಂಗ್ರೆಸ್‌ ಮುಖಂಡರು ಪ್ರಶ್ನಿಸುತ್ತಿದ್ದಾರೆ.

‘ಕಾಂಗ್ರೆಸ್‌ ಬಲ ಹೆಚ್ಚು: ಕ್ಷೇತ್ರ ಪುನರ್‌ ವಿಂಗಡಣೆಗೂ ಮುನ್ನ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಗಳಲ್ಲಿ ‘ಕೈ’ ಬಲ ಕಾಣುತ್ತದೆ. 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಮಲ್ಯ ಗೆಲುವು ಸಾಧಿಸಿದ್ದರು.

1962ರ ಚುನಾವಣೆಯಲ್ಲೂ ಜಯ ಪಡೆದಿದ್ದರು. 1971ರಲ್ಲಿ ರಂಗನಾಥ ಶೆಣೈ, 1977ರಲ್ಲಿ ಟಿ.ಎ.ಪೈ, 1980, 84, 89, 91, 96 ಹೀಗೆ ಸತತ ಐದು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಆಸ್ಕರ್ ಫರ್ನಾಂಡಿಸ್ ಜಯಭೇರಿ ಬಾರಿಸಿದ್ದರು. 1999ರಲ್ಲಿ ವಿನಯ್ ಕುಮಾರ್ ಸೊರಕೆ, ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಗೆಲುವು ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !