ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರ ಸಾವು

7
ನಗರದ ಯುಜಿಡಿ ಕಾಮಗಾರಿ ಪರಿಕಲ್ಪನೆಯೇ ಇಲ್ಲದ ಗ್ರಾಮೀಣ ಕೂಲಿ ಕಾರ್ಮಿಕರು

ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರ ಸಾವು

Published:
Updated:

ಶಿವಮೊಗ್ಗ: ನಿರ್ಮಾಣ ಹಂತದಲ್ಲಿರುವ ಯುಜಿಡಿ ಕಾಮಗಾರಿ ಸಂಪರ್ಕ ಸರಾಗಗೊಳಿಸುವ ಕಾರ್ಯಕ್ಕಾಗಿ ಆರ್‌ಎಂಎಲ್‌ ನಗರ ಎರಡನೇ ಹಂತದ ಮ್ಯಾನ್‌ಹೋಲ್‌ಗೆ ಸೋಮವಾರ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಬಿಳಚೋಡು ಹೋಬಳಿ ಬೆಂಚಿಕಟ್ಟೆಯ ಅಂಜನಪ್ಪ (18), ವೆಂಕಟೇಶ (40) ಮೃತ ಕಾರ್ಮಿಕರು.

ಎರಡು ದಿನಗಳ ಹಿಂದಷ್ಟೇ ಬೆಂಚಿಕಟ್ಟೆಯ 11 ಜನ, ಚಿತ್ರದುರ್ಗ ತಾಲ್ಲೂಕು ಅನ್ನೇಹಾಳ್‌ನ 13 ಜನ ಕಾರ್ಮಿಕರು ಮೇಸ್ತ್ರಿ ತಿಪ್ಪೇಶಿ ಜತೆಗೆ ಶಿವಮೊಗ್ಗಕ್ಕೆ ಬಂದಿದ್ದರು. ನಗರದ ರೈಲ್ವೆ ಮೇಲು ಸೇತುವೆ ಬಳಿ ವಾಸ್ತವ್ಯ ಹೋಡಿದ್ದ ಅವರು ಸೋಮವಾರ ಆರ್‌ಎಂಎಲ್‌ ನಗರದ ಬಳಿ ಕೆಲಸ ಮಾಡುತ್ತಿದ್ದರು.

ಮಧ್ಯಾಹ್ನ 2.30ರ ಸುಮಾರಿಗೆ ಒಂದು ತಂಡ 18ನೇ ಮ್ಯಾನ್‌ಹೋಲ್ ಒಳಗೆ ಕಟ್ಟಿಕೊಂಡಿದ್ದ ಮಣ್ಣು, ಕಸ, ನೀರು ಮೇಲಕ್ಕೆ ಹಾಕುತ್ತಿದ್ದಾಗ ಈ ಇಬ್ಬರು  19ನೇ ಮ್ಯಾನ್‌ಹೋಲ್ ಬಳಿ ಬಂದು ಮುಚ್ಚಳ ತೆಗೆದಿದ್ದಾರೆ. ನಂತರ ಮುಚ್ಚಳದ ಕಬ್ಬಿಣದ ರಾಡ್‌ಗೆ ಹಗ್ಗ ಕಟ್ಟಿ ಅಂಜನಪ್ಪ ಕೆಳಗೆ ಇಳಿದಿದ್ದಾರೆ. ಹಿಡಿದುಕೊಂಡಿದ್ದ ಅಗ್ಗ ಜಾರಿ ನೀರಿಗೆ ಬಿದಿದ್ದಾರೆ. ಸುಮಾರು 20 ಅಡಿಯಷ್ಟು ಆಳ ಇದ್ದ ಕಾರಣ ಮೇಲೆ ಬರಲು ಸಾಧ್ಯವಾಗಿಲ್ಲ. ಅವನನ್ನು ರಕ್ಷಿಸಲು ಹೋದ ವೆಂಕಟೇಶ ಅವರೂ ಮುಳಗಿದ್ದಾರೆ. ಸ್ಥಳೀಯರ ಸಹಕಾರದಿಂದ ತಕ್ಷಣವೇ ಇಬ್ಬರನ್ನು ಮೇಲೆತ್ತಿದರೂ ಬದುಕಿ ಉಳಿಯಲಿಲ್ಲ ಎಂದು ಸಹ ಕೂಲಿ ಕಾರ್ಮಿಕರು ಅಳಲು ತೋಡಿಕೊಂಡರು.

ಅಪ್ಪನ ಕಣ್ಣೆದುರೇ ಶವವಾದ ಮಗ:

ಬೆಂಚಿಕಟ್ಟೆಯ ಮೂರ್ತಪ್ಪ ಅವರಿಗೆ ಮೃತ ಅಂಜನಪ್ಪ ಸೇರಿ ಇಬ್ಬರು ಪುತ್ರರು. ಮತ್ತೊಬ್ಬ ಮಗ ಧನಂಜಯ ಜೆಸಿಬಿ ಚಾಲಕ. ಮೂರ್ತಪ್ಪ ಅವರು ಮಗ ಅಂಜನಪ್ಪ ಅವರ ಜತೆ ಕೂಲಿ ಕೆಲಸಕ್ಕೆ ಶಿವಮೊಗ್ಗಕ್ಕೆ ಬಂದಿದ್ದರು. ಘಟನೆ ನಡೆದಾಗ ಪಕ್ಕದ ಮ್ಯಾನ್‌ಹೋಲ್ ಬಳಿ ಕೆಲಸ ಮಾಡುತ್ತಿದ್ದರು. ಅವರು ಓಡಿ ಬರುವಷ್ಟರಲ್ಲಿ ಕಣ್ಣೇದುರೆ ಮಗ ಶವವಾಗಿದ್ದ. ಮಗದ ಶವದ ಎದುರು ಕುಳಿತು ರೋಧಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು. 

ವೆಂಕಟೇಶ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರಿ ಇದ್ದಾರೆ. ಅವರೆಲ್ಲ ಮೂಲತಃ ಗಾರೆ, ಮಣ್ಣಿನ ಕೆಲಸ ಮಾಡಿಕೊಂಡಿದ್ವರು. ದಿನಕ್ಕೆ ₨ 450 ಕೂಲಿಯಂತೆ ಮಾತನಾಡಿಕೊಂಡು ಅವರನ್ನು ನಗರದ ಯುಜಿಡಿ ಕೆಲಸಕ್ಕೆ ಕರೆತರಲಾಗಿತ್ತು. 

₨ 115 ಕೋಟಿ ಕಾಮಗಾರಿ:

ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಐದು ವರ್ಷಗಳ ಹಿಂದೆ ಶಿವಮೊಗ್ಗ ಸಮಗ್ರ ಒಳಚರಂಡಿ ಯೋಜನೆ ಅಡಿ ₨ 115 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿತ್ತು. ಮೊದಲ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದ ನಂತರ ಹೈದರಾಬಾದ್‌ನ ವೆಂಕಟಸ್ವಾಮಿ ಅಸೋಸಿಯೇಟ್ಸ್‌ಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು (ಇನ್ನೂ ಮನೆಗಳಗೆ ಸಂಪರ್ಕ ಕಲ್ಪಿಸಿಲ್ಲ), ಕೊಳವೆ ಮಾರ್ಗದಲ್ಲಿ ಕಟ್ಟಿಕೊಟ್ಟಿದ್ದ ಮಣ್ಣು, ಕಲ್ಮಶ ಹೊರತೆಗೆದು ಸರಾಗಗೊಳಿಸುವ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕೆ ಕಾರ್ಮಿಕರು ಬಂದಿದ್ದರು.

ಗುತ್ತಿಗೆದಾರರು, ಎಂಜಿನಿಯರ್‌ಗಳ ನಿರ್ಲಕ್ಷ್ಯ: ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವ ಮೊದಲು ಗುತ್ತಿಗೆದಾರರು, ಒಳಚರಂಡಿ ಮಂಡಳಿ ಎಂಜಿನಿಯರ್‌ಗಳು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಯಾವೊಬ್ಬ ಮೇಲ್ವಿಚಾರಕರು ಸ್ಥಳದಲ್ಲಿ ಇರದೇ ಅನುಭವ ಇಲ್ಲದ ಕಾರ್ಮಿಕರನ್ನು ಕೆಲಸಕ್ಕೆ ಬಿಡಲಾಗಿದೆ. ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಮೇಯರ್ ನಾಗರಾಜ ಕಂಕಾರಿ ಆರೋಪಿಸಿದರು.

ಕೆಲವು ಮನೆಗಳಿಗೆ ಅಕ್ರಮವಾಗಿ ಯುಜಿಡಿ ಸಂಪರ್ಕ ನೀಡಲಾಗಿದೆ. ಇದರಿಂದ ಮುಚ್ಚಿದ ಯಿಜಿಡಿ ಮ್ಯಾನ್‌ಹೋಲ್‌ನಲ್ಲಿ ವಿಷಾನಿಲ ಸೃಷ್ಟಿಯಾಗಿ ಉಸಿರುಕಟ್ಟಿ ಮಥರಪಟ್ಟಿದ್ದಾರೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಸ್ಥಳದಲ್ಲಿದ್ದ ಕೆಲವರು ಒತ್ತಾಯಿಸಿದರು.

ನಿಯಮದಂತೆ ಮೃತ ಕಾರ್ಮಿಕರಿಗೆ ತಲಾ ₨ 10 ಲಕ್ಷ ಪರಿಹಾರ ದೊರೆಯಲಿದೆ. ಮರಣೋತ್ತರ ಪರೀಕ್ಷೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.\

ಇದು ಮೂರನೇ ಪ್ರಕರಣ

ಇದು ಶಿವಮೊಗ್ಗ ನಗರದಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ಕಾರ್ಮಿಕರು ಮೃತಪಟ್ಟ ಮೂರನೇ ಪ್ರಕರಣ. 1981ರಲ್ಲಿ ರೈಲು ನಿಲ್ದಾಣದ ಬಳಿ ನಾಲ್ಕು ಜನ, 2012ರಲ್ಲಿ ರಾಯಲ್‌ ಆರ್ಕಿಡ್‌ ಹೋಟೆಲ್‌ ಬಳಿ ಮೂವರು ಮೃತಪಟ್ಟಿದ್ದರು. 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !