ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಟೈಗರ್ ಟಾಯ್ಲೆಟ್‌?: ಉಡುಪಿಯಲ್ಲಿ ನಿರ್ಮಾಣವಾಗುತ್ತಿದೆ ವಿನೂತನ ಶೌಚಾಲಯ

ಉಡುಪಿಯಲ್ಲಿ ಪ್ರಾಯೋಗಿಕ ಅನುಷ್ಠಾನ
Last Updated 17 ಅಕ್ಟೋಬರ್ 2019, 1:58 IST
ಅಕ್ಷರ ಗಾತ್ರ

ಉಡುಪಿ: ಶೌಚಾಲಯಗಳ ಗುಂಡಿಯಲ್ಲಿ ಸಂಗ್ರಹವಾಗುವ ಮಲ, ಭೂಮಿಯ ಒಡಲು ಸೇರಿ ಅಂತರ್ಜಲ ಕಲುಷಿತವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಟೈಗರ್ ಟಾಯ್ಲೆಟ್‌‌’ಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.

ಇದರ ಭಾಗವಾಗಿ ಉಡುಪಿಯಲ್ಲಿ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನವಾಗಿದೆ.

ಸ್ವಚ್ಛ ಭಾರತ್ ಮಿಷನ್‌ ಅಡಿ ಜಿಲ್ಲೆಯ ಕಡ್ತಲ ಹಾಗೂ ಅಂಬಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಕುಟುಂಬಗಳಿಗೆ ಉಚಿತವಾಗಿ ಟೈಗರ್ ಟಾಯ್ಲೆಟ್‌ಗಳನ್ನು (ವರ್ಮಿ ಫಿಲ್ಟರ್‌ ಕಾಂಪೋಸ್ಟಿಂಗ್ ಶೌಚಾಲಯ) ನಿರ್ಮಿಸಿ ಕೊಡಲಾಗಿದೆ.

ಏನಿದು ಟೈಗರ್ ಟಾಯ್ಲೆಟ್‌?: ಪ್ರಸ್ತುತ ಇರುವ ಶೌಚಾಲಯಗಳಲ್ಲಿ ಮಲ ಸಂಗ್ರಹ ಗುಂಡಿ (ಪಿಟ್‌) ಆಳವಾಗಿದ್ದು, ಇಲ್ಲಿ ಸಂಗ್ರಹವಾಗುವ ಮಲದ ದ್ರವ ಭೂಗರ್ಭ ಸೇರಿ ಅಂತರ್ಜಲ ಕಲುಷಿತವಾಗುತ್ತಿದೆ.

ಜತೆಗೆ, ಪಿಟ್‌ ಭರ್ತಿಯಾದರೆ,ಹೂಳು ತೆಗೆಯುವುದು ಕಷ್ಟ ಹಾಗೂ ದುಬಾರಿ. ಈ ಎಲ್ಲ ಸಮಸ್ಯೆಗಳಿಗೆ ಟೈಗರ್ ಟಾಯ್ಲೆಟ್‌ಗಳು ಪರಿಹಾರವಾಗಬಲ್ಲವು ಎನ್ನುತ್ತಾರೆ ಸ್ವಚ್ಛ ಭಾರತ್ ಮಿಷನ್‌ ಜಿಲ್ಲಾ ಸಮಾಲೋಚಕ ರಘುನಾಥ್.

ನಿರ್ಮಾಣ ಹೇಗೆ?: ಟೈಗರ್ ಟಾಯ್ಲೆಟ್‌ 3x4 ಅಡಿ ಅಳತೆ ವಿಸ್ತೀರ್ಣದಲ್ಲಿ 5 ಅಡಿ ಆಳದ ಶೌಚ ಗುಂಡಿ ಒಳಗೊಂಡಿರುತ್ತದೆ. ಕ್ರಮವಾಗಿ 100, 40, 20 ಹಾಗೂ 6 ಎಂಎಂ ಗಾತ್ರದ ಜೆಲ್ಲಿ ಬಳಸಿ ಎರಡೂವರೆ ಅಡಿ ಸೋಸು ಹಾಸಿಗೆ (ಫಿಲ್ಟರ್ ಬೆಡ್‌) ನಿರ್ಮಿಸಲಾಗುವುದು. ಬೆಡ್‌ನ ಮೇಲೆ ಸಾವಯವ ಗೊಬ್ಬರ ಹರಡಿ, ಎರೆಹುಳು ಪ್ರಭೇದದ (ಟೈಗರ್‌ ಅರ್ಥ್‌ ವರ್ಮ್ಸ್‌) ಜೀವಿಗಳನ್ನು ಬಿಡಲಾಗುವುದು.

‘ಈ ಹುಳುಗಳು ಶೌಚಾಲಯದ ಗುಂಡಿಗೆ ಬಂದು ಬೀಳುವ ಮಲವನ್ನು ತಿಂದು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ. ಮಲದಿಂದ ಪ್ರತ್ಯೇಕ ಗೊಂಡ ದ್ರವ ಫಿಲ್ಟರ್ ಬೆಡ್‌ ಮೂಲಕ ಹಾದು ಭೂಮಿಗೆ ಇಂಗುವುದರಿಂದ ಅಂತರ್ಜಲ ಕಲುಷಿತವಾಗುವುದಿಲ್ಲ. ಗುಂಡಿ ತುಂಬಿದಾಗ ಗೊಬ್ಬರವನ್ನು ಹೊರತೆಗೆದು ಬಳಸಬಹುದು. ವಾಸನೆಯೂ ಇರುವುದಿಲ್ಲ’ ಎನ್ನುತ್ತಾರೆ ರಘುನಾಥ್‌.

ಈಗಾಗಲೇ ಅಸ್ತಿತ್ವದಲ್ಲಿರುವ ಶೌಚಾಲಯಗಳನ್ನು ಟೈಗರ್ ಟಾಯ್ಲೆಟ್‌ಗಳನ್ನಾಗಿ ಬದಲಿಸಬಹುದು. ಆದರೆ, ಕೆಲವು ಇತಿ–ಮಿತಿಗಳು ಇವೆ. ಶೌಚಾಲಯಕ್ಕೆ ಹೋದಾಗ 3 ರಿಂದ 5 ಲೀಟರ್‌ ಮಾತ್ರ ನೀರು ಬಳಸಬೇಕು. ಪ್ರತಿದಿನಶೌಚಾಲಯ ಬಳಕೆ ಕಡ್ಡಾಯ.

‘ಕೇವಲ ಮೂತ್ರ ಮಾಡುವ ಉದ್ದೇಶಕ್ಕೆ ಬಳಸುವಂತಿಲ್ಲ. ಶೌಚಾಲಯದ ಒಳಗೆ ಧೂಮಪಾನ, ತಂಬಾಕು ಜಗಿಯುವಂತಿಲ್ಲ.ಪ್ಲಾಸ್ಟಿಕ್, ಸ್ಯಾನಿಟರಿ ಪ್ಯಾಡ್ ಹಾಕುವಂತಿಲ್ಲ. ಒಳಗೆ ಸ್ನಾನ ಮಾಡಬಾರದು. ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರೈಮ್‌ಮೂವ್‌ ಸಂಸ್ಥೆ ತಂತ್ರಜ್ಞಾನ

'ಟೈಗರ್ ಟಾಯ್ಲೆಟ್‌/ ವರ್ಮಿ ಫಿಲ್ಟರ್‌ ಕಾಂಪೋಸ್ಟಿಂಗ್ ತಂತ್ರಜ್ಞಾನವನ್ನು ಮಹಾರಾಷ್ಟ್ರದ ಪುಣೆಯ ಪ್ರೈಮ್ ಮೂವ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಮಲವನ್ನು ತಿಂದು ವೇಗವಾಗಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವುದು ಟೈಗರ್ ಅರ್ಥ್‌ ವರ್ಮ್ಸ್‌ ಹುಳುಗಳ ವಿಶೇಷತೆ. ಈ ಹುಳುಗಳನ್ನು ಮಾರಾಟ ಮಾಡುವ ಪೇಟೆಂಟ್‌ ಅನ್ನು ಪುಣೆಯ ಪ್ರೈಮ್‌ ಮೂವ್‌ ಸಂಸ್ಥೆ ಮಾತ್ರ ಹೊಂದಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಟೈಗರ್ ಟಾಯ್ಲೆಟ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಬಹುದು’ ಎನ್ನುತ್ತಾರೆ ರಘುನಾಥ್‌.

**

ಮುಖ್ಯಾಂಶಗಳು

* ಅಂತರ್ಜಲ ಕಲುಷಿತ ತಡೆಗೆ ಉಪಾಯ

* ಶೌಚಾಲಯ ನಿರ್ಮಾಣಕ್ಕೆ ₹ 7,000 ವೆಚ್ಚ

* ಮಲ ಸಾವಯವ ಗೊಬ್ಬರವಾಗಿ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT