ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಇನ್ನೂ ಇದೆ ಅಸ್ಪೃಶ್ಯತೆ

Last Updated 8 ಮಾರ್ಚ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ದೇವಸ್ಥಾನ, ಹೋಟೆಲ್‌, ಕ್ಷೌರದಂಗಡಿಗಳಿಗೆ ಪ್ರವೇಶ ನಿಷೇಧ;ಗೊಲ್ಲ, ಭೋವಿ ಹಾಗೂ ನಾಯಕರ ಹಟ್ಟಿಗಳ ಒಳಗೂ ಬಾರದಂತೆ ಬಹಿಷ್ಕಾರ; ಸಾಮೂಹಿಕ ವಿವಾಹದಲ್ಲಿ ತಾರತಮ್ಯ...

ರಾಜ್ಯದ ಹಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನೂ ಆಚರಣೆಯಲ್ಲಿರುವ ಸ್ವರೂಪವಿದು. ಅಸ್ಪೃಶ್ಯತೆಯಿಂದ ನೋವು ಅನುಭವಿಸಿದ ದಲಿತರು, ‘ಸಂಘರ್ಷ ಬೇಡ’ ಎಂದು ಸನ್ನಿವೇಶಕ್ಕೆ ಒಗ್ಗಿಕೊಂಡು ಜೀವನ ಸಾಗಿಸುತ್ತಿರುವುದು ಗ್ರಾಮಗಳಲ್ಲಿ ಎದ್ದು ಕಾಣುತ್ತದೆ.

ಯಾದಗಿರಿಯ ಹಲವು ಗ್ರಾಮಗಳಲ್ಲಿ ದಲಿತರು ಸತ್ತರೆ ಹೋಟೆಲ್‌ ‘ಬಂದ್‌’ ಮಾಡುವ ಪರಿಪಾಟವಿದೆ. ಚಿತ್ರದುರ್ಗದ ಹಟ್ಟಿಗಳಲ್ಲಿ ಮಾದಿಗ ಸಮುದಾಯದವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕ್ಷೌರ ಮಾಡಲು ನಿರಾಕರಿಸಿದ ಪ್ರಕರಣಗಳಂತೂ ಹೆಚ್ಚು–ಕಡಿಮೆ ಎಲ್ಲ ಜಿಲ್ಲೆಗಳಲ್ಲಿಯೂ ವರದಿಯಾಗಿವೆ. ಕೆಲವು ಗ್ರಾಮಗಳಲ್ಲಿ ದಲಿತರು ಸತ್ತರೆ ಊರಿನ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೂ ಅವಕಾಶ ನೀಡುತ್ತಿಲ್ಲ. ಆದರೆ, ಅಲ್ಲೊಂದು ಇಲ್ಲೊಂದು ದೇವಸ್ಥಾನ ಪ್ರವೇಶ ಘಟನೆ ಬಿಟ್ಟರೆ, ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಯಾವ ಪ್ರಯತ್ನವೂ ಆಗಿಲ್ಲ.

ವಿಧಾನಸಭೆಯಲ್ಲಿ ಮೊನ್ನೆ ಸಂವಿಧಾನದ ಕುರಿತು ಚರ್ಚೆ ನಡೆಯುವಾಗ ರಾಜ್ಯದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ ಎಂಬುದು ಪ್ರಸ್ತಾಪವಾಗಿತ್ತು. ಕೆಲವು ಶಾಸಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಸದ್ಯ ಅಂತಹವಾತಾವರಣ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂಬ ವಾದವೂ ಕೇಳಿಬಂದಿತ್ತು. ವಾಸ್ತವಾಂಶವನ್ನು ತಿಳಿದುಕೊಳ್ಳಲು ‘ಪ್ರಜಾವಾಣಿ’ ಹಲವು ಗ್ರಾಮಗಳಿಗೆ ಭೇಟಿ ನೀಡಿದಾಗ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಹಲವು ಸಾಕ್ಷ್ಯಗಳು ದೊರೆತವು.

ದಲಿತರು ಸತ್ತರೆ ಹೋಟೆಲ್‌ ಬಂದ್‌
ಯಾದಗಿರಿ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ದಲಿತರಿಗೆ ಹೋಟೆಲ್‌, ಕ್ಷೌರದಂಗಡಿಗಳಲ್ಲಿ ಪ್ರವೇಶವಿಲ್ಲ. ಪ್ರತ್ಯೇಕ ಲೋಟ ಮತ್ತು ಜಾಗ ಇಂದಿಗೂ ಇದೆ. ದಲಿತರು ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರಕ್ಕೆ ಬರುವವರು ತಮ್ಮ ಹೋಟೆಲ್‌ಗೆ ಬಂದಾರು ಎಂಬ ಕಾರಣಕ್ಕೆ ಮೇಲ್ವರ್ಗದವರು ತಮ್ಮ ಹೋಟೆಲ್‌ಗಳನ್ನು ಬಂದ್‌ ಮಾಡುವುದು ಕೆಲ ಗ್ರಾಮಗಳಲ್ಲಿ ರೂಢಿ.

ತಾಲ್ಲೂಕಿನ ಹೊನಗೇರಾ, ಕೋಟಗೇರಾ ಗ್ರಾಮಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಮಾಹಿತಿ ನೀಡಲು ಜನ ಹಿಂಜರಿದರೂ ವಾಸ್ತವಸ್ಥಿತಿ ಕಣ್ಣಿಗೆ ಕಾಣಿಸುತ್ತಿತ್ತು.

‘ಊರಿಗೆ ನೆಂಟರು ಬಂದಾಗ ಹೋಟೆಲ್‌ಗೆ ಹೋಗಬೇಕಾಗುತ್ತದೆ. ಅಲ್ಲಿ ನಮಗೆ ಪ್ರತ್ಯೇಕ ವ್ಯವಸ್ಥೆ ಇರುವುದು ಮುಜುಗರ ಉಂಟುಮಾಡುತ್ತದೆ.ಆದರೂ, ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಗೆ ಹೊಂದಿಕೊಂಡಿದ್ದೇವೆ’ ಎನ್ನುತ್ತಾರೆ ಕೋಟಗೇರಾ ಗ್ರಾಮದ ರಾಮಯ್ಯ.

‘ಮಕ್ಕಳಿಗೆ ಊರಿನಲ್ಲಿರುವ ಕ್ಷೌರದಂಗಡಿಯಲ್ಲಿ ಕೂದಲು ಕತ್ತರಿಸುವುದಿಲ್ಲ. ಹೀಗಾಗಿ ನಮ್ಮ ಮಕ್ಕಳ ಕೂದಲನ್ನು ನಾವೇ ಮನೆ ಬಳಿಯೇ ಕತ್ತರಿಸುತ್ತೇವೆ. ನಾವು ಬಂದಳ್ಳಿ ಗ್ರಾಮಕ್ಕೆ ತೆರಳಿ ಕ್ಷೌರ ಮಾಡಿಸಿಕೊಂಡು ಬರುತ್ತೇವೆ’ ಎಂದು ಹೊನಗೇರಾ ಗ್ರಾಮದ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳುತ್ತಾರೆ.

‘ನೀರು ಪಡೆಯದಂತೆ ಹಿಂದೆ ದಲಿತರಿಗೆ ಬಹಿಷ್ಕಾರ ಹಾಕಿದ್ದರು. ನೀರು ನೀಡಿದವರಿಗೆ ₹ 10 ಸಾವಿರ ದಂಡ ಹಾಕುತ್ತೇವೆ ಎಂದೂ ಮೇಲ್ವರ್ಗದವರು ಹೇಳಿದ್ದರು. ಈಗಲೂ ದಲಿತರನ್ನು ನೋಡಿದರೆ ಗುರಾಯಿಸುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥರಾಜಪ್ಪ.

ಹಟ್ಟಿ ಪ್ರವೇಶವೂ ಇಲ್ಲಿ ನಿಷಿದ್ಧ!
ಚಿತ್ರದುರ್ಗ: ಜಿಲ್ಲೆಯ ಗೊಲ್ಲ, ಭೋವಿ ಹಾಗೂ ನಾಯಕರ ಹಟ್ಟಿಗಳಿಗೆ ಮಾದಿಗ ಸಮುದಾಯದವರ ಪ್ರವೇಶ ಇಂದಿಗೂ ನಿಷಿದ್ಧ.

ಹಟ್ಟಿ ವ್ಯಾಪ್ತಿಯನ್ನು ಗುರುತಿಸಿ ನಿರ್ಮಿಸಿದ ‘ಉದಿಬಾಗಿಲು’ ಅನ್ನು ಎಡಗೈ ಸಮುದಾಯದ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ಹೀಗೆ ‘ಉದಿಬಾಗಿಲು’ ದಾಟಿದರೆ ಹಟ್ಟಿ ಮೈಲಿಗೆಯಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಹಟ್ಟಿ ಮೈಲಿಗೆಯಾದರೆ ಗೋಮೂತ್ರ ಪ್ರೋಕ್ಷಣೆ ಮಾಡಿ ಶುದ್ಧೀಕರಿಸಲಾಗುತ್ತದೆ.

ಎಡಗೈ ಸಮುದಾಯದ ರಾಜಕೀಯ ಮುಖಂಡರು, ಅಧಿಕಾರಿಗಳು ಹಟ್ಟಿ ಪ್ರವೇಶ ಮಾಡುವ ಪ್ರಯತ್ನ ಮಾಡಿಲ್ಲ. ಹಟ್ಟಿ ಒಳಗೆ ಹೋದರೆ ಒಳಿತಾಗುವುದಿಲ್ಲ ಎಂಬ ನಂಬಿಕೆಯನ್ನು ಬಿತ್ತಲಾಗಿದೆ. ಇಂತಹ ಮೌಢ್ಯಗಳನ್ನು ವಿರೋಧಿಸಿ ಹಟ್ಟಿಗೆ ಬಂದರೆ ಮನಃಪೂರ್ವಕವಾಗಿ ಸ್ವೀಕರಿಸುವುದಿಲ್ಲ.

ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡ ಕೆಲ ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು ಕೂಡ ಇಂತಹ ಅಸ್ಪೃಶ್ಯತೆಯ ನೋವು ಅನುಭವಿಸುತ್ತಿದ್ದಾರೆ. ಡೆಂಗಿ ಹಾವಳಿಯಿಂದ ನರಳುವ ಗ್ರಾಮಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಾರ್ವಾ ಸಮೀಕ್ಷೆ ಮಾಡಿತು. ರೆಡ್ಡಿ ಸಮುದಾಯದ ಆಶಾ ಕಾರ್ಯಕರ್ತೆಗೆ ಮಾತ್ರ ಮನೆಯೊಳಗೆ ಪ್ರವೇಶ ಸಿಕ್ಕಿತು. ಉಳಿದವರು ಮನೆ ಹೊರಗೆ ನಿಂತು ದಾಖಲೆ ಬರೆದುಕೊಂಡು ಆಸ್ಪತ್ರೆಗೆ ಮರಳಿದರು.

ಕ್ಷೌರ ಮಾಡಲು ಈಗಲೂ ನಿರಾಕರಣೆ
ಮೈಸೂರು: ನಂಜನಗೂಡು ತಾಲ್ಲೂಕಿನನಗರ್ಲೆಯಲ್ಲಿ ಹೋಟೆಲ್‌ ಮತ್ತು ದೇವಸ್ಥಾನಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶವಿಲ್ಲ. ಈ ಹಿಂದೆ ಕ್ಷೌರಕ್ಕೂ ಅವಕಾಶವಿರಲಿಲ್ಲ. ತಹಶೀಲ್ದಾರ್‌ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಿದ ಬಳಿಕ ಕ್ಷೌರದಂಗಡಿಗಳಿಗೆ ಪ್ರವೇಶ ದೊರೆಯುತ್ತಿದೆ.

‘ದಲಿತರು ಪ್ರತಿಭಟನೆ ಮಾಡಿದ್ದರಿಂದ ಕ್ಷೌರದಂಗಡಿ ಪ್ರವೇಶಿಸಲು ಅವಕಾಶ ಲಭಿಸಿದೆ. ಗ್ರಾಮದಲ್ಲಿ ಮೂರು ಹೋಟೆಲ್‌ಗಳಿದ್ದು, ದಲಿತರು ಹೊರಗಡೆಯೇ ಕುಳಿತುಕೊಳ್ಳಬೇಕು. ತಿಂಡಿಯನ್ನು ಪೇಪರ್ ಪ್ಲೇಟ್‌ನಲ್ಲಿ ನೀಡುತ್ತಾರೆ’ ಎಂದು ಸಾಮಾಜಿಕ ಕಾರ್ಯಕರ್ತ ನಗರ್ಲೆ ಎಂ.ವಿಜಯಕುಮಾರ್‌ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತಾರೆ.

ಈ ಕುರಿತು ಹೋಟೆಲ್‌ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ, ‘ಘರ್ಷಣೆ ಏಕೆ ಬೇಕು ಎಂದು ದಲಿತರೇ ಸುಮ್ಮನಿದ್ದಾರೆ’ ಎಂದು ಹೇಳುತ್ತಾರೆ.

ದೇವಸ್ಥಾನಗಳಿಗೆ ಈಗಲೂ ಇಲ್ಲ ಪ್ರವೇಶ
ಶಿವಮೊಗ್ಗ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೂ ಅಸ್ಪೃಶ್ಯತೆ ಆಚರಣೆ ಹೆಚ್ಚಾಗಿದೆ. ಭದ್ರಾವತಿ ಹಾಗೂ ಶಿವಮೊಗ್ಗ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚು.

ಜಿಲ್ಲೆಯ ಶೇ 70ರಷ್ಟು ಹಳ್ಳಿಗಳ ದೇವಸ್ಥಾನಗಳಲ್ಲಿದಲಿತರಿಗೆ ಪ್ರವೇಶ ನಿಷಿದ್ಧ. ಅಲ್ಲಿನ ಕ್ಷೌರಿಕರು ದಲಿತರ ತಲೆ ಕೂದಲು ಕತ್ತರಿಸುವುದಿಲ್ಲ. ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ತಾಲ್ಲೂಕಿನ ಕೆರೆ ಬೀರನಹಳ್ಳಿ, ತಡಸ, ಮಂಗೋಟೆ, ಗುಂಡೇರಿ ಬೊಮ್ಮನಕಟ್ಟೆ, ಗುಡಮಗಟ್ಟೆ, ಕಲ್ಲಿಹಾಳ್, ಆದ್ರಿಹಳ್ಳಿ, ಸುದ್ಲಿಪುರ, ನಾಗಸಮುದ್ರ, ತಟ್ಟೆಹಳ್ಳಿ, ಅಗಸನಹಳ್ಳಿ, ಎಮ್ಮೆಹಟ್ಟಿ ಮತ್ತಿತರ ಗ್ರಾಮಗಳಲ್ಲಿ ಈಗಲೂಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ.

ಭದ್ರಾವತಿ ತಾಲ್ಲೂಕು ಮಂಗೋಟೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ, ಬಹಿಷ್ಕಾರದ ವಿರುದ್ಧ ಸಿಡಿದೆದ್ದ ದಲಿತರು, ಮೇಲ್ಜಾತಿಯವರ ವಿರುದ್ಧ ಎಂಟು ವರ್ಷಗಳ ಹೋರಾಟ ನಡೆಸಿದ್ದರು. ಮೇಲ್ಜಾತಿಯವರ ಜಮೀನಿಗೆ ಕೂಲಿ ಕೆಲಸಕ್ಕೆ ಹೋಗದಿದ್ದರೆಜೀವನ ನಿರ್ವಹಣೆ ಕಷ್ಟ. ಅದಕ್ಕಾಗಿ ಪ್ರತಿ ಕುಟುಂಬಕ್ಕೂ ಕನಿಷ್ಠ ಒಂದು ಎಕರೆ ಭೂಮಿ ನೀಡಬೇಕು ಎಂದು ಹೋರಾಟ ನಡೆಸಿದ್ದರು.ಹೋರಾಟಕ್ಕೆ ಮಣಿದಸರ್ಕಾರ ಗ್ರಾಮದ 32 ಕುಟುಂಬಗಳಿಗೆ ತಲಾ ಒಂದು ಎಕರೆ ನೀರಾವರಿ ಭೂಮಿ ಮಂಜೂರು ಮಾಡಿತ್ತು.

‘ದೇವಸ್ಥಾನದೊಳಗೆ ಈಗಲೂ ನಮ್ಮನ್ನುಬಿಡುವುದಿಲ್ಲ. ಕ್ಷೌರ ಮಾಡುವುದಿಲ್ಲ. ನಾವೂ ಹೋಗುವ ಪ್ರಯತ್ನ ಮಾಡಿಲ್ಲ. ಪೇಟೆಯಲ್ಲಿ ಕ್ಷೌರ ಮಾಡಿಸಿಕೊಂಡು ಬರುತ್ತೇವೆ. ನಮ್ಮ ದುಡಿಮೆ ನಾವು ಮಾಡುವ ಕಾರಣ ಸವರ್ಣೀಯರ ತಂಟೆಗೆ ಹೋಗುವುದಿಲ್ಲ’ ಎನ್ನುತ್ತಾರೆ ಗ್ರಾಮದ ಮಲ್ಲೇಶಪ್ಪ, ಹನುಮಂತಪ್ಪ, ನಾಗರಾಜ.

ಶಿವಮೊಗ್ಗ ತಾಲ್ಲೂಕಿನ ಸೂಗೂರಿನ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದಲಿತರ ಶವ ಹೂಳಲೂ ಅವಕಾಶ ಇರಲಿಲ್ಲ. ತುಂಗಭದ್ರಾ ನದಿಯ ತಟದಲ್ಲಿ ಹೂಳುವ ಅನಿವಾರ್ಯ ಇತ್ತು. ದಲಿತರು ಮೃತಪಟ್ಟಾಗ ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಂದಾಯ ಇಲಾಖೆ ದಲಿತರಿಗಾಗಿಯೇ ಒಂದು ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಿದೆ. ದಲಿತ ಮಹಿಳೆ ಗುತ್ಯಮ್ಮ ಮೃತದೇಹ ಹೊಸ ಜಾಗದಲ್ಲಿ ಅಂತ್ಯಸಂಸ್ಕಾರ ಕಂಡಿದೆ.

ಸಾಮೂಹಿಕ ವಿವಾಹದಲ್ಲೂ ಕಾಡಿದ ಕೀಳರಿಮೆ
ಕೊಪ್ಪಳ: ತಾಲ್ಲೂಕಿನ ತಿಗರಿಯಲ್ಲಿ ಈಚೆಗೆ ನಡೆದ ಸಾಮೂಹಿಕ ವಿವಾಹ ಮತ್ತೊಂದು ರೀತಿಯ ಅಸ್ಪೃಶ್ಯತೆಗೆ ಸಾಕ್ಷಿಯಾಯಿತು.

‘ಸರ್ವಧರ್ಮ ಸಾಮೂಹಿಕ ವಿವಾಹ’ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೂ ಮೇಲ್ಜಾತಿಯವರು ಊರ ಮಧ್ಯದ ಫಕೀರೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡರೆ, ದಲಿತ ಜೋಡಿಗಳು ತಮ್ಮ ಸಮುದಾಯ ಭವನದಲ್ಲಿ ಮದುವೆ ಮಾಡಿಕೊಂಡಿದ್ದವು. ಮೆರವಣಿಗೆ ಜತೆಯಾಗಿ ನಡೆದರೂ, ಒಂದೇ ವೇದಿಕೆ ಮೇಲೆ ಕೂಡದಂತೆ ನಿರ್ಬಂಧ ವಿಧಿಸಲಾಗಿತ್ತು. ಸಾಮೂಹಿಕ ಭೋಜನದಲ್ಲೂ ಗೊಂದಲ ಉಂಟಾಗಿ, ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಲಾಯಿತು.

‘ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ಪರಿಣಾಮ ಪ್ರಕರಣ ದಾಖಲಾಗಿದ್ದು, ಅದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿದೆ’ ಎನ್ನುತ್ತಾರೆ ದಲಿತ ಯುವಕ ಹನುಮೇಶ ಮ್ಯಾಗಳಮನಿ.

ಹೂಗ್ಯಂ ಘಟನೆ ಇನ್ನೂ ಹಸಿರಾಗಿದೆ
ಚಾಮರಾಜನಗರ: ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮೇಲ್ನೋಟಕ್ಕೆ ಕಾಣದಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇದೆ. ಆದರೆ, ಅವು ಬೆಳಕಿಗೆ ಬರುತ್ತಿಲ್ಲ. ಮೇಲ್ಜಾತಿಯವರು ಹಾಗೂ ದಲಿತರು ಇಬ್ಬರೂ ಅದಕ್ಕೆ ಒಗ್ಗಿಕೊಂಡಿದ್ದಾರೆ.

ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಮತ್ತು ಹೋಟೆಲ್‌ಗಳಿಗೆ ಪ್ರವೇಶ ನಿರ್ಬಂಧ, ಅವರಿಗೆ ಕ್ಷೌರ ಮಾಡದೇ ಇರುವ ಪ್ರಕರಣ 2019ರ ಜುಲೈನಲ್ಲಿ ಬೆಳಕಿಗೆ ಬಂದಿತ್ತು. ಇದನ್ನು ‘ಪ್ರಜಾವಾಣಿ’ ವರದಿ ಮಾಡಿತ್ತು. ವರದಿ ಬಂದ ನಂತರ ಜಿಲ್ಲೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಿದ್ದರು.

ಪ್ರವೇಶ ನಿರ್ಬಂಧವಿರದಿದ್ದರೂ, ಕೆಲವು ದೇವಸ್ಥಾನಗಳಿಗೆ ದಲಿತರು ಹೋಗುವುದಿಲ್ಲ. ಹಿಂದಿನ ಸಂಪ್ರದಾಯ ಎಂದುಕೊಂಡು ಅದನ್ನೇ ಪಾಲಿಸಿಕೊಂಡು ಬರುವ ದಲಿತ ಸಮುದಾಯದ ಕೆಲವು ಹಿರಿಯರು ಮೇಲ್ವರ್ಗದವರ ಮನೆಯೊಳಗೂ ಪ್ರವೇಶಿಸುವುದಿಲ್ಲ.

‘ಮಾರೆಮ್ಮನಿಗೂ ಬೇಡವಾದರು’
ರಾಯಚೂರು:
ನಗರ ವ್ಯಾಪ್ತಿಯ ಅಸ್ಕಿಹಾಳ, ಯಕ್ಲಾಸಪುರ ಗ್ರಾಮಗಳಲ್ಲಿ ಮಾರೆಮ್ಮ ದೇವಸ್ಥಾನಗಳಿವೆ. ಪರಿಶಿಷ್ಟ ಪಂಗಡದವರೇ ಅಲ್ಲಿನ ಇಲ್ಲಿ ಪೂಜಾರಿಗಳು. ಪರಿಶಿಷ್ಟ ಜಾತಿಯವರನ್ನು ಇವರು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ.

ಪ್ರತಿವರ್ಷ ಕಾರಹುಣ್ಣಿಮೆಯಂದು ಜಾತ್ರೆ ನಡೆಯುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಕೆಲವು ಹಿಂದುಳಿದ ಜಾತಿಗಳ ಕುಟುಂಬಗಳು ಮಾರೆಮ್ಮ ದೇವಿಗೆ ಕುರಿ, ಕೋಳಿ ಬಲಿಕೊಟ್ಟು ಹರಕೆ ತೀರಿಸುತ್ತಾರೆ. ದೇವಸ್ಥಾನದ ಎದುರು ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಜನರು ಕುರಿ–ಕೋಳಿ ಬಲಿಕೊಟ್ಟ ಬಳಿಕವೇ ಪರಿಶಿಷ್ಟ ಜಾತಿ ಜನರ ಸರದಿ.

ಯಕ್ಲಾಸಪುರ ಮಾರೆಮ್ಮದೇವಿಯ ಪೂಜಾರಿ ಅವರನ್ನು ಭೇಟಿಯಾಗಿ ಜಾತ್ರೆ ಬಗ್ಗೆ ಚರ್ಚಿಸುತ್ತಲೇ ‘ಗುಡಿಯಲ್ಲಿ ಪರಿಶಿಷ್ಟ ಜಾತಿ ಜನರು ಬರುತ್ತಾರೆಯೇ’ ಎಂದು ಪ್ರಶ್ನೆ ಕೇಳಲಾಯಿತು. ‘ನಮ್ಮಲ್ಲೇನೂ ಅಂಥ ಭಾವನೆ ಇಲ್ಲ. ದೇವಸ್ಥಾನದಲ್ಲಿ ಬಂದವರಿಗೆ ಏನೂ ಅಂದಿಲ್ಲ. ಅವರಾಗಿಯೇ ಹೊರಗೆ ನಿಂತು ನಮಸ್ಕರಿಸಿ ಹೋಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT