ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ ಮಠದೊಂದಿಗೆ ಪೇಜಾವರ ಶ್ರೀಗಳಿಗೆ ಐದು ತಲೆಮಾರುಗಳ ಸಂಬಂಧ

Last Updated 29 ಡಿಸೆಂಬರ್ 2019, 13:30 IST
ಅಕ್ಷರ ಗಾತ್ರ

ರಾಯಚೂರು: ಉಡುಪಿ ಪೇಜಾವರ ಶ್ರೀಗಳು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಐದು ತಲೆಮಾರುಗಳ ಪೀಠಾಧಿಪತಿಗಳೊಂದಿಗೆ ಒಡನಾಟ ಹೊಂದಿದ್ದರು.

1938 ರಿಂದ ಶ್ರೀ ಸಯಮೀಂದ್ರ ತೀರ್ಥರು, ಶ್ರೀ ಸುಜಯೀಂದ್ರ ತೀರ್ಥರು, ಸುಶಯೀಂದ್ರ ತೀರ್ಥರು, ಶ್ರೀ ಸುಯತೀಂದ್ರ ತೀರ್ಥರು ಹಾಗೂ ಪ್ರಸ್ತುತ ಶ್ರೀ ಸುಬುಧೇಂದ್ರ ತೀರ್ಥರ ಕಾಲದಲ್ಲಿ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಪೇಜಾವರ ಶ್ರೀಗಳ ಅಗಲಿಕೆ ಕುರಿತು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ‘ಜ್ಞಾನ ವಯೋವೃದ್ಧರು, ಶತಮಾನ ಕಂಡಂತಹ ಮಹಾನ್‌ ತಪಸ್ವಿಗಳು ಇಹಲೋಕ ಯಾತ್ರೆ ಪೂರ್ಣಗೊಳಿಸಿದ ಸುದ್ದಿಯಿಂದ ಮನುಕುಲಕ್ಕೆ ತುಂಬಲಾರದ ಹಾನಿಯಾಗಿದೆ’ ಎಂದರು.

‘ಪೇಜಾವರ ಶ್ರೀಗಳು ಚಿಕ್ಕವಯಸ್ಸಿನಿಂದಲೂ ಸನಾತನ ಹಿಂದು ಸಂಸ್ಕೃತಿಯ ಪುನರುತ್ಥಾನದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಬಂದಿದ್ದಾರೆ. ದೇಶದ ವಿವಿಧ ಸಂದರ್ಭಗಳಲ್ಲಿ ಧಾರ್ಮಿಕ ಮುಖಂಡರಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೂ ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಸಂಬಂಧ ಐದು ತಲಮಾರಿನದ್ದು’ ಎಂದು ಸ್ಮರಿಸಿದರು.

‘ಮಠದೊಂದಿಗೆ ಸುಧೀರ್ಘವಾದ ಸಂಬಂಧ ಹಾಗೂ ಸಂಪರ್ಕ ಹೊಂದಿದ್ದಾರೆ. ನನಗೆ ವೈಯಕ್ತಿಕವಾಗಿ ಬಾಲ್ಯದಿಂದಲೂ ಒಡನಾಟವಿದೆ. ಅವರನ್ನು ಕಂಡಂತಹ ಸಂದರ್ಭದಲ್ಲಿ ನನ್ನ ಪೂರ್ವಾಶ್ರಮದ ತಾತನಂತೆ ಅನುಬಂಧ ಹೊಂದಿದ್ದೆ’ ಎಂದು ನೆನಪಿಸಿಕೊಂಡರು.

‘ಪೇಜಾವರ ಶ್ರೀಗಳು ಮಂತ್ರಾಲಯದ ಮಠದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಶ್ರೀಮದ್‌ ನ್ಯಾಯಸುಧಾ ಮಹಾಮಂಗಳದಲ್ಲಿ ಹಿರಿಯ ಯತಿಗಳಾಗಿ ಭಾಗಿಯಾಗಿದ್ದರು’ ಎಂದು ಹೇಳಿದರು.

‘ತಮ್ಮ ಕೊನೆಯ ಕಾರ್ಯಕ್ರಮದಲ್ಲಿ ಸಮಾಜದ ಬಗ್ಗೆ ಅನೇಕ ಹಿತನುಡಿಗಳನ್ನು ತಿಳಿಸಿದ್ದಾರೆ. ಹಿಂದು ಸಮಾಜ ಹಾಗೂ ಹಿಂದುಗಳ ವಿಚಾರಗಳಿಗೆ ನನಗೆ ನೀವು ಉತ್ತರಾಧಿಕಾರಿಗಳು ಎಂದು ಬಹಿರಂಗವಾಗಿ ಘೋಷಿಸುತ್ತಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ’ ಎಂದರು.

‘ರಾಯಚೂರಿನಿಂದ ತಿರುಪತಿ, ತಿರುಪತಿಯಿಂದ ಬೆಂಗಳೂರು ಹಾಗೂ ಅಲ್ಲಿಂದ ಉಡುಪಿಗೆ ಹೋಗುವಾಗ ಅನಾರೋಗ್ಯ ಕಾಣಿಸಿತು. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿಯೇ ಶ್ರೀಗಳ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆ. ಸ್ವಾಮಿಗಳ ಆರೋಗ್ಯ ಚೇತರಿಕೆಗಾಗಿ ಶ್ರೀ ರಾಘವೇಂದ್ರಸ್ವಾಮಿ ಮಠಗಳ ಎಲ್ಲಾ ಶಾಖಾ ಮಠಗಳಲ್ಲಿ ವಿದ್ಯಾರ್ಥಿಗಳು, ವಿದ್ವಾಂಸರು ಹಾಗೂ ಸಾರ್ವಜನಿಕರ ಮೂಲಕ ಪೂಜೆ, ಪುನಸ್ಕಾರ ಹಾಗೂ ಪ್ರಾರ್ಥನೆ ಮಾಡಲಾಗಿತ್ತು. ಕೊನೆಗೂ ಶ್ರೀಗಳು ಇಹಲೋಕ ಯಾತ್ರೆ ಅಂತಿಮಗೊಳಿಸಿದ್ದು ಹಿಂದುಗಳಿಗೆ ಅಘಾತಕಾರಿ ವಿಷಯ’ ಎಂದು ತಿಳಿಸಿದರು.

‘ಇಹಲೋಕದಲ್ಲಿ ಪರಿಪೂರ್ಣವಾದ ಧರ್ಮಶ್ರದ್ಧೆ, ದೇಶದ ಮೂಲೆಮೂಲೆಗಳಲ್ಲಿ ಮಧ್ವಾಚಾರ್ಯರ ಸಿದ್ಧಾಂತವನ್ನು ವಿವಿಧ ಭಾಷೆಗಳಲ್ಲಿಯೂ ಪ್ರಚಾರ ಮಾಡಿದ್ದಾರೆ. ಎಲ್ಲರಿಗೂ ಮಧ್ವಾಚಾರ್ಯರ ಶಾಸ್ತ್ರಗಳನ್ನು ಉಣಬಡಿಸಿದ್ದಾರೆ. ಅನೇಕ ಸಂಘ–ಸಂಸ್ಥೆಗಳನ್ನು ಕಟ್ಟಿದ್ದಾರೆ. ಎಲ್ಲ ರೀತಿಯ ಮಠಗಳ ಸ್ವಾಮೀಜಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಯಾವುದೇ ಮಠದಲ್ಲಿ ಭಿನ್ನಾಭಿಪ್ರಾಯ ಬಂದಾಗ, ಹಿರಿಯರಾಗಿ ಸೌಹಾರ್ದತೆ ಕಾಪಾಡಲು ಪೂರ್ಣಪ್ರಮಾಣದಲ್ಲಿ ಸಮಯ ತೊಡಗಿಸಿಕೊಳ್ಳುತ್ತಿದ್ದರು’ ಎಂದು ಸುಬುಧೇಂದ್ರ ತೀರ್ಥರು ಸ್ಮರಿಸಿದರು.

‘ವಿದ್ವತ್‌ ಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಾವಿರಾರು ವಿದ್ವಾಂಸರನ್ನು ನಿರ್ಮಾಣ ಮಾಡಿದ್ದಾರೆ’ ಎಂದರು.

‘ಮುಖ್ಯವಾಗಿ ಹಿಂದು ಸಮಾಜ ಸದೃಢವಾಗಬೇಕು. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಎಲ್ಲ ಕಡೆಗಳಲ್ಲಿ ಮಠಮಠಗಳ ಸಾಮರಸ್ಯ ಉಂಟಾಗಬೇಕು ಎನ್ನುವ ಕಳಕಳಿಯ ಅಭಿಲಾಷೆಗಳನ್ನು ತಿಳಿಸಿದ್ದಾರೆ’

‘ಎಲ್ಲ ಅಭಿಮಾನಿಗಳು, ಪಾರಮಾರ್ಥಿಕ ಲಾಭ ಪಡೆದವರೆಲ್ಲರೂ ಶ್ರೀಗಳ ಆಸೆಯಂತೆ ಒಂದು ಹೆಜ್ಜೆ ಮುಂದೆ ಇಟ್ಟಾಗ ಅವರ ಆತ್ಮಕ್ಕೆ ಲಭಿಸುತ್ತದೆ. ಶತಮಾನ ಕಂಡ ಸಾಧಕರು. ಅವರ ಸ್ಫೂರ್ತಿ ಎಲ್ಲಾ ಸಮಾಜಕ್ಕೆ, ಪೀಠ ಪರಂಪರೆಯ ಯತಿಗಳಿಗೆ ಹಾಗೂ ಹಿಂದು ಸಂಘಟಕರಿಗೆ ಇರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT