ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೂ ಮೊದಲು ಹುಟ್ಟೂರಿಗೆ: ಜ್ವರದಲ್ಲೇ ಭೇಟಿ

ಕೊನೆ ಹೆಜ್ಜೆಗುರುತುಗಳು
Last Updated 29 ಡಿಸೆಂಬರ್ 2019, 13:23 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿ ಡಿ.20ರ ಶುಕ್ರವಾರ ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದರ ಹಿಂದಿನ ದಿನವಾದ (ಡಿ.19) ಗುರುವಾರ ಹುಟ್ಟೂರು ರಾಮಕುಂಜಕ್ಕೆ ಭೇಟಿ ನೀಡಿದ್ದರು. ಆಗ ಜ್ವರ ಸುಡುತ್ತಿದ್ದರೂ, ತಾನು ಕಳಿತ ಶಾಲೆ, ತನ್ನ ವಿದ್ಯಾಸಂಸ್ಥೆಗಳಲ್ಲಿ ನಡೆದಾಡಿದ್ದರು. ಇದೇ ಇಲ್ಲಿ ಅವರ ಕೊನೆಯ ಹೆಜ್ಜೆ ಗುರುತುಗಳಾಗಿವೆ.

ಸ್ವಾಮೀಜಿ ಎಲ್ಲಿಯೇ ಇದ್ದರೂ ಹುಟ್ಟೂರಿನ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ಆಗಮಿಸಿ ಆಶೀರ್ವಚನ ನೀಡುತ್ತಿದ್ದರು. ಸ್ವಾಮೀಜಿ ಡಿ.19ರಂದು ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದರು. ಅಂದು ಅವರು, 800 ಭಕ್ತರ ಜೊತೆಯಲ್ಲಿ ತಿರುಪತಿ ಪ್ರವಾಸದಿಂದ ಹಿಂತಿರುಗಿದ್ದರು. ಆಗ ತೀವ್ರ ಜ್ವರದಿಂದ ಬಳಲುತ್ತಿದ್ದರೂ ತಾನು ಕಲಿತ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲೆಯ ವಾರ್ಷಿಕೋತ್ಸವಕ್ಕೆ ಬಂದು, ಆಶೀರ್ವಚನ ನೀಡಿ ಉಡುಪಿಗೆ ತೆರೆಳಿದ್ದರು.

‘ಅದು, ಕಾಕತಾಳಿಯವೋ... ವಿಧಿಬರಹವೋ... ಶ್ರೀಗಳ ಇಚ್ಛೆಯೋ... ಗೊತ್ತಿಲ್ಲ. ತನ್ನ ಹುಟ್ಟೂರಿನಲ್ಲಿ ತಾನು ಓದಿದ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಭೇಟಿ ನೀಡಿದ್ದಾರೆ’ ಎಂದು ಸ್ಮರಿಸಿಕೊಳ್ಳುತ್ತಾರೆ ಗ್ರಾಮಸ್ಥರು.

ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಪೇಜಾವರ ಶ್ರೀಗಳು ತನ್ನ ಎಡೆಬಿಡದ ಕಾರ್ಯಕ್ರಮಗಳ ಮಧ್ಯೆಯೂ ನವೆಂಬರ್ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ಮೂರು ಬಾರಿ ರಾಮಕುಂಜಕ್ಕೆ ಭೇಟಿ ನೀಡಿದ್ದಾರೆ. ನವೆಂಬರ್ 25ಕ್ಕೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವಕ್ಕೂ ಆಗಮಿಸಿದ್ದರು.

ಅಂದು ಬೆಳಿಗ್ಗೆ ತಾನು ಹುಟ್ಟಿದ ಮನೆ ಹಳೆನೇರೆಂಕಿಯ ಎರಟಾಡಿಗೆ ಹೋಗಿ ಅಲ್ಲಿಂದ ಶಾಲೆಯ ವಾರ್ಷಿಕೋತ್ಸವಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಎರಟಾಡಿಗೆ ಭೇಟಿ ನೀಡಿ ಸಂಜೆ ಗೋಳಿತೊಟ್ಟು ಬಳಿಯ ಕುದ್ವಣ್ಣಾಯ ಎಂಬವರ ಮನೆಯಲ್ಲಿ ಭಿಕ್ಷೆ (ಆಹಾರ) ಸ್ವೀಕರಿಸಿ, ಉಡುಪಿಗೆ ತೆರಳಿದ್ದರು.

ಡಿಸೆಂಬರ್ 2ರಂದು ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ನೇರ ಉಡುಪಿ ಮಠಕ್ಕೆ ತೆರಳಿದ್ದರು. ಹೀಗಾಗಿ ಎರೆಟಾಡಿ ಮನೆಗೆ ಶ್ರೀಗಳ ಭೇಟಿ ನವೆಂಬರ್ 25ಕ್ಕೆ ಕೊನೆಯ ಭೇಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT