‘ಅನರ್ಹಗೊಳಿಸಲು ಇವರು ಯಾರು?’

ಬುಧವಾರ, ಮಾರ್ಚ್ 20, 2019
23 °C
ಉಮೇಶ ಜಾಧವ ರಾಜೀನಾಮೆ: ಕಾನೂನು ತಜ್ಞರ ಅಭಿಮತ

‘ಅನರ್ಹಗೊಳಿಸಲು ಇವರು ಯಾರು?’

Published:
Updated:

ಬೆಂಗಳೂರು: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ್‌ ಜಾಧವ್‌, ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಬಾಧಕವಿಲ್ಲ’ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಡಿ.ಎನ್‌. ನಂಜುಂಡ ರೆಡ್ಡಿ , ‘ಜಾಧವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅದನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಲೇಬೇಕು. ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಈ ಕುರಿತಂತೆ ಅವರ ವಿರುದ್ಧ ಯಾವುದೇ ದೂರುಗಳೂ ಇಲ್ಲ. ಹೀಗಿರುವಾಗ, ಅವರ ರಾಜೀನಾಮೆ ಅಂಗೀಕರಿಸದೆ ಬೇರೆ ವಿಧಿಯಿಲ್ಲ’ ಎಂದು ಹೇಳಿದರು.

‘ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಜಾಧವ ಅವರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭಾಧ್ಯಕ್ಷರಿಗೆ ಇಲ್ಲ. ಅದೇನಿದ್ದರೂ ಕೋರ್ಟ್‌ ಮತ್ತು ಚುನಾವಣಾ ಆಯೋಗಕ್ಕೆ ಮಾತ್ರ ಇದೆ’ ಎಂದೂ ಅವರು ವಿವರಿಸಿದರು.

’ಜಾಧವ್‌ ಅವರು ಬಿಜೆಪಿ ಸೇರಿರುವುದರಿಂದ ಯಾವುದೇ ತೊಂದರೆ ಎದುರಾಗಬಹುದು. ಅವರು ತಮ್ಮ ಸದನದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅವರೀಗ ಸ್ವತಂತ್ರರು’ ಎಂದು ಮತ್ತೊಬ್ಬ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹೇಳಿದರು.

ಜಾಧವ ನೀಡಿರುವ ರಾಜೀನಾಮೆಗೆ ಸಂಬಂಧಿಸಿದಂತೆ ಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಹಾಜರಾಗದ ಉಮೇಶ ಜಾಧವ, ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ ಮತ್ತು ಮಹೇಶ ಕುಮಠಳ್ಳಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಈ ಸಂಬಂಧ ವಿವರಣೆ ನೀಡುವಂತೆ ಸಭಾಧ್ಯಕ್ಷರು ನೋಟಿಸ್‌ ನೀಡಿದ್ದರು. ಈ ಮಧ್ಯೆ, ಜಾಧವ ಅವರು ರಮೇಶಕುಮಾರ್‌ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿರುವ ರಮೇಶಕುಮಾರ್‌, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಎರಡು ದಿನಗಳ ಒಳಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಇಂದು: ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಏಟ್ರಿಯಾ ಹೋಟೆಲ್‌ನಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಜೆಡಿಎಸ್‌ ಜೊತೆ ಸೀಟು ಹೊಂದಾಣಿಕೆ, ಅಭ್ಯರ್ಥಿ ಆಯ್ಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !