ಕಾಂಗ್ರೆಸ್‌ಗೆ ತಪ್ಪಿದ ಅಜ್ಞಾತವಾಸ: ಉಗ್ರಪ್ಪಗೆ ಒಲಿದ ಬಳ್ಳಾರಿ

7
‘ಬಳ್ಳಾರಿ ಮಗಳು’ ಶಾಂತಾ ಮನೆಗೆ

ಕಾಂಗ್ರೆಸ್‌ಗೆ ತಪ್ಪಿದ ಅಜ್ಞಾತವಾಸ: ಉಗ್ರಪ್ಪಗೆ ಒಲಿದ ಬಳ್ಳಾರಿ

Published:
Updated:
Deccan Herald

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ‘ಹೊರಗಿನ’ ವಿ.ಎಸ್‌.ಉಗ್ರಪ್ಪ ಅವರಿಗೇ ಕ್ಷೇತ್ರ ಒಲಿಯಿತು. ‘ಬಳ್ಳಾರಿಯ ಮಗಳು’ ಎಂಬ ಅಸ್ತ್ರವನ್ನು ನೆಚ್ಚಿಕೊಂಡಿದ್ದ ಬಿಜೆಪಿಯ ಸ್ಥಳೀಯ ಅಭ್ಯರ್ಥಿ ಜೆ. ಶಾಂತಾ ಅವರನ್ನು ಕ್ಷೇತ್ರ ಕೈ ಹಿಡಿಯಲಿಲ್ಲ. ‘ಕ್ಷೇತ್ರಕ್ಕೆ ಸ್ಥಳೀಯರಲ್ಲ’ ಎಂಬ ಮಿತಿ ಮೀರಿದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಉಗ್ರಪ್ಪ ಸರ್ಕಾರಕ್ಕೆ ದೀಪಾವಳಿಯ ಬೋನಸ್‌ ನೀಡಿದ್ದಾರೆ.

ಸಹೋದರಿಯ ಪರವಾಗಿ ಯುದ್ಧೋಪಾದಿಯಲ್ಲಿ ಪಕ್ಷದ ಏಕಾಂಗಿ ವೀರನಂತೆ ಪ್ರಚಾರ ನಡೆಸಿದ ಅವರ ಸಹೋದರ, ಶಾಸಕ ಬಿ.ಶ್ರೀರಾಮುಲು ಅವರ ವರ್ಚಸ್ಸು ಕೂಡ ವಿಫಲವಾಯಿತು. ಆ ಮೂಲಕ ಸತತ ಮೂರು ಚುನಾವಣೆಗಳಲ್ಲಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದ ಬಿಜೆಪಿ ಕೂಡ ಮಂಕಾಯಿತು.

ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 14ರಲ್ಲಿ ಸತತವಾಗಿ ಗೆದ್ದಿದ್ದ ಕಾಂಗ್ರೆಸ್‌ 14 ವರ್ಷದಿಂದ ಅಜ್ಞಾತವಾಸದಲ್ಲಿತ್ತು. ಈ ಉಪಚುನಾವಣೆಯು ಅದನ್ನು ಕೊನೆಗಾಣಿಸಿತು.

ಮತ ಎಣಿಕೆ ನಡೆದ ನರಕಚತುರ್ದಶಿಯ ದಿನವಾದ ಮಂಗಳವಾರ ಕಾಂಗ್ರೆಸ್‌ಗೆ ಅಧಿಕಾರದ ಬಾಗಿಲು ತೆರೆದರೆ ಶಾಂತಾ, ಶ್ರೀರಾಮುಲು ಸೇರಿದ ಬಿಜೆಪಿ ಗುಂಪಿಗೆ ಕ್ಷೇತ್ರದ ಮೇಲಿನ ಹಿಡಿತವನ್ನು ತಪ್ಪಿಸಿತು.

ನಾಮಪತ್ರ ಸಲ್ಲಿಸಿದ ಮೊದಲ ದಿನದಿಂದಲೂ ಬಿಜೆಪಿ ಉಗ್ರಪ್ಪ ವಿರುದ್ಧ ಅವರು ‘ಹೊರಗಿನವರು’ ಎಂಬ ಆರೋಪ ಮಾಡುತ್ತಾ, ಶಾಂತಾ ‘ಮನೆಮಗಳು’ ಎಂದು ಪ್ರತಿಪಾದಿಸಿತ್ತು. ಇದೊಂದೇ ಬಿಜೆಪಿಯನ್ನು ಗೆಲ್ಲಿಸುವ ಪ್ರಮುಖ ಅಂಶ, ಪ್ರಧಾನಿ ಮೋದಿ ಅಲೆ, ಶ್ರೀರಾಮುಲು ವರ್ಚಸ್ಸು ಸೇರಿದರೆ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿತ್ತು.

ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿಯಾಗಿ ಉಗ್ರಪ್ಪನವರ ವಿದ್ಯಾರ್ಹತೆ, ರಾಜಕೀಯ ಅನುಭವ, ವಾಕ್ಪಟುತ್ವ, ವಿಧಾನಪರಿಷತ್ತಿನಲ್ಲಿ ಅವರ ಕಾರ್ಯವೈಖರಿ, ವಾಲ್ಮೀಕಿ ಸಮುದಾಯದ ಹಿತದೃಷ್ಟಿಯಿಂದ ಅವರು ಮಾಡಿರುವ ಕೆಲಸಗಳನ್ನು ಮುಂದೊಡ್ಡಿತ್ತು. ಕಾಂಗ್ರೆಸ್‌ ಸಂಸದರು, ಸಮ್ಮಿಶ್ರ ಸರ್ಕಾರದ ಬಹುತೇಕ ಸಚಿವರು, ಶಾಸಕರು ಕ್ಷೇತ್ರದಲ್ಲೇ ಬೀಡು ಬಿಟ್ಟು ಪ್ರಚಾರ ನಡೆಸಿದ್ದು ಕೂಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ವರ್ಚಸ್ಸು ಹೆಚ್ಚಲು ಕಾರಣವಾಯಿತು.

ಶ್ರೀರಾಮುಲು ವರ್ಸಸ್‌ ಸಿದ್ದರಾಮಯ್ಯ: ಪ್ರಚಾರ ಸಮಯದಲ್ಲಿ ನಡೆದ ಶಾಸಕ ಶ್ರೀರಾಮುಲು ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವಿನ ವಾಗ್ವಾದ ಕೂಡ ಚುನಾವಣೆಯ ಕಾವನ್ನು ಹೆಚ್ಚಿಸಿತ್ತು. ಇವರಿಬ್ಬರ ನಡುವೆ ಅಭ್ಯರ್ಥಿಗಳಾಗಿ ಉಗ್ರಪ್ಪ ಮತ್ತು ಶಾಂತಾ ಅವರು ಪಕ್ಕಕ್ಕೆ ಸರಿದಂತೆ ಕಂಡರೂ, ಚುನಾವಣೆ ಅಖಾಡಾ ಇವರಿಬ್ಬರ ಹೆಸರಿನಲ್ಲೇ ರಂಗೇರಿತ್ತು.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಜಿಲ್ಲೆಯ ಆರು ಕಾಂಗ್ರೆಸ್‌ ಶಾಸಕರ ಅಸಮಾಧಾನ, ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದ ಸಂಘಟನೆಯ ಕೊರತೆಯು ಉಗ್ರಪ್ಪ ಅವರ ಹಿನ್ನಡೆಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರವೂ ಹುಸಿಯಾಯಿತು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ಕೂಡ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ ಲಕ್ಷಣಗಳನ್ನೂ ಉಗ್ರಪ್ಪ ಗೆಲುವಿನಲ್ಲಿ ಕಾಣಬಹುದು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !