ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಅನುಕಂಪದ ಅಲೆಯಲ್ಲಿ ತೇಲಿದ 'ಆನಂದ'

ಒಳಬೇಗುದಿಗೆ;ಮುದುಡಿದ ಕಮಲ
Last Updated 6 ನವೆಂಬರ್ 2018, 8:15 IST
ಅಕ್ಷರ ಗಾತ್ರ

ಬಾಗಲಕೋಟೆ: ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಕೈ ಹಿಡಿದಿದ್ದಾರೆ. ಅಪ್ಪ (ಸಿದ್ದು ನ್ಯಾಮಗೌಡ) ಸಾವಿನ ಅನುಕಂಪದ ಅಲೆ ಪುತ್ರನನ್ನು ನಿರಾಯಾಸವಾಗಿ ಗೆಲುವಿನ ದಡ ಸೇರಿಸಿದೆ.

ಈ ಉಪಚುನಾವಣೆಯಲ್ಲಿ ಅನುಕಂಪ, ಯುವ ನಾಯಕತ್ವ, ಹಿರಿತನ ಹಾಗೂ ಸಂಘಟನೆಯ ವಿಚಾರಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪ್ರಚಾರದ ವೇಳೆ ಪಣಕ್ಕಿಟ್ಟಿದ್ದರು. ಅದರಲ್ಲಿ ಜಮಖಂಡಿಯ ಮತದಾರರು ಮೊದಲ ಎರಡು ಸಂಗತಿಗಳಿಗೆ ಮನ್ನಣೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡಗೆ 39 ಸಾವಿರ ಮತಗಳ ಅಂತರದ ಭರ್ಜರಿ ಗೆಲುವು ದೊರೆತಿದೆ.

ಸಂಘಟನೆಯ ಬಲ ನೆಚ್ಚಿಕೊಂಡಿದ್ದ ಬಿಜೆಪಿ ಶ್ರೀಕಾಂತ ಕುಲಕರ್ಣಿ ಸೋಲು ಅನುಭವಿಸಿದ್ದಾರೆ. ಪ್ರಚಾರದ ವೇಳೆ ಇದು ನನ್ನ ಕೊನೆಯ ಚುನಾವಣೆ ಎಂದು ಶ್ರೀಕಾಂತ ಹೇಳಿಕೊಂಡಿದ್ದರು. ಈ ಸೋಲು ಅವರ ರಾಜಕೀಯ ಬದುಕನ್ನು ಮುಸುಕಾಗಿಸಿದೆ.

ಸಂಘಟಿತ ಹೋರಾಟ: ಚುನಾವಣೆಗೆ ಸಿದ್ದತೆ, ಟಿಕೆಟ್ ನೀಡಿಕೆ, ಪ್ರಚಾರ ಹೀಗೆ ಎಲ್ಲ ಸಂದರ್ಭಗಳಲ್ಲೂ ಕಾಂಗ್ರೆಸ್ ಪಾಳಯ ಮೇಲುಗೈ ಸಾಧಿಸಿತು. ಅನುಕಂಪದ ಅಲೆಯನ್ನೇ ಪ್ರಮುಖವಾಗಿ ನೆಚ್ಚಿಕೊಂಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಕಾಣಲಿಲ್ಲ. ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊತ್ತಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಅರ್ಧ ಸರ್ಕಾರವೇ ಜಮಖಂಡಿಯಲ್ಲಿ ವಾಸ್ತವ್ಯ ಹೂಡಿತ್ತು. ಪ್ರಚಾರದ ವೇಳೆ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರ ನಡುವೆ ಸಮನ್ವಯತೆ ಎದ್ದುಕಂಡಿತ್ತು.

ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದೆಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದ ಕುರುಬ ಸಮುದಾಯದ ಮುಖಂಡ ಶ್ರೀ ಶೈಲ ದಳವಾಯಿ ಅವರನ್ನು ಸಿದ್ದರಾಮಯ್ಯ ಮರಳಿ ಪಕ್ಷಕ್ಕೆ ಕರೆತಂದು ಪ್ರಚಾರದ ವೇಳೆ ಜೊತೆಗಿಟ್ಟುಕೊಂಡು ಸುತ್ತಿದರು. ಭಿನ್ನಮತ, ಅತೃಪ್ತಿಯನ್ನು ಆರಂಭದಲ್ಲಿಯೇ ಚಿವುಟಿ ಹಾಕಿ ಪಕ್ಷಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲಾಯಿತು.

ಆದರೆ ಬಿಜೆಪಿಯಲ್ಲಿ ಇದಕ್ಕೆ ವ್ಯತಿರಿಕ್ತ ವಾತಾವರಣವಿತ್ತು. ಶ್ರೀಕಾಂತ ಕುಲಕರ್ಣಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತಯೇ ಟಿಕೆಟ್ ಆಕಾಂಕ್ಷಿಗಳು ಭಿನ್ನರಾಗ ಹಾಡಿದರು. ಮುಖಂಡರಾದ ಸಂಗಮೇಶ ನಿರಾಣಿ, ಬಸವರಾಜ ಸಿಂಧೂರ ಮುನಿಸು ತಣಿಸಲು ಕೊನೆಯ ಗಳಿಗೆಯಲ್ಲಿ ಯಡಿಯೂರಪ್ಪ ಬರಬೇಕಾಯಿತು.

ನಿವೃತ್ತಿ ಘೋಷಣೆಯೇ ಮುನ್ನುಡಿ: ನಿರಾಣಿ ಸಹೋದರರ ಮನವೊಲಿಕೆಗೆ ಮುಂದಿನ ಬಾರಿ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಸೋತರೂ, ಗೆದ್ದರೂ ಇದೇ ಕೊನೆಯ ಚುನಾವಣೆ ಎಂದು ಶ್ರೀಕಾಂತ ಕುಲಕರ್ಣಿ ಘೋಷಿಸಿದ್ದು ಮುಳುವಾಯಿತು. ಮುಂದೆ ಚುನಾವಣೆಗೆ ನಿಲ್ಲದಿದ್ದರೆ ಈ ಬಾರಿ ಗೆದ್ದರೂ ಕೆಲಸ ಮಾಡುವುದಿಲ್ಲ ಎಂಬ ಭಾವ ಮತದಾರರಲ್ಲಿ ಮೊಳೆಯಿತು. ನಿವೃತ್ತಿ ಘೋಷಣೆ ಅನುಕಂಪ ಸೃಷ್ಟಿಸುವ ಬದಲು ಹಿನ್ನಡೆಗೆ ಕಾರಣವಾಯಿತುಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪರ ಪ್ರಚಾರದ ಉಸ್ತುವಾರಿ ಹೊತ್ತಿದ್ದ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಇಲ್ಲಿಯೇ ವಾಸ್ತವ್ಯ ಹೂಡಿ ಚುನಾವಣೆ ತಂತ್ರಗಾರಿಕೆ ರೂಪಿಸಲು ನೆರವಾದರು. ಆದರೆ ಬಿಜೆಪಿ ಉಸ್ತುವಾರಿ ಹೊತ್ತಿದ್ದ ಜಗದೀಶ ಶೆಟ್ಟರ್ ಯೂರೋಪ್ ಪ್ರವಾಸಕ್ಕೆ ತೆರಳಿದ್ದರು. ಮತದಾನಕ್ಕೆ ಐದು ದಿನ ಬಾಕಿ ಇರುವಾಗ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಯಡಿಯೂರಪ್ಪ ಎರಡು ಬಾರಿ ಮಾತ್ರ ಬಂದು ಹೋದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಕೇಂದ್ರ ಸಚಿವ ಅನಂತಕುಮಾರ ತಮ್ಮ ರಾಜಕೀಯ ಗುರು (ಶ್ರೀಕಾಂತ ಕುಲಕರ್ಣಿ) ಪರ ಪ್ರಚಾರಕ್ಕೆ ಬಾರದಿರುವುದು ಈ ಹಿನ್ನಡೆಗೆ ಕಾರಣ ಎಂದು ಅರ್ಥೈಸಲಾಗುತ್ತಿದೆ.

ಬಿಜೆಪಿಯ ಯಶಸ್ಸಿನ ಮಂತ್ರವಾದ ಸಂಘಟನೆ ಹಾಗೂ ವ್ಯವಸ್ಥಿತ ತಂತ್ರಗಾರಿಕೆ ಈ ಬಾರಿ ಕಾಂಗ್ರೆಸ್ ಪಾಳಯದಲ್ಲಿ ಕಂಡುಬಂದಿತು. ಕಳೆದ ಬಾರಿ ಬಿಜೆಪಿಗೆ ಭರ್ಜರಿ ಲೀಡ್ ತಂದುಕೊಟ್ಟಿದ್ದ ಸಾವಳಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಈ ಬಾರಿ ಆನಂದ ನ್ಯಾಮಗೌಡಗೆ 4 ಸಾವಿರ ಮತಗಳ ಲೀಡ್ ಸಿಕ್ಕಿರುವುದು ಇದಕ್ಕೆ ಸಾಕ್ಷಿ. ಜೊತೆಗೆ ಜಮಖಂಡಿ ನಗರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಇನ್ನಷ್ಟು ಹೆಚ್ಚಿಸಿಕೊಂಡಿತು. ಒಟ್ಟಾರೆ ಬಿಜೆಪಿಯೊಳಗಿನ ಒಳಬೇಗುದಿಗೆ ಫಲಿತಾಂಶ ಕನ್ನಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT