‘ದೋಸ್ತಿ’ಗಳಿಗೆ ಈಗ ‘ಉಸ್ತುವಾರಿ’ ವರಿ

7
ಡಿಕೆಶಿ, ಪರಮೇಶ್ವರ ಮಾತಿಗೆ ಕುಮಾರಸ್ವಾಮಿ ಮಣೆ?; ಸಿದ್ದರಾಮಯ್ಯ ಅಸಮಾಧಾನ

‘ದೋಸ್ತಿ’ಗಳಿಗೆ ಈಗ ‘ಉಸ್ತುವಾರಿ’ ವರಿ

Published:
Updated:

ಬೆಂಗಳೂರು: ಜಿಲ್ಲಾ ಉಸ್ತುವಾರಿ ನೇಮಕ ವಿಷಯದಲ್ಲಿ ಕಾಂಗ್ರೆಸ್‌ನ ಕೆಲವು ಸಚಿವರು ಅಪಸ್ವರ ಎತ್ತಿರುವುದು ಜೆಡಿಎಸ್‌– ಕಾಂಗ್ರೆಸ್‌ ‘ದೋಸ್ತಿ’ಯಲ್ಲಿ ಕಹಿ ಹಿಂಡಿದಂತಾಗಿದೆ.

ಉಸ್ತುವಾರಿಗಳನ್ನು ನೇಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಚಿವರಾದ ಡಿ.ಕೆ. ಶಿವಕುಮಾರ್‌ ಹೇಳಿದಂತೆ ನಡೆದುಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿದೆ.

ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನು ಕೆ.ಜೆ. ಜಾರ್ಜ್‌ಗೆ, ಮೈಸೂರು ಜಿಲ್ಲೆಯ ಹೊಣೆಯನ್ನು ಸಾ.ರಾ. ಮಹೇಶ್‌ ಅವರಿಗೆ ನೀಡುವಂತೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಅವರ ಸಲಹೆಗೆ ಮನ್ನಣೆ ಸಿಕ್ಕಿಲ್ಲ.

ಮುಖ್ಯಮಂತ್ರಿಯ ಈ ನಡೆಯಿಂದ ಸಿದ್ದರಾಮಯ್ಯ ಮುನಿಸಿಕೊಂಡಿದ್ದು, ಈ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಶಿವಾನಂದ ಪಾಟೀಲ ಅವರಿಗೆ ಬಾಗಲಕೋಟೆ ನೀಡಲಾಗಿದೆ. ಇದು ಪಾಟೀಲರ ಅಸಮಾಧಾನಕ್ಕೆ ಕಾರಣವಾಗಿದೆ.

ಹಾವೇರಿ ಬದಲು ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿದ್ದಕ್ಕೆ ಅರಣ್ಯ ಸಚಿವ ಆರ್‌. ಶಂಕರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಂಕರ್‌ ಚುನಾಯಿತರಾಗಿದ್ದರು.

‘ಹಾವೇರಿ ಜಿಲ್ಲೆಯ ಉಸ್ತುವಾರಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ.  ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿದರೂ ಕೆಲಸ ಮಾಡಲೇಬೇಕಲ್ವಾ’ ಎಂದೂ ಪ್ರಶ್ನಿಸಿದರು.

‘ಉಸ್ತುವಾರಿ ಹೊಣೆ ಹಂಚಿಕೆ ವಿಷಯದಲ್ಲಿ ಯಾರಿಗೂ ಅತೃಪ್ತಿ ಇಲ್ಲ. ಹಾಗೇನಾದರೂ ಇದ್ದರೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ’ ಎಂದು ಜಿ. ಪರಮೇಶ್ವರ ಹೇಳಿದರು.

‘ಎಲ್ಲರ ಜೊತೆ ಚರ್ಚಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !