ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಜಾವೇದ್ ಪ್ರೇರಣೆ: ಯುಪಿಎಸ್‌ಸಿ 423ನೇ ರ‍್ಯಾಂಕ್ ವಿಜೇತೆ ಅಶ್ವಿಜಾ ಸಂದರ್ಶನ

ಕೋಚಿಂಗ್‌ ಶೇ 30, ಪರಿಶ್ರಮ ಶೇ 70
Last Updated 8 ಏಪ್ರಿಲ್ 2019, 8:29 IST
ಅಕ್ಷರ ಗಾತ್ರ

ಬಳ್ಳಾರಿ: ‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೋಚಿಂಗ್‌ ಶೇ 30 ಅಷ್ಟೇ. ಉಳಿದಿದ್ದೆಲ್ಲ ನಮ್ಮ ಪರಿಶ್ರಮ. ಕೋಚಿಂಗ್‌ ಪಡೆದು ಸತತ ಅಭ್ಯಾಸ ಮಾಡದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ...’

–2018ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 423ನೇ ರ‍್ಯಾಂಕ್ಗಳಿಸಿ ಗಮನ ಸೆಳೆದಿರುವ ಬಳ್ಳಾರಿಯ ಪ್ರತಿಭೆ ಬಿ.ವಿ.ಅಶ್ವಿಜಾಅವರ ಖಚಿತ ಅಭಿಪ್ರಾಯವಿದು. 3ನೇ ಪ್ರಯತ್ನದಲ್ಲೇ ಗಮನಾರ್ಹ ಸಾಧನೆ ಮಾಡಿರುವ ಈಕೆ ಎಂಜಿನಿಯರಿಂಗ್‌ ಕೊನೆಯ ಹಂತದಲ್ಲಿದ್ದಾಗಲೇ ಒಮ್ಮೆ ಪರೀಕ್ಷೆ ಎದುರಿಸಿದ್ದರು. ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್ಸ್‌ ಕೂಡ ಪಾಸಾಗಲಿಲ್ಲ. ಆದರೆ 3ನೇ ಪ್ರಯತ್ನದಲ್ಲೇ ಸಾಧನೆ ಮಾಡಿದವರು.

ಅಶ್ವಿಜಾ ಅವರ ಹಿರಿಯ ತಲೆಮಾರು ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಕೂಲಿ ಮಾಡಿ ಬದುಕು ನಡೆಸುತ್ತಿದ್ದರು. ಈಗ ಈ ಪುಟ್ಟ ಗ್ರಾಮಕ್ಕೂ ಅಶ್ವಿಜಾ ಹೆಮ್ಮೆ ಮೂಡಿಸಿದ್ದಾರೆ. ಅವರ ತಂದೆ ಬಿ.ವೆಂಕಟರಮಣ, ಸಿಂಧನೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌. ತಾಯಿ ಸುಮಾ ಗೃಹಿಣಿ, ಸಹೋದರ ಬಿ.ವಿ.ಚಾರುಲ್‌ ಬೆಂಗಳೂರಿನಲ್ಲಿ ವೈದ್ಯರು.

ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಓದಿದ್ದರೂ ಅಶ್ವಿಜಾ ಮುಖ್ಯಪರೀಕ್ಷೆ ಐಚ್ಛಿಕ ವಿಷಯವಾಗಿ ಮಾನವಿಕ ವಿಭಾಗದ ರಾಜಕೀಯ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ಮಾನವಿಕ ವಿಭಾಗದ ಕಡೆಗೆ ಬಂದಿದ್ದು ಕೂಡ ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ ಸತತ ಓದು ಸವಾಲನ್ನು ಕರಗಿಸಿತು. ಡ್ರೀಮ್‌ ವರ್ಲ್ಡ್ ಶಾಲೆಯಲ್ಲಿ 10ನೇ ತರಗತಿವರೆಗೆ, ನಂದಿ ಕಾಲೇಜಿನಲ್ಲಿ ಆಕೆ ಪಿಯು ಶಿಕ್ಷಣ ಪಡೆದಿದ್ದರು. ವೈದ್ಯಕೀಯ ಶಿಕ್ಷಣದ ಅವಕಾಶ ದೊರಕಿದರೂ ಆಕೆ ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿರುವ ಅಶ್ವಿತಾ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ.

* ಯುಪಿಎಸ್‌ಸಿ ಪರೀಕ್ಷೆ ಪಾಸಾಗಿರುವುದಕ್ಕೆ ಏನೆನ್ನಿಸುತ್ತದೆ?

ನನ್ನ ಬಾಲ್ಯದ ಕನಸು ನನಸಾದ ದಿನ. ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಶಿಕ್ಷಕರು, ದೊಡ್ಡ ಸಾಧನೆ ಮಾಡಬೇಕು ಎಂದು ಹುರಿದುಂಬಿಸಿದ್ದರು. ವೈದ್ಯಕೀಯ ಎಂಜಿನಿಯರಿಂಗ್‌ ಶಿಕ್ಷಣಕ್ಕಿಂತ ಸಾರ್ವಜನಿಕ ಸೇವೆ ಕ್ಷೇತ್ರಕ್ಕೆ ಹೋಗಬೇಕು ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ನನ್ನ ತಂದೆ ತಾಯಿ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿದರು.

* ನಿಮ್ಮ ಈ ಪ್ರಯತ್ನಕ್ಕೆ ಯಾರು ಪ್ರೇರಣೆ?

ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜಾವೇದ್‌ ಆಖ್ತರ್‌ ಅವರೇ ಪ್ರೇರಣೆ. ಬಳ್ಳಾರಿ ತಾಲ್ಲೂಕಿನ ಗುಡಾರನಗರದಲ್ಲಿ ಅವರು ಹಕ್ಕಿಪಿಕ್ಕಿ ಜನಾಂಗಕ್ಕೆ ವಸತಿ, ಶಿಕ್ಷಣ ಸೌಲಭ್ಯ ಕಲ್ಪಿಸಿದ್ದರು. ಅದನ್ನು ನನ್ನ ತಂದೆ ನನಗೆ ಹಲವು ಬಾರಿ ಹೇಳಿದ್ದರು.ಅವರಿಂದಲೇ ನಾನು ಪ್ರೇರಣೆಗೊಂಡೆ.

* ಈ ಪರೀಕ್ಷೆಯ ಯಶಸ್ಸಿಗಾಗಿ ನಿಮ್ಮ ಪ್ರಯತ್ನ ಹೇಗಿತ್ತು?

ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಅಂತಿಮ ವರ್ಷದಲ್ಲಿದ್ದಾಗಲೇ, ‘ಪರೀಕ್ಷೆ ಹೇಗಿರುತ್ತದೆಂದು ಒಮ್ಮೆ ತಿಳಿದುಕೊಳ್ಳೋಣ’ ಎಂದು 2015ರಲ್ಲಿ ಹಾಜರಾಗಿದ್ದೆ. 2016ರಲ್ಲಿ ಹೈದರಾಬಾದ್‌ನ ಅನಲಾಗ್‌ ಸಂಸ್ಥೆಯಲ್ಲಿ ಒಂದು ವರ್ಷ ತರಬೇತಿ ಪಡೆದೆ. 2017ರಲ್ಲಿ ಬೆಂಗಳೂರಿನಲ್ಲಿ ಇನ್‌ಸೈಟ್ಸ್‌ ಸಂಸ್ಥೆಯಲ್ಲಿ ಎಂಟು ತಿಂಗಳ ಕಾಲ ತರಬೇತಿ ಪಡೆದು ಅದೇ ವರ್ಷ ಪರೀಕ್ಷೆ ಬರೆದೆ. ಆದರೆ ಪ್ರಿಲಿಮ್ಸ್‌ ಕೂಡ ಪಾಸಾಗಲಿಲ್ಲ. 2018ರ ಪರೀಕ್ಷೆ ಸಲುವಾಗಿ ಜನವರಿಂದ 2019ರ ಜನವರಿವರೆಗೂ ಬಳ್ಳಾರಿಯ ಮನೆಯಲ್ಲೇ ಅಭ್ಯಾಸ ನಡೆಸಿದೆ. ದಿನವೂ ಎಂಟು ಗಂಟೆ ಅಭ್ಯಾಸ ನಡೆಸುತ್ತಿದ್ದೆ. ವಾರದಲ್ಲಿ ಒಂದು ದಿನ ಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೆ.

* ಸಂದರ್ಶನಕ್ಕೆ ಹೇಗೆ ಸಿದ್ಧವಾದಿರಿ?

2018ರ ಜುಲೈನಲ್ಲಿ ಪ್ರಿಲಿಮ್ಸ್‌, ಅಕ್ಟೋಬರ್‌ನಲ್ಲಿ ಮುಖ್ಯ ಪರೀಕ್ಷೆ ಬಳಿಕ, 2019ರ ಮಾರ್ಚ್‌ನಲ್ಲಿ ಸಂದರ್ಶನವಿತ್ತು. ಅದಕ್ಕಾಗಿ ದೆಹಲಿಯ ಕೆಲವು ಸಂಸ್ಥೆಗಳು ಉಚಿತವಾಗಿ ನಡೆಸುವ ಅಣುಕು ಸಂದರ್ಶನಗಳಿಗೆ ಹಾಜರಾಗಿದ್ದೆ. ಸುಮಾರು ಒಂಭತ್ತು ಸಂದರ್ಶನಗಳು ನನ್ನಲ್ಲಿ ವಿಶ್ವಾಸ ತುಂಬಿದ್ದವು. ಯಶಸ್ವಿಯಾಗಿ ಸಂದರ್ಶನ ಎದುರಿಸುವ ಕುರಿತು ಸ್ಪಷ್ಟ ಚಿತ್ರಣವನ್ನು ಕೊಟ್ಟಿದ್ದವು.

ಸಂದರ್ಶನಕ್ಕೆ ಮುನ್ನ ಬಳ್ಳಾರಿಯಲ್ಲಿದ್ದ ಐಎಎಸ್‌, ಐಪಿಎಸ್ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ, ಐಪಿಎಸ್‌ನ ಅರುಣ್‌ ರಂಗರಾಜನ್‌, ದಿವ್ಯಪ್ರಭು, ಈಗಿನ ಜಿಲ್ಲಾ ಪಂಚಾಯ್ತಿ ಸಿಇಓ ಕೆ.ನಿತೀಶ್‌ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದಿದ್ದೆ.

* ನಿಮ್ಮ ಪ್ರಯತ್ನದ ಬಗ್ಗೆ ನಿಮ್ಮದೇ ವಿಶ್ಲೇಷಣೆ ಏನು?

ಯುಪಿಎಸ್‌ ಪರೀಕ್ಷೆಗೆ ತರಬೇತಿ ಅತ್ಯಗತ್ಯ ಎಂಬುದು ನಿಜವಾದರೂ, ಅದಷ್ಟೇ ಎಂದಿಗೂ ಸಾಕಾಗುವುದಿಲ್ಲ. ಅಭ್ಯರ್ಥಿಗಳಾದವರು ಸತತ ಅಭ್ಯಾಸ ಮಾಡಲೇಬೇಕು. ಕೋಚಿಂಗ್‌ ಪಡೆದಿದ್ದೇವೆ ಎಂದು ಸುಮ್ಮನಾದರೆ ಪಾಸಾಗುವುದು ಅಸಾಧ್ಯ.

* ಯಾವ ಕ್ಷೇತ್ರದಲ್ಲಿ ಸೇವೆ ಮಾಡಲು ಆಸಕ್ತಿ ಇದೆ?

ಸಾರ್ವಜನಿಕ ಆಡಳಿತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಕ್ಷೇತ್ರವಾದರೂ, ಜನರ ಜೀವನಮಟ್ಟವನ್ನು ಸುಧಾರಿಸುವುದೇ ನನ್ನ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT