‘ಯುಪಿಐ’ ಬಳಸಿ ಬ್ಯಾಂಕ್‌ ಖಾತೆಗೆ ಕನ್ನ!

7
ಎನ್‌ಪಿಸಿಐ ಅಭಿವೃದ್ಧಿಪಡಿಸಿರುವ ವ್ಯವಸ್ಥೆ * ಒಟಿಪಿ ಬದಲು ಲಿಂಕ್‌ ಕಳುಹಿಸಿ ವಂಚನೆ

‘ಯುಪಿಐ’ ಬಳಸಿ ಬ್ಯಾಂಕ್‌ ಖಾತೆಗೆ ಕನ್ನ!

Published:
Updated:
Deccan Herald

ಬೆಂಗಳೂರು: ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು ಸ್ವೀಕೃತಿ ಪ್ರಕ್ರಿಯೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿರುವ ‘ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ)’ ವ್ಯವಸ್ಥೆ ಬಳಸಿಕೊಂಡು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಆನ್‌ಲೈನ್‌ ಖದೀಮರು ಕನ್ನ ಹಾಕುತ್ತಿದ್ದಾರೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯನ್ನು ಖದೀಮರು ದುರುಪಯೋಗಪಡಿಸಿಕೊಂಡಿದ್ದು, ಅವರ ಕೃತ್ಯದಿಂದಾಗಿ ನಗರದ 10 ಮಂದಿ ₹12 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಅವರೆಲ್ಲ, ತಮಗಾದ ವಂಚನೆ ಬಗ್ಗೆ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಆರ್‌ಬಿಐ ನೀಡಿರುವ ಸೂಚನೆಯಂತೆ ಕೆನರಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್ ಬ್ಯಾಂಕ್‌, ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ, ಆಂಧ್ರ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದವರು ‘ಯುಪಿಐ’ ವ್ಯವಸ್ಥೆ ಆಧರಿತ ಆ್ಯಪ್‌ ಮೂಲಕ ಬ್ಯಾಂಕಿಂಗ್‌ ಸೇವೆ ಒದಗಿಸುತ್ತಿದ್ದಾರೆ. ಇದೇ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಸರ್ಕಾರಿ ನೌಕರರು ಹಾಗೂ ಉದ್ಯಮಿಗಳ ಖಾತೆಯಿಂದ ಖದೀಮರು, ಲಕ್ಷಾಂತರ ರೂಪಾಯಿ ಡ್ರಾ ಮಾಡಿಕೊಂಡಿದ್ದಾರೆ’ ಎಂದು ಸೈಬರ್‌ ಕ್ರೈಂ ಠಾಣೆಯ ಪೊಲೀಸರು ಹೇಳಿದರು.

‘ಯುಪಿಐ ವ್ಯವಸ್ಥೆಯ ಆ್ಯಪ್‌ ಮೂಲಕ ಆನ್‌ಲೈನ್‌ ಬ್ಯಾಂಕಿಂಗ್‌ ಸೌಲಭ್ಯ ಪಡೆಯಲಿಚ್ಛಿಸುವ ಗ್ರಾಹಕರು, ಬ್ಯಾಂಕ್‌ ನೀಡಿರುವ ಮೊಬೈಲ್ ಸಂಖ್ಯೆಗೆ ತಮ್ಮ ಮೊಬೈಲ್‌ನಿಂದ ಸಂದೇಶ ಕಳುಹಿಸಬೇಕು. ಅದನ್ನು ಬ್ಯಾಂಕ್‌ನವರು ಅಂಗೀಕರಿಸುತ್ತಿದ್ದಂತೆ, ಒಟಿಪಿ ಬಳಸಿಕೊಂಡು ತಮ್ಮ ಮೊಬೈಲ್‌ ನಂಬರ್ ಜೋಡಣೆ ಮಾಡಿಕೊಂಡು ಸೌಲಭ್ಯ ಪಡೆಯಬಹುದು. ಈ ಪ್ರಕ್ರಿಯೆಯಲ್ಲೇ ಖದೀಮರು, ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ’ ಎಂದು ಹೇಳಿದರು. 

ಒಟಿಪಿ ಬದಲು ಲಿಂಕ್‌: ಸಾಮಾನ್ಯವಾಗಿ ಆನ್‌ಲೈನ್ ಬ್ಯಾಂಕಿಂಗ್‌ ಮೂಲಕ ವಹಿವಾಟು ನಡೆಸಲು ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ಅಗತ್ಯ ಇರುತ್ತದೆ. ಅಂಥ ಒಟಿಪಿ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ ಬಗ್ಗೆ ಬಹುಪಾಲು ಜನರು ಜಾಗೃತಗೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಖದೀಮರು, ಲಿಂಕ್‌ ಕಳುಹಿಸುವ ಮೂಲಕ ವಂಚಿಸುವ ದಾರಿ ಕಂಡುಕೊಂಡಿದ್ದಾರೆ.

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಗ್ರಾಹಕ ವೆಂಕಟೇಶ್‌ ಎಂಬುವರ ಮೊಬೈಲ್‌ಗೆ ಚೀನಿ ಭಾಷೆಯಲ್ಲಿ ಸಂದೇಶವೊಂದನ್ನು ಕಳುಹಿಸಿದ್ದ ಖದೀಮರು, ‘ನಿಮ್ಮ ಖಾತೆ ವಿವರ ಅಪ್‌ಡೇಟ್‌ ಮಾಡಬೇಕಿದೆ. ನಿಮಗೆ ಕಳುಹಿಸಿರುವ ಸಂದೇಶದಲ್ಲಿರುವ ಲಿಂಕ್‌ನನ್ನು 9223040040 ಮೊಬೈಲ್‌ ನಂಬರ್‌ಗೆ ಫಾರ್ವರ್ಡ್‌ ಮಾಡಿ’ ಎಂದಿದ್ದರು. ಅದನ್ನು ನಂಬಿ ವೆಂಕಟೇಶ್‌, ಸಂದೇಶವನ್ನು ಫಾರ್ವರ್ಡ್‌ ಮಾಡಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಅದೇ ಸಂದೇಶ ಬಳಸಿಕೊಂಡ ಖದೀಮರು, ವೆಂಕಟೇಶ್‌ ಅವರ ಖಾತೆ ವಿವರ ಬದಲಾಯಿಸಿ ತಮ್ಮ ಮೊಬೈಲ್ ನಂಬರ್‌ ಜೋಡಣೆ ಮಾಡಿಕೊಂಡಿದ್ದರು. ನಂತರ, ಬ್ಯಾಂಕ್‌ನಿಂದ ತಮ್ಮ ಮೊಬೈಲ್‌ಗೆ ಬಂದ ಒಟಿಪಿ ಬಳಸಿ ವೆಂಕಟೇಶ್‌ ಅವರ ಹೆಸರಿನಲ್ಲಿ ಯುಪಿಐ ಆ್ಯಪ್‌ನಲ್ಲಿ ಖಾತೆ ತೆರೆದಿದ್ದಾರೆ. ನಂತರವೇ ದೂರುದಾರರ ಬ್ಯಾಂಕ್‌ ಖಾತೆಯಲ್ಲಿದ್ದ ₹1 ಲಕ್ಷವನ್ನು ತಮ್ಮದೇ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಖದೀಮರು ಬಳಸಿದ್ದ ಮೊಬೈಲ್‌, ನಕಲಿ ದಾಖಲೆ ಕೊಟ್ಟು ಖರೀದಿಸಿದ್ದು ಎಂಬುದು ತನಿಖೆಯಿಂದ ಗೊತ್ತಾಗಿದೆ. ಖಾತೆ ನಿಷ್ಕ್ರಿಯಗೊಳಿಸುವ ಮುನ್ನವೇ ಖದೀಮರು, ಹಣ ಡ್ರಾ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ಆದರ್ಶ್ ಕಬ್ರಾ ಎಂಬುವರಿಗೂ ಸಂದೇಶ ಕಳುಹಿಸಿ, ಅವರ ಖಾತೆಯಿಂದ ₹ 1.95 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ. ಸೋನಿಯಾ ಎಂಬುವರು ಸಹ ₹ 1.50 ಲಕ್ಷ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಯಾವುದೇ ಬ್ಯಾಂಕ್‌ನವರು, ಮೊಬೈಲ್‌ಗೆ ಕರೆ ಮಾಡಿ ಒಟಿಪಿ ಅಥವಾ ಲಿಂಕ್‌ ಕಳುಹಿಸುವಂತೆ ಹೇಳುವುದಿಲ್ಲ. ಅಂಥ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅನುಮಾನಾಸ್ಪದ ಕರೆಗಳು ಬಂದರೆ, ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಬೇಕು’ ಎಂದು ಸೈಬರ್ ಕ್ರೈಂ ಪೊಲೀಸರು ಸಲಹೆ ನೀಡಿದರು.

**

‘ಎನ್‌ಪಿಸಿಐ’ಗೆ ಪತ್ರ ಬರೆದ ಸಿಐಡಿ ಅಧಿಕಾರಿಗಳು

‘ಯುಪಿಐ’ ಆ್ಯಪ್‌ನಿಂದಾಗಿ ಗ್ರಾಹಕರಿಗೆ ಆಗುತ್ತಿರುವ ವಂಚನೆ ಬಗ್ಗೆ ಸಿಐಡಿಯ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ಪತ್ರ ಬರೆದಿದ್ದಾರೆ.

‘ಆ್ಯಪ್‌ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಬ್ಯಾಂಕ್‌ನವರಿಗೆ ನೀಡಲಾಗಿದೆ. ಆ್ಯಪ್‌ ನೋಂದಣಿ ಪ್ರಕ್ರಿಯೆಯಲ್ಲೂ ಕೆಲವು ದೋಷಗಳಿವೆ. ಅದರಿಂದಾಗಿಯೇ ಗ್ರಾಹಕರ ಖಾತೆಗೆ ಖದೀಮರು ಕನ್ನ ಹಾಕುತ್ತಿದ್ದಾರೆ. ಆ ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕ್ರಮ ಕೈಗೊಳ್ಳಿ’ ಎಂದು ಪತ್ರದಲ್ಲಿ ಅಧಿಕಾರಿಗಳು ಕೋರಿದ್ದಾರೆ.

’ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಚೀನಿ ಭಾಷೆಯಲ್ಲಿ ಸಂದೇಶ: ‘ಆನ್‌ಲೈನ್‌ ಖದೀಮರು, ಚೀನಿ ಭಾಷೆಯಲ್ಲಿರುವ ಲಿಂಕ್‌ನ ಸಂದೇಶವನ್ನು ಗ್ರಾಹಕರ ಮೊಬೈಲ್‌ಗೆ ಕಳುಹಿಸಿ ವಂಚಿಸಿದ್ದಾರೆ. ಆದರೆ, ಸ್ಥಳೀಯರೇ ಈ ಕೃತ್ಯ ಎಸಗುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಂದೇಶದಲ್ಲಿರುವ ಲಿಂಕ್‌ನ ಕೋಡ್‌ಗಳನ್ನು ಡಿ–ಕೋಡ್‌ ಮಾಡಲು ತಜ್ಞರ ನೆರವು ಕೋರಿದ್ದೇವೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !