ವಿಷ ಉಗುಳುವ ಕೊಳವೆಬಾವಿಗಳು

ಬುಧವಾರ, ಏಪ್ರಿಲ್ 24, 2019
31 °C
ನಂಜಾಗುತ್ತಿರುವ ಜೀವಜಲ * ಎಚ್ಚೆತ್ತುಕೊಳ್ಳದ ಪ್ರಭುತ್ವ * ಕಾಗದದಲ್ಲೇ ಉಳಿದ ಕಾನೂನು

ವಿಷ ಉಗುಳುವ ಕೊಳವೆಬಾವಿಗಳು

Published:
Updated:
Prajavani

ಜೀವ ಪೊರೆಯಬೇಕಿದ್ದ, ಜೀವಕ್ಕೆ ಆಧಾರವಾಗಿ ನಿಲ್ಲಬೇಕಿದ್ದ ನೀರು ಇಲ್ಲಿ ಜೀವಗಳನ್ನು ಹಿಂಡುತ್ತಿದೆ. ಬಾರದ ಮಳೆಯ ನಿರೀಕ್ಷೆಯಲ್ಲಿ ದಿನದೂಡುತ್ತಿರುವ ಜನರು ಪಾತಾಳಕ್ಕೇ ಪೈಪ್ ಇಳಿಸಿ ನೀರು ಮೊಗೆಯುತ್ತಿದ್ದಾರೆ. ಹೀಗೆ ಮೊಗೆದ ನೀರು ನಿಧಾನವಿಷವಾಗಿ ಕಾಡುತ್ತಿದೆ. ಮೈಕೈ ನೋವು, ಸ್ವಾಧೀನವಿಲ್ಲದ ಸೊಂಟ, ಸವೆದ ಹಲ್ಲು, ಮೂಳೆ ಸವಕಳಿ ಇಲ್ಲಿನ ಸಾಮಾನ್ಯ ದೃಶ್ಯಗಳೆನಿಸಿಬಿಟ್ಟಿದೆ.

ಇದು ಬಾಗೇಪಲ್ಲಿ ತಾಲ್ಲೂಕಿನ ತಿರುಮಣಿ ಗ್ರಾಮದ ಪರಿಸ್ಥಿತಿ. ನಸು ಬೆಳಕಿನ ಮನೆಯಲ್ಲಿ ಕುಳಿತಿದ್ದ ನಾರಾಯಣಮ್ಮ ಅವರ ವಯಸ್ಸು ಈಗ 62 ವರ್ಷ. ಫ್ಲೊರೋಸಿಸ್ ಕಾಯಿಲೆ ಯಿಂದ ಹೈರಾಣಾಗಿರುವ ಅವರಿಗೆ, ನೆಲದಿಂದ ಮೇಲೇಳಲೂ ಕಷ್ಟಪಡಬೇಕಾದ ಪರಿಸ್ಥಿತಿ ಅವರದು.

‘ನನಗೆ ಮಕ್ಕಳಿಲ್ಲ. ಗಂಡ ಚಿಕ್ಕಪ್ಪಯ್ಯನಿಗೂ ಸರಿಯಾಗಿ ನಡೆದಾಡಲು ಆಗುತ್ತಿಲ್ಲ. ಒಂದು ಲೋಟ ಕುಡಿಯುವ ನೀರು ಬೇಕು ಎಂದರೂ ಇತರರ ನೆರವಿಗಾಗಿ ಎದುರು ನೋಡಬೇಕು.ದಯವಿಟ್ಟು ನಮಗೆ ಸಹಾಯ ಮಾಡಿ’ ಕೈಮುಗಿದು ಕೇಳಿಕೊಂಡ ಆಕೆಯ ಮೊಗದಲ್ಲಿ ದೈನ್ಯತೆ ಮನೆಮಾಡಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯ ಲ್ಲಿರುವ ಬಾಗೇಪಲ್ಲಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮನೆಮಾತು ತೆಲುಗು. ಇಲ್ಲಿ ಮಳೆ ಅಪರೂಪ. ಮಳೆ ವಿಷಯ ಕೇಳಿದರೆ ಸಾಕು, ‘ಅದರ ಬಗ್ಗೆ ಮಾತಾಡೋಕೆ ಏನಿದೆ ಸ್ವಾಮಿ’ ಎಂದುಬಿಡುತ್ತಾರೆ.

‘ನಮ್ಮೂರು ಸರಿಯಾದ ಮಳೆ ಕಂಡು ಮೂರು ವರ್ಷವೇ ಆಯ್ತು ನೋಡಿ. ಹೋದ ವರ್ಷ ಬಂದ ಮಳೆಗೆ ನೆಲ ಒಂದಿಂಚಿನಷ್ಟೂ ಒದ್ದೆಯಾಗಲಿಲ್ಲ’ ಎಂದು ರೈತರಾದ ನಾಗಿರೆಡ್ಡಿ ಹೇಳಿದರು. ಫ್ಲೋರೊಸಿಸ್‌ನಿಂದ ಅವರ ಮೂಳೆಯೂ ಸವೆಯುತ್ತಿದೆ. ‘ವೈದ್ಯರು ಕಾಯಿಲೆ ಇರುವುದನ್ನು ದೃಢಪಡಿಸಿದ ನಂತರ ಎರಡು ಶೀಟ್ ಮಾತ್ರೆ ಮತ್ತು ವಾಕಿಂಗ್ ಸ್ಟಿಕ್ ಸಿಕ್ಕಿದೆ. ಆದರೆ ಕಾಯಿಲೆ ದಯಪಾಲಿಸಿದ ಕೊಳವೆಬಾವಿ ನೀರನ್ನೇ ನಾನು ಇಂದಿಗೂ ಕುಡಿಯಬೇಕಿದೆ’ ಎಂದು ಬೇಸರ ತೋಡಿಕೊಂಡರು ನಾಗಾರೆಡ್ಡಿ.

ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಬರ ಹೊಸ ವಿಷಯವೇನಲ್ಲ. ಕಳೆದ ಐದು ವರ್ಷಗಳಲ್ಲಿ ಮಳೆ ಕೊರತೆಯಿಂದಾಗಿ ನೀರಿಗಾಗಿ ಹಾಹಾಕಾರವೆದ್ದಿದೆ. ಉತ್ತರ ಪಿನಾಕಿನಿ, ಚಿತ್ರಾವತಿ, ಜಯಮಂಗಲಿ ನದಿಗಳು ನೆಪಮಾತ್ರಕ್ಕಷ್ಟೇ ಇವೆ. ಕಾಲ ಕಾಲಕ್ಕೆ ಬತ್ತಿಹೋಗುವ ಕೊಳವೆಬಾವಿಗಳಲ್ಲಿ ಮತ್ತೆ ಜೀವ ತುಂಬಲು ಇನ್ನಷ್ಟು–ಮತ್ತಷ್ಟು ಆಳಕ್ಕೆ ಕೊರೆಸುವುದು ಅನಿ ವಾರ್ಯ ಎಂಬಂತೆ ಆಗಿಬಿಟ್ಟಿದೆ. ನೀರು ಬರುವ ಆಳ ಹೆಚ್ಚಾದಷ್ಟೂ, ಫ್ಲೋರೈ ಡ್‌ನ ಗಡಸುತನವೂ ಹೆಚ್ಚಾಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಹಳ್ಳಿಗಳಲ್ಲಿ ಹುಟ್ಟಿದ ಸಾವಿರಾರು ಮಂದಿ ಬೇಸಾಯಕ್ಕೆ ತಿಲಾಂಜಲಿ ನೀಡಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಗಾರೆ ಕೆಲಸ, ಸೆಕ್ಯುರಿಟಿ, ಕೊರಿಯರ್ ಬಾಯ್‌ನಂಥ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ದಿನದೂಡುತ್ತಿದ್ದಾರೆ. ‘ನನ್ನ ಇಬ್ಬರು ಗಂಡು ಮಕ್ಕಳು ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಹೋದರು. ಈ ಜಮೀನಿನಲ್ಲಿ ಮೂರು ಕೊಳವೆಬಾವಿ ತೋಡಿದರೂ ನೀರು ಸಿಗಲಿಲ್ಲ. ಅವರಿಗೆ ಮರಳಿ ಬರಲು ಇಷ್ಟವಿಲ್ಲ. ಅವರು ಇಲ್ಲಿಗೆ ಬಂದು ಏನು ತಾನೆ ಮಾಡುತ್ತಾರೆ. ನಾಲ್ಕು ದಿನಗಳಿಗೊಮ್ಮೆ ಕುಡಿಯಲು ಎರಡು ಕ್ಯಾನ್ ನೀರು ಸಿಗುವ ಈ ಹಳ್ಳಿಗೆ ಮತ್ತೆ ಬರಲು ನನಗೆ ಇಷ್ಟವಿಲ್ಲ’ ಎನ್ನುವ ಹಿರಿ ಮಗನ ಮಾತನ್ನು ನೋವಿನಿಂದ ನೆನಪಿಸಿಕೊಂಡರು ನಾಗಿರೆಡ್ಡಿ.

ಗೌರಿಬಿದನೂರು ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ನಲ್ಲಿ ಹತ್ತಿರ ನೀರಿಗಾಗಿ ಕಾಯುವ ಜನರ ದೊಡ್ಡ ಗುಂಪು ಇರುವುದು ಸಾಮಾನ್ಯ. 2 ಕಿ.ಮೀ. ದೂರದಲ್ಲಿರುವ ಕರಗನಹಳ್ಳಿಯಿಂದ ಇಲ್ಲಿಗೆ ನೀರು ಪಂಪ್ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನೀರಿಗಾಗಿ ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದೇವೆ. ಹೀಗೆ ಸರದಿ ಸಾಲಿನಲ್ಲಿ ನಿಲ್ಲುವಾಗ ಜಗಳಗಳೂ ಸಾಮಾನ್ಯ. ಈ ಗ್ರಾಮದಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ನೀರು ಕಾಣದೆ ಮೂರು ತಿಂಗಳಾಯಿತು. ‘ನೀರಿಗಾಗಿ ಇನ್ನೆಷ್ಟು ದಿನ ಈ ರೀತಿ ಕಷ್ಟ ಪಡಬೇಕೋ ತಿಳಿಯುತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ಶೋಭಾ.ಎನ್.

‘ನಮ್ಮ ಜಿಲ್ಲೆಯಲ್ಲಿ ನೀರಿನದ್ದೇ ದೊಡ್ಡ ಮಾತು. ನೀರಿಗಾಗಿ ಜನರು ಪಡುವ ಕಷ್ಟದ ಬಗ್ಗೆ ನಮಗೆ ಗೊತ್ತಿದೆ’ ಎನ್ನುವುದು ರೈತ ಸಂಘದ ತುಮಕೂರು ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಅವರ ಮಾತು. ತುಮಕೂರು ಜಿಲ್ಲೆ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಜನರು ನೀರು ಬಿಟ್ಟು ಇನ್ನೇನನ್ನೂ ಕೇಳುವುದಿಲ್ಲ. ಹಲವು ವರ್ಷಗಳಿಂದ ನೀರು ಕಾಣದ ಇಲ್ಲಿನ ಹಲವು ಪ್ರದೇಶಗಳು ಈಗಾಗಲೇ ಮರುಭೂಮಿಯಂತಾಗಿವೆ.

‘ಇಂದಲ್ಲದಿದ್ದರೆ ನಾಳೆ ಎತ್ತಿನ ಹೊಳೆ ಯೋಜನೆ ಪೂರ್ಣಗೊಳ್ಳುತ್ತದೆ. 9 ವರ್ಷಗಳಿಂದ ನೀಡುತ್ತಿರುವ ಭರವಸೆಯಂತೆ 25 ಟಿಎಂಸಿ ಅಲ್ಲದಿ ದ್ದರೂ, ಕನಿಷ್ಠ 15 ಟಿಎಂಸಿ ನೀರಾದರೂ ನಮಗೆ ಸಿಗುತ್ತದೆ’ ಎನ್ನುವುದು ಅವರ ನಿರೀಕ್ಷೆ.

ಮಧುಗಿರಿಯಿಂದ ಪಾವಗಡಕ್ಕೆ ಹೋಗುವಾಗ ಸಿಗುವ ಆಂಧ್ರದ ಮಡಕಶಿರಾ ತಾಲ್ಲೂಕಿನಲ್ಲಿ ಅಲ್ಲಲ್ಲಿ ನೀರಾವರಿ ಕಾಲುವೆಗಳು ಕಾಣಿಸುತ್ತವೆ. ಕರ್ನಾಟಕದ ಗಡಿಯಲ್ಲಿಯೇ ನಡೆ ಯತ್ತಿರುವ ಈ ಚಟುವಟಿಕೆಗಳು ಇಂದಲ್ಲ ನಾಳೆ, ಒಂದಲ್ಲ ಒಂದು ಮಾರ್ಗದಿಂದ ನಮ್ಮ ಹಳ್ಳಿಗಳಿಗೆ ನೀರು ಬರಬಹುದು ಎನ್ನುವ ಆಸೆಯನ್ನೇನೋ ಹುಟ್ಟಿಸಿವೆ. ಆದರೆ ಗಡಿವಿವಾದ, ಕೃಷ್ಣ–ಕಾವೇರಿ ಕೊಳ್ಳದ ಕಾನೂನು ಮತ್ತು ತಾಂತ್ರಿಕ ಮಿತಿಗಳನ್ನು ಮೀರಿ ನೀರು ಒದಗಿಸುವ ಸವಾಲನ್ನು ನಮ್ಮ ರಾಜ್ಯ ಸರ್ಕಾರ ಎದುರಿಸುವುದು ಸುಲಭಸಾಧ್ಯವಲ್ಲ ಎನ್ನುವ ಎಚ್ಚರವೂ ಸ್ಥಳೀಯರಲ್ಲಿ ಇದೆ.

ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳ 16 ಗ್ರಾಮ ಪಂಚಾಯತಿ ಗಳು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಅನಿವಾರ್ಯ ಸ್ಥಿತಿ ತಲುಪಿವೆ. ಮಧುಗಿರಿ ತಾಲ್ಲೂಕಿನ ಅಧಿಕಾರಿಯೊಬ್ಬರ ಪ್ರಕಾರ 11 ಗ್ರಾಮಗಳು ಖಾಸಗಿ ಕೊಳವೆಬಾವಿಗಳನ್ನು ಅವಲಂಬಿಸಿವೆ. ಅಕ್ಕಪಕ್ಕದ ತಾಲ್ಲೂ ಕುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಿಲೋಮೀಟರ್‌ಗಳಷ್ಟು ದೂರದಿಂದ ಕೊಳವೆಬಾವಿಗಳ ನೀರು ಪಂಪ್ ಮಾಡಬೇಕಾಗಿದೆ. ಟ್ಯಾಂಕರ್‌ ಗಳಿಂದ ನೀರು ಪೂರೈಸು ವುದು ಸಾಮಾನ್ಯ ವಿದ್ಯಮಾನ ಎಂಬಂತೆ ಆಗಿಬಿಟ್ಟಿದೆ.


ಕೊರಟಗೆರೆ ತಾಲ್ಲೂಕು ಸೋಂಪುರ ಗ್ರಾಮದ ಶಕುಂತಲಮ್ಮ ನಾಗರಾಜು ಅವರಿಗೆ 10 ದಿನಗಳಲ್ಲಿ 20 ಲೀಟರ್ ನೀರು ಸರಬರಾಜಾಗಿದೆ. (ಚಿತ್ರ: ಚಿರಂಜೀವಿ ಕುಲಕರ್ಣಿ)

‘ಬೆಂಗಳೂರಿನಲ್ಲಿರುವ ಹಿರಿಯ ಅಧಿ ಕಾರಿಗಳು ಯೋಜನೆಗಳನ್ನೇನೋ ಸಿದ್ಧಪಡಿಸುತ್ತಾರೆ. ಆದರೆ ಗ್ರಾಮಮಟ್ಟದಲ್ಲಿ ಅನುಷ್ಠಾನ ಆಗುವಾಗ ಆ ಪ್ರದೇಶಕ್ಕೆ ಅದು ಹೊಂದಾಣಿಕೆಯಾಗುಂತೆ ಇರುತ್ತದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿಬಿಡುತ್ತದೆ. ಎತ್ತಿನಹೊಳೆ ಯೋಜನೆ ಜಾರಿಯಾದರೂ ಈ ಪ್ರದೇಶಗಳಲ್ಲಿ ಬಾಯಾರಿಕೆ ಆರುವುದು ಅಸಾಧ್ಯ’ ಎನ್ನುವುದು ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರ ಮಾತು.

ಚಿಕ್ಕಬಳ್ಳಾಪುರ ತಾಲ್ಲೂಕಿನ 270 ಗ್ರಾಮಗಳ ಪೈಕಿ 98 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಕೆಲ ಗ್ರಾಮಗಳಲ್ಲಿ 10 ಕಿ.ಮೀ. ದೂರದಿಂದ ನೀರು ತರಬೇಕಿದೆ. ಇಲ್ಲಿನ 42 ಗ್ರಾಮಗಳಲ್ಲಿ ಒಂದು ಹನಿಯೂ ನೀರು ಸಿಗುತ್ತಿಲ್ಲ. ‘ಜಿಲ್ಲಾಡಳಿತದ ಆದೇಶದಂತೆ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದೇವೆ. ಆದರೂ ಪೂರ್ಣಪ್ರಮಾಣದಲ್ಲಿ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಹಲವು ಶುದ್ಧೀಕರಣ ಘಟಕಗಳು ಕೆಲಸ ಮಾಡುತ್ತಿಲ್ಲ’ ಎಂದು ತಾಲ್ಲೂಕು ಅಧಿಕಾರಿ ಹೇಳಿದರು.

ಬಾಗೇಪಲ್ಲಿ ತಾಲ್ಲೂಕಿನ ತೊಲಪಲ್ಲಿಯಲ್ಲಿ ನೀರು ಶುದ್ಧೀಕರಣ ಘಟಕವೇನೋ ಇದೆ. ಆದರೆ ಗ್ರಾಮಸ್ಥರಿಗೆ ಆ ನೀರಿನ ರುಚಿ ಇಷ್ಟವಾಗಿಲ್ಲ. ಕುಡಿಯುವ ನೀರಿಗಾಗಿ ಅವರು 5 ಕಿ.ಮೀ. ಕ್ರಮಿಸಿ ಪಾತಪಾಳ್ಯಕ್ಕೆ ಹೋಗುತ್ತಾರೆ. ‘ಬಾಗೇಪಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಆರ್‌ಒ ಘಟಕಗಳಿಗೂ ಅದರದ್ದೇ ಆದ ಕತೆ ಇವೆ. ನಿಯಮಿತ ಪರಿಶೀಲನೆ ಮತ್ತು ನಿರ್ವಹಣೆಗೆ ವ್ಯವಸ್ಥೆಯಾಗದಿದ್ದರೆ ಅವು ಹಾಳಾಗುತ್ತವೆ’ ಎಂದು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮನೆಗಳ ಸಮೀಕ್ಷೆ ನಡೆಸಿದ ಸರ್ಕಾರೇತರ ಸಂಸ್ಥೆ INREM ಪ್ರತಿಷ್ಠಾನದ ಕಿರಣ್ ಕುಮಾರ್‌ ಸೇನ್ ಅಭಿಪ್ರಾಯಪಡುತ್ತಾರೆ.

ಆದ್ಯತೆಗೆ ಸೂಚನೆ: ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದು ಹೆಚ್ಚುವರಿ ಆಯುಕ್ತರು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕುಡಿಯುವ ನೀರು ಒದಗಿಸಲು ಸಾಕಷ್ಟು ಸಂಪನ್ಮೂಲಗಳು ಬೇಕಾಗುತ್ತವೆ. ಕೊಳವೆಬಾವಿಗಳು ಅಥವಾ ಪರ್ಯಾಯ ಮೂಲಗಳು ಇಲ್ಲದಿದ್ದರೆ ಟ್ಯಾಂಕರ್ ನೀರನ್ನೇ ಬಳಸಬೇಕು. ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ನೀಡಿರುವ ದೂರನ್ನು ಶೀಘ್ರವೇ ಪರಿಗಣಿಸಲಾಗುವುದು ಎಂದು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್ ಪ್ರತಿಕ್ರಿಯಿಸಿದರು.

‘ಕಳೆದ 10 ದಿನಗಳಲ್ಲಿ ನಮ್ಮ ಮನೆಗೆ 20 ಲೀಟರ್‌ನಷ್ಟು ನೀರು ಸರಬರಾಜು ಮಾಡಲಾಗಿದೆ’ ಎನ್ನುತ್ತಾರೆ ಕೊರಟಗೆರೆಯಿಂದ 10 ಕಿ.ಮೀ. ದೂರವಿರುವ ಸೋಮಪುರದ ಶಕುಂತಲಮ್ಮ ನಾಗರಾಜು. ವಿದ್ಯುತ್ ಸಮಸ್ಯೆ ಯಿಂದಾಗಿ ನೆರೆಹೊರೆಯವರಿಗೆ ಪಂಪ್‌ ಚಾಲು ಮಾಡಲೂ ಆಗುತ್ತಿಲ್ಲ. ಕುಡಿಯುವ ನೀರು ದುಬಾರಿ ಆಗಿದೆ. ಮನೆಯಲ್ಲಿ ನಾವು ಎಷ್ಟು ಲೋಟ ನೀರು ಕುಡಿದೆವು ಎನ್ನುವ ಲೆಕ್ಕ ಇರಿಸಿಕೊಳ್ಳುತ್ತಿದ್ದೇವೆ’ ಎನ್ನುವ ಅವರ ಮಾತುಗಳು ಪರಿಸ್ಥಿತಿಗೆ ಕೈಗನ್ನಡಿಯಂತಿದೆ.

ಆರೋಗ್ಯ ಮತ್ತು ಸ್ಥಿರತೆ: INREM ಪ್ರತಿಷ್ಠಾನಬಾಗೇಪಲ್ಲಿ ತಾಲ್ಲೂಕಿನ 10 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಅಂಗನವಾಡಿ ಮತ್ತು ಶಾಲೆಗಳಲ್ಲಿರುವ 263 ಮಕ್ಕಳ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪೈಕಿ 92 ಮಕ್ಕಳಲ್ಲಿ ತೀವ್ರಮಟ್ಟದ ಡೆಂಟಲ್ ಫ್ಲೋರೊಸಿಸ್ ಇದೆ. 82 ಮಕ್ಕಳಿಗೆ ಮಧ್ಯಮ ಮತ್ತು 48 ಮಕ್ಕಳಿಗೆ ಕಡಿಮೆ ತೀವ್ರತೆಯ ಡೆಂಟಲ್ ಫ್ಲೊರೋಸಿಸ್ ಇದೆ. ಶುದ್ಧ ಕುಡಿಯುವ ನೀರಿನ ಕೊರತೆಯ ಜೊತೆಗೆ ಆಹಾರ ಮತ್ತು ಪೋಷಕಾಂಶದ ಕೊರತೆಯೂ ಫ್ಲೊರೊಸಿಸ್‌ಗೆ ಮುಖ್ಯಕಾರಣವಾಗಿದೆ.

ಬೆಳೆ ನಿಯಂತ್ರಣ ಅಗತ್ಯ: ಪರಿಸ್ಥಿತಿ ಇದೇ ರೀತಿ ಇನ್ನೆಷ್ಟು ದಿನ ಮುಂದುವರಿಯುತ್ತದೆ ಎನ್ನುವ ಬಗ್ಗೆ ಮೂರೂ ಜಿಲ್ಲೆಗಳ ಗ್ರಾಮಸ್ಥರಲ್ಲಿ ಚಿಂತೆಯ ಕಾರ್ಮೋಡ ಆವರಿಸಿದೆ. ಕೆಲ ರೈತರಂತೂ ಎಷ್ಟು ಆಳದಲ್ಲಿ ನೀರು ಲಭ್ಯ ಎಂಬುದನ್ನು ಪರಿಗಣಿಸದೇ ಸಾಲದ ಮೇಲೆ ಸಾಲ ಮಾಡಿ ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. ಈ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ₹2,000 ಕೋಟಿ ಘೋಷಿಸಿದೆ. ಆದರೆ ಅಂತರ್ಜಲ ಪುನರುಜ್ಜೀವಕ್ಕೆ ಮೀಸಲಿರಿಸುವ ಮೊತ್ತ ₹500 ಕೋಟಿ ಮಾತ್ರ.

ಮಳೆ ಕೊರತೆಯಿಂದಾಗಿ ಈ ಪ್ರದೇಶದ ಕೆರೆಗಳು ಬಾಯ್ದೆರೆದಿವೆ. ಕೊಳವೆಬಾವಿಗಳು ವಿಫಲವಾಗುತ್ತಿವೆ. ಆದರೂ ವಾಣಿಜ್ಯ ಬೆಳೆಗಳ ಭರಾಟೆ ಮಾತ್ರ ಕಡಿಮೆಯಾಗಿಲ್ಲ. ಕೃಷಿಯ ಒತ್ತಾಡದಿಂದಾಗಿ ಅಂತರ್ಜಲ ಬೇಗ ಬತ್ತಿಹೋಗುತ್ತಿದೆ. ಬರಪೀಡಿತ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಕಡಿವಾಣ ಹಾಕಬೇಕಿದೆ.

‘ಈ ಪ್ರದೇಶದಲ್ಲಿ ಸುಸ್ಥಿರ ಕೃಷಿ ಮತ್ತು ಕಾಡು ಬೆಳೆಸುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಶಿಡ್ಲಘಟ್ಟ ಅರಣ್ಯ ವಲಯದಲ್ಲಿ ಮತ್ತೆ ಹಸಿರು ಚಿಗುರುವಂತೆ ಮಾಡಲು ನಮಗೆ 10 ವರ್ಷಗಳೇ ಬೇಕಾದವು. ಅಧಿಕಾರಿಗಳು ಮತ್ತು ಅಲ್ಲಿನ ಜನರ ಸಹಾಯದಿಂದ 69,000 ಎಕರೆ ಜಮೀನಿನಲ್ಲಿ ಹಸಿರು ಬೆಳೆಸಿ 300ಕ್ಕೂ ಹೆಚ್ಚು ಗ್ರಾಮಗಳಿಗೆ ನೆರವಾದೆವು' ಎನ್ನುತ್ತಾರೆ ‘ಫೌಂಡೇಶನ್ ಫಾರ್ ಇಕಾಲಾಜಿಕಲ್ ಸೆಕ್ಯೂರಿಟಿ’ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಮುಖ್ಯಸ್ಥ ವಿಜಯ್ ಕುಮಾರ್.

ಎತ್ತಿನಹೊಳೆಯಿಂದ ಹೆಚ್ಚು ಪ್ರಯೋಜನವಿಲ್ಲ

ಎತ್ತಿನಹೊಳೆ ಯೋಜನೆಯ ಬಗ್ಗೆಯೇ ಈ ಪ್ರದೇಶದ ಜನರು ನಿರೀಕ್ಷೆ ಇಟ್ಟುಕೊಂಡಿರುವುದರ ಬಗ್ಗೆ ಲೇಖಕ ಮತ್ತು ಪರಿಸರ ತಜ್ಞ ನಾಗೇಶ್ ಹೆಗಡೆ ಅವರಿಗೆ ಆಕ್ಷೇಪವಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಜಾಗತಿಕ ತಾಪಮಾನ ಏರಿಕೆಯಿಂದ ಪರಿಸರದಲ್ಲಿ ಹಲವು ಬದಲಾವಣೆಗಳು ಗೋಚರಿಸುತ್ತಿವೆ. ಇಂಥ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆ ಅಥವಾ ಶರಾವತಿ ನೀರು ತರುವ ಪ್ರಯತ್ನಗಳನ್ನು ಸಮರ್ಥಿಸಲು ಆಗದು. ದೂರದ ನದಿಗಳಿಂದ ನೀರು ತಂದು ಶಾಶ್ವತ ನೀರಾವರಿ ಯೋಜನೆ ರೂಪಿಸುವ ಈ ಪರಿಕಲ್ಪನೆಗಳನ್ನು ಒಪ್ಪಲು ಆಗದು. ಆಗಾಗ್ಗೆ ಬರುವ ನೆರೆ ಮತ್ತು ಬರದಿಂದಾಗಿ ನೀರು ಸರಬರಾಜಿನ ಬಗ್ಗೆ ಸ್ಪಷ್ಟವಾಗಿ ಹೇಳಲಾಗದು. ಫಲಾನುಭವಿಗಳ ನಡುವೆ ನಿರಂತರ ಜಗಳ ಬಿತ್ತುವುದನ್ನು ಹೊರತುಪಡಿಸಿದರೆ, ಒಣಗಿದ ಕಾಲುವೆಗಳು ಮತ್ತು ಹೂಳು ತುಂಬಿದ ಕೆರೆಗಳು ಮಾತ್ರವೇ ಎತ್ತಿನಹೊಳೆ ಯೋಜನೆಯ ಲಾಭ ಎನಿಸುತ್ತದೆ. ಶಾಶ್ವತ ನೀರಾವರಿ ಎಂದರ ಏನು ಎಂಬುದನ್ನು ನಾವು ಮತ್ತೊಮ್ಮೆ ವ್ಯಾಖ್ಯಾನಿಸಬೇಕಾಗಿದೆ, ಇದು ನದಿ ಮತ್ತು ಹೊಳೆಯಿಂದ ಬರುವಂತಹದ್ದಲ್ಲ. ಆಕಾಶಕ್ಕೆ ಆಲಿಕೆ ಇಟ್ಟು ಮಳೆ ನೀರು ಸಂಗ್ರಹಿಸಿದರೆ ಅಥವಾ ಚರಂಡಿ ನೀರು ಸಂಸ್ಕರಿಸಿ ಪುನರ್ಬಳಕೆಯ ಬಗ್ಗೆ ಯೋಚಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !