ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರದ ಹಣ ವೇತನಕ್ಕೆ ?

Last Updated 15 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸದೇ ಅದಕ್ಕಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಶಿಕ್ಷಕರ ವೇತನಕ್ಕಾಗಿ ಬಳಸಲು ಉದ್ದೇಶಿಸಿದೆ ಎಂಬ ದೂರು ಕೇಳಿ ಬಂದಿದೆ.

ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ಯೋಜನೆಗಾಗಿ ₹ 577.84 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಡುಗಡೆ ಮಾಡಿದೆ. ಸಮಗ್ರ ಶಿಕ್ಷಣ ಅಭಿಯಾನವೂ 2 ನೇ ಜೊತೆ ಸಮವಸ್ತ್ರ ವಿತರಿಸಲು ಶಿಕ್ಷಣ ಇಲಾಖೆಗೆ ಪ್ರತಿ ವಿದ್ಯಾರ್ಥಿಗೆ ₹ 300 ರಂತೆ ಬಿಡುಗಡೆ ಮಾಡಿದೆ. ಆದರೆ, ಆ ಹಣ ಬಳಕೆ ಮಾಡದೇ ಶಿಕ್ಷಣ ಇಲಾಖೆ ಈಗ ಮೌನವಾಗಿದೆ. ಈ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಆರಂಭದಿಂದಲೂ ಇಲಾಖೆಯಲ್ಲಿ ಹಣವಿಲ್ಲ ಎಂದು ಸಬೂಬು ಹೇಳುತ್ತಾ ಬಂದಿದ್ದ ಶಿಕ್ಷಣ ಇಲಾಖೆ ಬಳಿಕ ಕೇಂದ್ರ ಸರ್ಕಾರವೇ ಹಣ ಬಿಡುಗಡೆ ಮಾಡಿಲ್ಲ ಎಂದು ತನ್ನ ವರಸೆ ಬದಲಿಸಿತ್ತು. ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆಗೆ ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಆದರೆ, ಆ ಮಾಹಿತಿಯನ್ನು ಮುಚ್ಚಿಟ್ಟಿತ್ತು.

ರಾಜ್ಯದಲ್ಲಿ 38.60 ಲಕ್ಷ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಣೆಗೆ ಬಿಡುಗಡೆ ಮಾಡಬೇಕಾಗಿರುವ ಹಣದ ಮೊತ್ತ ₹ 91 ಕೋಟಿ. ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆಗೆ ನಿಗದಿ ಮಾಡಿದ್ದ ಒಟ್ಟು ಮೊತ್ತದಲ್ಲಿ ಶೇ 57 ರಷ್ಟು ಹಣ ಬಿಡುಗಡೆ ಮಾಡಿದೆ. ಸಮಗ್ರ ಶಿಕ್ಷಣ ಅಭಿಯಾನ ವಿಭಾಗವೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. ಆದರೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುನಿಲ್‌ ಇಜಾರಿ ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರ ಇರುವ ಕಾರಣ ಸಕಾಲದಲ್ಲಿ ಸಂಬಳ ನೀಡದೇ ಶಿಕ್ಷಕರ ಆಕ್ರೋಶಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಸಮವಸ್ತ್ರಕ್ಕೆಂದು ಬಿಡುಗಡೆಯಾದ ಹಣವನ್ನು ವೇತನಕ್ಕೆ ಬಳಸುತ್ತಿದೆ. ಶಿಕ್ಷಕರ ವೇತನವೂ ಹೆಚ್ಚಳವಾಗಿದೆ, ಇದನ್ನು ಸರಿದೂಗಿಸಲು ಸಮವಸ್ತ್ರದ ನಿಗದಿ ಮಾಡಿದ ಹಣವನ್ನು ಬಳಕೆಗೆ ಮುಂದಾಗಿದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಮೂಲಕ ಸಮವಸ್ತ್ರಗಳ ವಿತರಣೆ ಆಗುತ್ತದೆ. ಸಮಿತಿಯು ಸ್ಥಳೀಯ ದರ್ಜಿ
ಗಳಿಂದ ಮಕ್ಕಳ ಅಳತೆಯನ್ನು ಪಡೆದು ಹೊಲಿಸುತ್ತದೆ. ಎರಡನೇ ಜೊತೆ ಸಮವಸ್ತ್ರಕ್ಕೆ ಆದೇಶ ಸಿಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ದರ್ಜಿಗಳು ಮೊದಲೇ ತಮ್ಮ ಬಳಿ ಇದ್ದ ಅಳತೆಗೇ ಬಟ್ಟೆಯನ್ನು ಹೊಲಿದಿಟ್ಟುಕೊಂಡಿದ್ದಾರೆ ಎಂದರು.

ಒಟ್ಟು 38.60 ಲಕ್ಷ ಶಾಲಾ ಮಕ್ಕಳು

ಎರಡನೇ ಜೊತೆ ವಿತರಣೆಗೆ ಬೇಕಾಗುವ ಮೊತ್ತ₹91 ಕೋಟಿ

1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ತಲಾ ₹300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT