ಸಮವಸ್ತ್ರ ವಿತರಣೆ ಹೊಣೆ: ಶಾಲಾ ಅಭಿವೃದ್ಧಿ ಮಂಡಳಿಗಳಿಗೆ

ಶುಕ್ರವಾರ, ಜೂಲೈ 19, 2019
24 °C

ಸಮವಸ್ತ್ರ ವಿತರಣೆ ಹೊಣೆ: ಶಾಲಾ ಅಭಿವೃದ್ಧಿ ಮಂಡಳಿಗಳಿಗೆ

Published:
Updated:

ಬೆಂಗಳೂರು: ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸುವ ಜವಾಬ್ದಾರಿಯನ್ನು ಶಾಲಾ ಅಭಿವೃದ್ಧಿ ಮಂಡಳಿಗಳಿಗೇ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿದೆ.

ಇದಕ್ಕೆ ಅಗತ್ಯವಿರುವ ₹115 ಕೋಟಿಯನ್ನು ಶಾಲಾ ಅಭಿವೃದ್ಧಿ ಸಮಿತಿಗಳಿಗೆ ವರ್ಗಾಯಿಸಲು ಒಪ್ಪಿಗೆ ನೀಡಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಸಮವಸ್ತ್ರಕ್ಕೆ ತಲಾ ₹ 300 ನೀಡಲಾಗುವುದು. ಹಿಂದಿನ ವರ್ಷ ರಾಜ್ಯ ಮಟ್ಟದಲ್ಲೇ ಟೆಂಡರ್‌ ಕರೆದು ಸಮವಸ್ತ್ರ ವಿತರಿಸಲಾಗಿತ್ತು ಎಂದರು.

ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು:

* 2018–19 ನೇ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಮತ್ತು ಪುನರ್‌ ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ. ಇದಕ್ಕೆ ಅಗತ್ಯವಿರುವ ರಾಜ್ಯದ ಪಾಲಿನ ₹ 665 ಕೋಟಿ ಒದಗಿಸಲು ಅನುಮೋದನೆ.

*ರಾಜ್ಯದಲ್ಲಿ ಉನ್ನತ ಶಿಕ್ಷಣ ಅಭಿಯಾನದ 2 ನೇ ಹಂತವನ್ನು ಆರಂಭಿಸಲು ಅನುಮತಿ. ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಕೇಂದ್ರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಹಣ ನೀಡುತ್ತದೆ. ಇದರಡಿ ಎರಡರಿಂದ ಮೂರು ವರ್ಷಗಳಲ್ಲಿ ₹ 460 ಕೋಟಿ ಖರ್ಚು ಮಾಡಲು ಒಪ್ಪಿಗೆ.

*ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ನೀಡಿದ್ದ ₹ 330.50 ಕೋಟಿ ಬಡ್ಡಿ ರಹಿತ ಸಾಲದ ಮರುಪಾವತಿ ಅವಧಿಯನ್ನು ಇನ್ನೂ 10 ವಿಸ್ತರಿಸಲು ನಿರ್ಧಾರ. 2 ನೇ ರನ್‌ವೇ ಮತ್ತು 2 ನೇ ಟರ್ಮಿನಲ್‌ ನಿರ್ಮಿಸುತ್ತಿರುವುದರಿಂದ ಈ ವಿನಾಯ್ತಿ ನೀಡಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಇದಕ್ಕಾಗಿ ಸರ್ಕಾರದಿಂದ ಬಂಡವಾಳ ಕೇಳಿತ್ತು. ಅದನ್ನು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !