ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಮಸೂದೆಗಳು ವಾಪಸು

ಕೆಪಿಎಸ್‌ಸಿಯಲ್ಲಿ ‘ಮೀಸಲು’ ಮಸೂದೆಗೆ ರಾಜ್ಯಪಾಲರ ಅಂಗೀಕಾರ
Last Updated 6 ಜನವರಿ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಬಂಧನೆಗೆ ವ್ಯತಿರಿಕ್ತವಾಗಿದೆ’ ಎಂಬ ಅನುಮಾನ ವ್ಯಕ್ತಪಡಿಸಿ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ’ ಮತ್ತು ‘ಡಾ. ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಮಸೂದೆ’ ವಾಪಸು ಮಾಡಿರುವ ರಾಜ್ಯಪಾಲ ವಜುಭಾಯಿ ವಾಲಾ, ರಾಷ್ಟ್ರಪತಿ ತೀರ್ಮಾನಕ್ಕೆ ಮೀಸಲಿಡುವುದಾಗಿ ಷರಾ ಬರೆದಿದ್ದಾರೆ.

‘ಎರಡು ಮಸೂದೆಗಳನ್ನು ರಾಜ್ಯಪಾಲರು ಶುಕ್ರವಾರ (ಜ. 4) ವಾಪಸು ಕಳುಹಿಸಿದ್ದಾರೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಜಿ. ಪರಮೇಶ್ವರ ಅವರ ಗಮನಕ್ಕೆ ತರಲಾಗಿದೆ. ಅವುಗಳ ಅನುಮೋದನೆಗೆ ಶೀಘ್ರವೇ ರಾಷ್ಟ್ರಪತಿಗೆ ಕಳುಹಿಸಲಾಗುವುದು’ ಎಂದು ಸಂಸದೀಯ ಇಲಾಖೆಯ ಮೂಲಗಳು ತಿಳಿಸಿವೆ.

ಆದರೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನೇರ ನೇಮಕಾತಿ ವೇಳೆ ಮೀಸಲು ಅನ್ವಯಿಸುವ ಕುರಿತು ಕಾಯ್ದೆ ರೂಪಿಸಲು ತಂದ ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ)–2018’ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯಪಾಲರ ಷರಾ: ‘ಯುಜಿಸಿ ಮಾರ್ಗಸೂಚಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ವಿಶ್ವವಿದ್ಯಾಲಯಗಳ ಮಸೂದೆಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಇದರಿಂದ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನುವುದು ನನ್ನ ಭಾವನೆ. ಈ ಬಗ್ಗೆ ನಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಬದಲು ರಾಷ್ಟ್ರಪತಿಗೆ ಮೀಸಲಿಡುತ್ತೇನೆ’ ಎಂದು ರಾಜ್ಯಪಾಲರು ಷರಾ ಬರೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸಂವಿಧಾನದ ಏಳನೇ ಷೆಡ್ಯೂಲ್‌ನಲ್ಲಿ ಶಿಕ್ಷಣದ ಪ್ರಸ್ತಾಪವಿದ್ದು, ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರ ಅನ್ವಯ, ಶಿಕ್ಷಣದ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ತಮ್ಮದೇ ಕಾಯ್ದೆ ಮಾಡಿಕೊಳ್ಳಲು ಅವಕಾಶವಿದೆ ಎಂಬ ಅಂಶವನ್ನು ಮಸೂದೆ ಜೊತೆ ಸಲ್ಲಿಸಿದ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳಿಲ್ಲ. ಅದರ ಬದಲು ಎರಡೂ ಮಸೂದೆಗಳು ಯುಜಿಸಿ ನಿಯಮಗಳಿಗೆ ಬಾಧಕವಾಗುತ್ತವೆ ಎಂಬ ಸಂದೇಹ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯಗಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮ್ಮದೇ ಕಾಯ್ದೆ ರೂಪಿಸಿಕೊಳ್ಳಬಹುದು ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಯುಜಿಸಿ ನಿಬಂಧನೆಗಳ ಪಾಲನೆ ಕಡ್ಡಾಯವೇನೂ ಅಲ್ಲ. ಆದರೆ, ಸಲಹೆಯಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದೂ ತೀರ್ಪಿನಲ್ಲಿದೆ. ಆದರೂ ನೆಪ ಹೇಳಿ ರಾಜ್ಯಪಾಲರು ಅಂಕಿತ ಹಾಕಲು ಹಿಂದೇಟು ಹಾಕಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಈ ಮಸೂದೆಗಳನ್ನು ಯಥಾವತ್ತಾಗಿ ರಾಷ್ಟ್ರಪತಿಗೆ ಕಳುಹಿಸಲಾಗುವುದು. ಅವರು ತಿರಸ್ಕರಿಸಲು ಯಾವುದೇ ಕಾರಣಗಳಿಲ್ಲ. ಆದರೆ, ಕೇಂದ್ರ ಗೃಹ ಸಚಿವಾಲಯದ ಮೂಲಕ ಅವರ ಬಳಿ ತಲುಪಿ ಅನುಮೋದನೆಗೊಳ್ಳಲು ಕನಿಷ್ಠ ಆರು ತಿಂಗಳು ತಗುಲಬಹುದು ಎಂದೂ ಮೂಲಗಳು ಅಂದಾಜಿಸಿವೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಎರಡೂ ಮಸೂದೆಗಳನ್ನು ಮಂಡಿಸಲಾಗಿತ್ತು. ಆದರೆ, ಸುದೀರ್ಘ ಕಾಲ ತಮ್ಮ ಬಳಿ ಇಟ್ಟುಕೊಂಡಿದ್ದ ರಾಜ್ಯಪಾಲರು, ತಮ್ಮ ಅಧಿಕಾರ ಅವಧಿಯ ಕೊನೆ ಹಂತದಲ್ಲಿ ಅಂಕಿತ ಹಾಕಲು ನಿರಾಕರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯಪಾಲರ ಕೈ ಕಟ್ಟಿ ಹಾಕಲಿದೆ?: ರಾಜ್ಯಪಾಲರ ಅಧಿಕಾರದ ಅವಧಿ ಒಂಬತ್ತು ತಿಂಗಳು ಮಾತ್ರ ಇದೆ. ಕೆಲವು ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ನಡೆಯಬೇಕಿದೆ. ಉನ್ನತ ಶಿಕ್ಷಣ ಇಲಾಖೆಯ ಅಧೀನದ ಎಲ್ಲ ವಿಶ್ವವಿದ್ಯಾಲಯಗಳ ಕಾರ್ಯ ನಿರ್ವಹಣೆಯಲ್ಲಿ ಏಕರೂಪ ತರುವ ಉದ್ದೇಶದಿಂದ ಕಾಯ್ದೆ ರೂಪಿಸಲು ತೀರ್ಮಾನಿಸಲಾಗಿತ್ತು. ಕಾಯ್ದೆ ಜಾರಿಗೆ ಬಂದರೆ ಕುಲಪತಿಗಳ ನೇಮಕದ ವಿಚಾರದಲ್ಲಿ ರಾಜ್ಯಪಾಲರ ಕೈ ಕಟ್ಟಿಹಾಕಿದಂತಾಗುತ್ತದೆ. ಈ ಕಾರಣಕ್ಕೆ ಅವರು ಈ ನಿಲುವು ತಳೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

**

ನೇರ ನೇಮಕಾತಿಯಲ್ಲಿಮೀಸಲು– ಗೆಜೆಟ್‌ನಲ್ಲಿ ಪ್ರಕಟ

ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ, ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಗಳಿಗೆ ಅಭ್ಯರ್ಥಿಗಳ ಆಯ್ಕೆಯ ಕಾರ್ಯ ವಿಧಾನವನ್ನು ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯ ವಿಧಾನ)’ ಮಸೂದೆಯಲ್ಲಿ ವಿವರಿಸಲಾಗಿದೆ.

1994ರ ಮೇ 3ರಿಂದಲೇ ಈ ಕಾಯ್ದೆ ಪೂರ್ವಾನ್ವಯಗೊಳಿಸಿ ಶನಿವಾರ (ಜ.5) ರಾಜ್ಯಪತ್ರದಲ್ಲಿಪ್ರಕಟಿಸಲಾಗಿದೆ ಎಂದು ಸಂಸದೀಯ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT