ಮಂಗಳವಾರ, ಜೂಲೈ 7, 2020
28 °C
ವಿಡಿಯೊ ಸುದ್ದಿ

ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ: ಉಪೇಂದ್ರ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ನಟ, ನಿರ್ದೇಶಕ ಹಾಗೂ ‌ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದರು.

‘ನಾನಷ್ಟೇ ಅಲ್ಲ, ನನ್ನ ಜತೆಗೆ ತುಂಬಾ ಜನ ಪ್ರಜಾಕೀಯ ಪಕ್ಷದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ನಾಯಕರ ಹಿಂದೆ ಹೋಗಬೇಡಿ. ನೀವು ಸಂಬಳ ಕೊಟ್ಟು, ಕೆಲಸ ಮಾಡುವಂತಹ ಕೆಲಸಗಾರರನ್ನು ಇಟ್ಟುಕೊಳ್ಳಬೇ‌ಕು. ಅಂತಹ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಜನರಿಗೆ ಹೇಳುತ್ತಿದ್ದೇನೆ. ಇದು ಕ್ರಮೇಣ ಅವರಿಗೂ ಅರ್ಥವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಪಕ್ಷ ಸ್ಥಾಪಿಸಿದ ಹೊಸದರಲ್ಲಿ ಪಕ್ಷದ ಸಿದ್ಧಾಂತದ ಬಗ್ಗೆ ಎಲ್ಲರೂ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದರು. ಈಗ ನನ್ನನ್ನು ‘ನೀವು ಚುನಾವಣೆಗೆ ನಿಲ್ಲುವುದಿಲ್ಲವೇ’ ಎಂದು ಕೇಳುತ್ತಿದ್ದಾರೆ. ಖಂಡಿತಾ ನಾನು ಸಹ ಚುನಾವಣೆಗೆ ನಿಲ್ಲುತ್ತೇನೆ. ಕ್ಷೇತ್ರ ಯಾವುದೆಂದು ತೀರ್ಮಾನಿಸಿಲ್ಲ. ನಾನೂ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದರು.

‘ರಾಜಕಾರಣದಲ್ಲಿ ಜನರು ಗೆಲ್ಲಿಸಿದ್ದರೆ ಸಿನಿಮಾ ರಂಗದ ಕಡೆ ಬರಲು ಸಮಯ ಸಿಗುತ್ತಿರಲಿಲ್ಲ. ರಾಜಕಾರಣದಲ್ಲಿ ಜನರು ಕೆಲಸ ನೀಡದ ಕಾರಣಕ್ಕೆ ಮತ್ತೆ ನನ್ನ ಹಳೇ ವೃತ್ತಿ ಸಿನಿಮಾ ರಂಗಕ್ಕೆ ಮರಳಿದ್ದೇನೆ. ಮತ್ತೆ ಸಿನಿಮಾ ನಿರ್ದೇಶನಕ್ಕೂ ಇಳಿಯಬೇಕೆಂದು ನಿರ್ಧರಿಸಿದ್ದೇನೆ. ಒಂದು ಸಿನಿಮಾ ಮಾಡಲು ನನಗೆ ಒಂದು ಅಥವಾ ಒಂದು ಒಂದೂವರೆ ವರ್ಷ ಬೇಕಾಗುತ್ತದೆ. ಇದರ ನಡುವೆ ಮಧ್ಯಂತರ ಚುನಾವಣೆ ಬರುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ ಅದಕ್ಕೂ‌‌‌ ನಾನು ಸಿದ್ಧನಾಗಿರಬೇಕಾಗುತ್ತದೆ. ಹಾಗಾಗಿ ನಿರ್ದೇಶನಕ್ಕೆ ಇಳಿಯುವ ಬಗ್ಗೆ ಕಾದು ನೋಡುತ್ತಿದ್ದೇನೆ’ ಎಂದರು.

‘ರಾಜಕಾರಣ ನನಗೆ ಎಷ್ಟೋ ವರ್ಷಗಳ ಕನಸು ಸಹ ಆಗಿತ್ತು. ಪ್ರಜಾಕೀಯದ ಹಿಂದೆ ಎಷ್ಟೋ ಜನರ ಶ್ರಮ ಇದೆ. ಫೇಸ್‌ಬುಕ್‌ನಲ್ಲಿ ಪುಟ, ವಾಟ್ಸ್‌ ಆ್ಯಪ್‌ನಲ್ಲಿ ಗ್ರೂಪ್‌ ಮಾಡಿಕೊಂಡು ಜನರೇ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ತುಂಬಾ ಯುವಕರು ಪಕ್ಷದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಪ್ರಜಾಕೀಯದ ಸಿದ್ಧಾಂತ ಇಷ್ಟಪಟ್ಟಿದ್ದಾರೆ. ಪ್ರಜೆಗಳನ್ನು ಪ್ರಭುಗಳನ್ನಾಗಿಸಿ, ಜನಪ್ರತಿನಿಧಿಗಳು ಜನರ ಕೆಲಸ ಮಾಡುವ ಕೆಲಸಗಾರರಾಗಬೇಕು. ಸಂಬಳ ತೆಗೆದುಕೊಂಡು ಕೆಲಸ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕೆಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು