ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪ್ರತಿಷ್ಠೆ ಮೆರೆಯುವುದನ್ನು ಬಿಡಿ: ಕೋರ್ಟ್‌

ಉಮಾಶ್ರೀ ವಿರುದ್ಧ ಹರತಾಳು ಹಾಲಪ್ಪ ಸಲ್ಲಿಸಿದ್ದ ಮೊಕದ್ದಮೆ ಇತ್ಯರ್ಥ
Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಬರ ಬಿದ್ದಿದೆ. ಜನ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಜನರಿಂದ ಆರಿಸಿ ಬಂದಿರುವ ನೀವು ಹೀಗೆ ಪರಸ್ಪರ ಕಚ್ಚಾಡುತ್ತಾ ಸ್ವಪತ್ರಿಷ್ಠೆ ಮೆರೆಯುವುದನ್ನು ಬಿಟ್ಟು ಕೈಲಾದಷ್ಟು ಜನಸೇವೆ ಮಾಡಿ’ ಎಂದು ಜನಪ್ರತಿನಿಧಿಗಳ ಕೋರ್ಟ್‌ ಶಾಸಕ ಹರತಾಳು ಹಾಲಪ್ಪ ಮತ್ತು ಕಾಂಗ್ರೆಸ್‌ ನಾಯಕಿ ಉಮಾಶ್ರೀ ಅವರಿಗೆ ಬುದ್ಧಿವಾದ ಹೇಳಿದೆ.

2014ರ ಫೆಬ್ರುವರಿ 16ರಂದು ಕಾಂಗ್ರೆಸ್‌ ಉಮಾಶ್ರೀ, ತುಮಕೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ನ ಮಹಿಳಾ ಸಮಾವೇಶದಲ್ಲಿ ಹಾಲಪ್ಪ ಅವರನ್ನು, ‘ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ ಮಾಡುವ ರೇಪಿಸ್ಟ್‌’ ಎಂದು ಟೀಕಿಸಿದ್ದರು. ಈ ಟೀಕೆಯನ್ನು ಆಕ್ಷೇಪಿಸಿ ಹಾಲಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣವನ್ನು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಶನಿವಾರ ನಡೆಸಿತು. ವಿಚಾರಣೆ ವೇಳೆ ಹಾಲಪ್ಪ ಮತ್ತು ಉಮಾಶ್ರೀ, ‘ವ್ಯಾಜ್ಯವನ್ನು ಕೋರ್ಟ್‌ ವ್ಯಾಪ್ತಿಯಿಂದ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ. ಆದ್ದರಿಂದ ವಿಚಾರಣೆ ಕೈಬಿಡಬೇಕು’ ಎಂದು ಅರ್ಜಿ ಸಲ್ಲಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ನಿಮ್ಮ ಅಧಿಕಾರ ಮತ್ತು ನನ್ನ ಹುದ್ದೆ ಯಾವುದೂ ಶಾಶ್ವತವಲ್ಲ. ನಮಗೆಲ್ಲಾ ಇರೋದೇ 70–80 ವರ್ಷ ಆಯಸ್ಸು. ಅದರಲ್ಲಿ ಮೂರನೇ ಒಂದು ಭಾಗ ನಿದ್ದೆಯಲ್ಲೇ ಕಳೆಯುತ್ತೇವೆ. ಸಿಕ್ಕ ಅವಕಾಶದಲ್ಲಿ ಒಂದಷ್ಟು ಜನಹಿತಕ್ಕಾಗಿ ದುಡಿಯಬೇಕು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಿಮ್ಮ ಘನತೆಗೆ ತಕ್ಕಂತೆ ವರ್ತಿಸಿ’ ಎಂದು ಸಲಹೆ ನೀಡಿದರು.

‘ರಾಜಕಾರಣಿಗಳು ಮರೆಯೋದ್ರಲ್ಲಿ ನಿಸ್ಸೀಮರು’
ನ್ಯಾಯಾಧೀಶ ಹುದ್ದಾರ ಅವರು ಅರ್ಜಿ ಮಾನ್ಯ ಮಾಡುತ್ತಿದ್ದಂತೆಯೇ ಉಮಾಶ್ರೀ ಪರ ವಕೀಲ ಸಿ.ಎಚ್‌.ಹನುಮಂತರಾಯ, ‘ರಾಜಕಾರಣಿಗಳು ಎಲ್ಲವನ್ನೂ ಬಹುಬೇಗನೇ ಮರೆಯೋದರಲ್ಲಿ ನಿಸ್ಸೀಮರು’ ಎಂದರು.

ಇಂಗ್ಲಿಷ್‌ನ ಖ್ಯಾತ ಸಾಹಿತಿ ಸ್ಯಾಮ್ಯುಯಲ್‌ ಜಾನ್ಸನ್ ಅವರ ‘ದಿ ಆರ್ಟ್‌ ಆಫ್‌ ಫರ್ಗೆಟ್‌ಫುಲ್‌ನೆಸ್‌’ ಪ್ರಬಂಧವನ್ನು ವಿವರಿಸಿ, ‘ನಮ್ಮ ರಾಜಕಾರಣಿಗಳು ಜಾನ್ಸನ್ ಅವರ ಪ್ರಬಂಧವನ್ನು ಸಿದ್ಧಿಮಾಡಿಕೊಂಡಿದ್ದಾರೆ’ ಎನ್ನುತ್ತಿದ್ದಂತೆಯೇ ಹುದ್ದಾರ ಅವರು ನಕ್ಕು ಸುಮ್ಮನಾದರು.

‘ಆದದ್ದನ್ನೆಲ್ಲಾ ಮರೆತಿದ್ದೇವೆ’
‘ನಾವು ಬೇರೆ ಬೇರೆ ಪಕ್ಷಕ್ಕೆ ಸೇರಿದ ರಾಜಕಾರಣಿಗಳಾದರೂ ನಮ್ಮಲ್ಲಿ ಕೊಡು–ಕೊಳ್ಳುವಿಕೆ ಇರುತ್ತದೆ. ಹಾಗಾಗಿ ಆರೋಗ್ಯಪೂರ್ಣ ಜನಸೇವೆಯ ದೃಷ್ಟಿಯಿಂದ ಆದದ್ದನ್ನೆಲ್ಲಾ ಮರೆತಿದ್ದೇವೆ’ ಎಂದು ಫಿರ್ಯಾದುದಾರರು ಮತ್ತು ಆರೋಪಿಗಳು ಅರ್ಜಿಯಲ್ಲಿ ವಿವರಿಸಿದ್ದಾರೆ.

‘ದಿನ ಬೆಳಗಾದರೆ ನಾವು ಒಬ್ಬರನ್ನೊಬ್ಬರು ಸಂಧಿಸಬೇಕಾಗುತ್ತದೆ. ಹೀಗಾಗಿ ಇಂತಹ ವ್ಯಾಜ್ಯ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ದೂರು ಹಿಂಪಡೆಯುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT