ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಿಲ ಭಾಗ್ಯ’ಕ್ಕೆ ತೈಲ ಕಂಪನಿಗಳಿಂದ ಕೊಕ್ಕೆ!

ರಾಜ್ಯದ ಯೋಜನೆ 1 ಲಕ್ಷ‌ ಸಂಪರ್ಕಕ್ಕಷ್ಟೆ ಸೀಮಿತ
Last Updated 23 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಉಜ್ವಲ’ (ಪಿಎಂಯುವೈ) ಯೋಜನೆಗೆ ಸಡ್ಡು ಹೊಡೆದು ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ತೈಲ ಕಂಪನಿಗಳು ಕೊಕ್ಕೆ ಹಾಕಿವೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ‘ ಯೋಜನೆಯಡಿ 10 ಲಕ್ಷ ಫಲಾನುಭವಿಗಳಿಗೆ ಅಡುಗೆ ಅನಿಲದ ಸಂಪರ್ಕ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ನಿರ್ದೇಶನದ ಅನ್ವಯ ಕೇವಲ ಒಂದು ಲಕ್ಷ ಫಲಾನುಭವಿಗಳಿಗೆ ಮಾತ್ರ ಗ್ಯಾಸ್‌ ಸಂಪರ್ಕ ನೀಡಲು ಕಂಪನಿಗಳು ಒಪ್ಪಿವೆ.

ಒಂದು ಲಕ್ಷಕ್ಕಿಂತ ಹೆಚ್ಚಿನ ಸಂಪರ್ಕ ನೀಡಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅನುಮತಿ ಪಡೆಯಬೇಕು ಎಂದೂ ಕಂಪನಿಗಳು ಸ್ಪಷ್ಟಪಡಿಸಿವೆ. ಆದರೆ, ‘ಅನಿಲ ಸಂಪರ್ಕ ಕೇಂದ್ರದ ಸ್ವಾಮ್ಯಕ್ಕೆ ಸಂಬಂಧಪಟ್ಟಿದ್ದು. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ರಾಜ್ಯಕ್ಕೆ ಅವಕಾಶ ಇಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಗ್ಯಾಸ್‌ ಸಂಪರ್ಕ ನೀಡಲು ಅವಕಾಶ ಇಲ್ಲ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟಪಡಿಸಿದ್ದಾರೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ 3.24 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. 85,592 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಬ್ಯಾಂಕ್‌ ಡಿಮ್ಯಾಂಡ್‌ ಡ್ರಾಫ್ಟ್‌ ತೆಗೆಯಲಾಗಿದ್ದು, ಈ ಪೈಕಿ, 65 ಸಾವಿರ ಫಲಾನುಭವಿಗಳಿಗೆ ಸಂಪರ್ಕ ನೀಡಲಾಗಿದೆ. ಆದರೆ, ಯೋಜನೆಯಡಿ ವಿತರಿಸಲು ಎಂಎಸ್‌ಐಎಲ್‌ ಮೂಲಕ ಆಹಾರ ಇಲಾಖೆ ಒಂದು ಲಕ್ಷ ಗ್ಯಾಸ್‌ ಸ್ಟೌ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.

ಅಡುಗೆ ಅನಿಲ ಸಂಪರ್ಕರಹಿತ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲು, ಕೇಂದ್ರ ಸರ್ಕಾರ 2016ರಲ್ಲಿ ಪಿಎಂಯುವೈ ಆರಂಭಿಸಿತ್ತು. 2011ರ ಸಾಮಾಜಿಕ ಆರ್ಥಿಕ ಸಮೀಕ್ಷೆಯಡಿ ಗುರುತಿಸಿದ್ದ ಬಿಪಿಎಲ್‌ ಕುಟುಂಬಗಳಿಗೆ ಆ ಯೋಜನೆಯಡಿ ಗ್ಯಾಸ್‌ ಸಂಪರ್ಕ ನೀಡಲಾಗಿತ್ತು.

ವಿತರಕರಿಂದ ಅಭಿಯಾನ: ಮೊದಲ ಯೋಜನೆಯಡಿ ಸಂಪರ್ಕ ಸಿಗದ ಎಲ್ಲ ಬಿಪಿಎಲ್‌ ಕುಟುಂಬಗಳನ್ನು ಗುರುತಿಸಿ ಸಂಪರ್ಕ ಕಲ್ಪಿಸಲು ಇದೀಗ ‘ಉಜ್ವಲ– 2’ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ವಿವಿಧ ಕಾರಣಗಳಿಗಾಗಿ ಹಲವು ಕುಟುಂಬಗಳು ಇನ್ನೂ ಗ್ಯಾಸ್‌ ಸಂಪರ್ಕ ಪಡೆದುಕೊಂಡಿಲ್ಲ. ಅಂಥ ಕುಟುಂಬಗಳನ್ನು ಪತ್ತೆ ಹಚ್ಚಿ ಎಲ್‌ಪಿಜಿ ಸಂಪರ್ಕ ನೀಡುವ ಮೂಲಕ ಶೇ 100 ಸಾಧನೆ ಮಾಡುವುದು ಈ ಯೋಜನೆಯ ಗುರಿ. ಈ ಉದ್ದೇಶದಿಂದ ಗ್ಯಾಸ್‌ ವಿತರಕರು ಮನೆಮನೆಗೆ ತೆರಳಿ ಅನಿಲ ಸಂಪರ್ಕ ನೀಡುವ ಅಭಿಯಾನ ಆರಂಭಿಸಿದ್ದಾರೆ. ಬಿಪಿಎಲ್‌ ಕಾರ್ಡ್‌ ಇಲ್ಲದವರು 14 ಷರತ್ತುಗಳಿರುವ ಫಾರಂಗೆ ಸಹಿ ಹಾಕಿ ಸಂಪರ್ಕ ಪಡೆಯುವ ಸೌಲಭ್ಯವನ್ನೂ ಒದಗಿಸಲಾಗಿದೆ.

ಹಣ ಉಳಿಕೆ: ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಅಗತ್ಯವಾದ ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲೂ ಹಣ ತೆಗೆದಿಡಲಾಗಿದೆ. ಆದರೆ ಅನಿಲ ಸಂಪರ್ಕ ಅನುಮತಿ ಕಡಿತಗೊಂಡಿದ್ದರಿಂದ ಈ ಹಣ ಉಳಿಕೆಯಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ 3.24 ಲಕ್ಷ ಅರ್ಜಿ

85,592 ಫಲಾನುಭವಿಗಳ ಡಿಡಿ ಸಿದ್ಧ

ಈವರೆಗೆ 65 ಸಾವಿರ ಫಲಾನುಭವಿಗಳಿಗೆ ಗ್ಯಾಸ್‌ ಸಂಪರ್ಕ

* ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು 1 ಲಕ್ಷ ಸಂಪರ್ಕಕ್ಕೆ ಸೀಮಿತಗೊಳಿಸುವಂತೆ ತೈಲ ಕಂಪನಿಗಳು ಸೂಚಿಸಿವೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದೆ

- ಎಂ.ಸಿ. ಗಂಗಾಧರ, ಹೆಚ್ಚುವರಿ ನಿರ್ದೇಶಕ, ಆಹಾರ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT