ಗುರುವಾರ , ಜುಲೈ 29, 2021
21 °C
ದೇವಸ್ಥಾನಗಳಲ್ಲಿ ದರ್ಶನ ಮಾತ್ರ

ಹೋಟೆಲ್‌, ಮಾಲ್‌ ನಾಳೆ ಶುರು: ಎಲ್ಲೆಡೆ ವ್ಯಕ್ತಿಗತ ಅಂತರ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಸೋಮವಾರದಿಂದ (ಜೂನ್‌ 8) ‘ಅನ್‌ಲಾಕ್‌ 1.0’ ಆರಂಭವಾಗಲಿದೆ. ಮಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ಸಿಗಲಿದೆ. ಅಲ್ಲದೆ, ದೇವಸ್ಥಾನಗಳಲ್ಲೂ ದೇವರ ದರ್ಶನಕ್ಕೆ ಅವಕಾಶವಾಗಲಿದೆ.

ಈ ನಿಟ್ಟಿನಲ್ಲಿ ಯಾವ್ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಭಾನುವಾರ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಎಲ್ಲ ಕಡೆಗಳಲ್ಲಿ ಕಡ್ಡಾಯವಾಗಿ ವ್ಯಕ್ತಿಗತ ಅಂತರ ಕಾಪಾಡಬೇಕು, ಮಾಸ್ಕ್‌ ಧರಿಸಬೇಕು. ಎಲ್ಲ ಸ್ಥಳಗಳ ಪ್ರವೇಶದ್ವಾರದಲ್ಲಿ ಸ‍್ಯಾನಿಟೈಸರ್‌ ಇಡಬೇಕು. ಥರ್ಮಲ್‌ ಸ್ಕ್ಯಾನರ್‌ ಮೂಲಕ ತಪಾಸಣೆ ನಡೆಸಬೇಕು ಎಂಬ ಷರತ್ತು ವಿಧಿಸಲಾಗುತ್ತದೆ.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರವಾಸೋದ್ಯಮ, ಸಾರಿಗೆ ಇಲಾಖೆ ಮತ್ತು ಇತರ ಭಾಗೀದಾರರ ಜೊತೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ, ‘ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಲಾಗುವುದು.

ಆದರೆ, ನಿಗದಿಪಡಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯ’ ಎಂದರು.

ಷರತ್ತುಗಳು ಏನೇನು?
* ರೋಗಲಕ್ಷಣಗಳಿಲ್ಲದ ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು
* ಮಾಲ್‌ಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಮಾಡಬೇಕು
* ಹೋಟೆಲ್‌, ಫುಡ್ ಕೋರ್ಟ್‌ಗಳ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ
* ಆತಿಥ್ಯ ನೀಡುವವರು ಬಂದವರ ಇತಿಹಾಸ, ವೈದ್ಯಕೀಯ ವಿವರ ಪಡೆದುಕೊಳ್ಳಬೇಕು. ಗುರುತಿನ ಚೀಟಿಯ ಜೊತೆಗೆ ಸ್ವಯಂ ದೃಢೀಕೃತ ಅರ್ಜಿ ಭರ್ತಿ ಮಾಡಬೇಕು
* ಧಾರ್ಮಿಕ ಸ್ಥಳಗಳಲ್ಲಿ ಪ್ರತ್ಯೇಕ ನೆಲಹಾಸು ಬಳಸಬೇಕು, ಸಾಮೂಹಿಕವಾಗಿ ಹಾಡುವುದು, ಭಜನೆಗೆ ಅವಕಾಶ ಇಲ್ಲ
* ದೇವಸ್ಥಾನಗಳಲ್ಲಿ ಭಕ್ತರು ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಟ್ಟುವಂತಿಲ್ಲ
* ಭಕ್ತರು, ದೇವಸ್ಥಾನದ ಎಲ್ಲ ಸಿಬ್ಬಂದಿ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಅಳವಡಿಸಿರಬೇಕು
* 65 ವಯಸ್ಸಿನ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ದೇವಸ್ಥಾನ ಪ್ರವೇಶ ನಿಷಿದ್ಧ

ಯಾವುದೆಲ್ಲ ‘ಅನ್‌ಲಾಕ್‌’
* ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು
* ಎಲ್ಲ ಧಾರ್ಮಿಕ ಸ್ಥಳಗಳು (ದೇವಸ್ಥಾನಗಳಲ್ಲಿ ತೀರ್ಥ– ಪ್ರಸಾದ ಇಲ್ಲ)
* ಶಾಪಿಂಗ್ ಮಾಲ್‌ಗಳು (ಮಕ್ಕಳ ಆಟದ ಪ್ರದೇಶ, ಸಿನಿಮಾ ಮಂದಿರ ತೆರೆಯುವಂತಿಲ್ಲ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು