‘₹ 20 ಸಾವಿರದಲ್ಲಿ ಯುಪಿಎಸ್‌ಸಿ ಪಾಸಾದೆ’

ಶನಿವಾರ, ಏಪ್ರಿಲ್ 20, 2019
27 °C

‘₹ 20 ಸಾವಿರದಲ್ಲಿ ಯುಪಿಎಸ್‌ಸಿ ಪಾಸಾದೆ’

Published:
Updated:
Prajavani

ಬೆಂಗಳೂರು: ಕಾಲೇಜು ಶಿಕ್ಷಣ ಪಡೆಯುವಾಗ ತಂದೆಯ ಅಗಲಿಕೆಯ ನೋವು, ಮನೆಯ ಹಣಕಾಸಿನ ಸ್ಥಿತಿ ನಿಭಾಯಿಸುವ ಜವಾಬ್ದಾರಿ ಹೆಗಲ ಮೇಲೆ ಬಿದ್ದರೂ ನಾಗಾರ್ಜುನ್‌ ಗೌಡ ಅವರಲ್ಲಿ ಚಿಗುರಿದ್ದ ಅಧಿಕಾರಿಯಾಗುವ ಕನಸಿನ ಸಸಿ ಮುರುಟಿ ಹೋಗಲಿಲ್ಲ.

ಆಸಕ್ತಿಯಿಂದ ಸೇರಿದ್ದ ಎಂಬಿಬಿಎಸ್‌ ಪದವಿಯನ್ನು ಶ್ರದ್ಧೆಯಿಂದ ಪೂರೈಸಿದರು. ಪದವಿ ಅಂತಿಮ ವರ್ಷದಿಂದಲೇ (2016) ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನ ಸಫಲವಾಗಲಿಲ್ಲ. ಆದರೆ, ಇವರು ಪಟ್ಟು ಬಿಡಲಿಲ್ಲ.

ವೈದಕೀಯ ಪದವಿಯಿಂದ ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಬೋಧನ ವೃತ್ತಿ ಸಿಕ್ಕಿತು. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತು. ₹ 10,000 ಖರ್ಚು ಮಾಡಿ, ಬೇಕಾಗುವಷ್ಟೇ ಅಧ್ಯಯನ ಸಾಮಗ್ರಿ ಖರೀದಿಸಿದರು. ದಿನದ ಏಳೆಂಟು ತಾಸು ಸ್ವ-ಅಧ್ಯಯನದಲ್ಲಿ ತೊಡಗಿಸಿಕೊಂಡರು. ಇನ್ನೂ ₹ 10,000 ವ್ಯಯಿಸಿ ಮಾದರಿ ಪರೀಕ್ಷೆಗಳನ್ನು ಬರೆದರು. ಈ ಶಿಸ್ತುಬದ್ಧ ಅಧ್ಯಯನ ಅವರನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ 418 ರ‍್ಯಾಂಕ್‌ನಲ್ಲಿ ಕೂರಿಸಿದೆ.

‘ಪೂರ್ವಭಾವಿ ಪರೀಕ್ಷೆ ಎದುರಿಸುವ ಮುನ್ನವೇ, ಮುಖ್ಯ ಪರೀಕ್ಷೆಗೂ ಓದುತ್ತಿದ್ದೆ. ಕನಿಷ್ಠ ಪುಸ್ತಕಗಳು ಮತ್ತು ಗರಿಷ್ಠ ಅಧ್ಯಯನ ನನ್ನ ಕ್ರಮವಾಗಿತ್ತು. ಆಯ್ದುಕೊಂಡಿದ್ದ ವೈದ್ಯಕೀಯ ವಿಜ್ಞಾನವನ್ನು ಅರ್ಥ ಮಾಡಿಕೊಂಡು ಓದಿದ್ದರಿಂದ ಯಶಸ್ಸು ಸಿಕ್ಕಿದೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತ, ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ಕನಸಿದೆ’ ಎಂದು ಡಾ.ನಾಗಾರ್ಜುನ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್‌ ಧಿರಿಸಿನಿಂದ ಪ್ರೇರಣೆ’

ಖಾಕಿಧಾರಿ ಪೊಲೀಸ್‌ ಅಧಿಕಾರಿಗಳನ್ನು ಕಂಡಾಗ, ನಾನು ಸಹ ಐಪಿಎಸ್‌ ಆಗಬೇಕು ಎಂಬ ಗುರಿ ನೆನಪಾಗುತ್ತಿತ್ತು. ಬೆಂಗಳೂರಿನ ಆರ್‌.ವಿ. ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ (ಬಿ.ಇ.) ಓದುತ್ತಿದ್ದಾಗಲೇ, ಪೂರ್ವಭಾವಿ ಪರೀಕ್ಷೆ ಬರೆದೆ(2015). ಪಾಸಾಗಲಿಲ್ಲ. ಶಿಸ್ತುಬದ್ಧ ಅಧ್ಯಯನವಿಲ್ಲದೆ ಯಶಸ್ಸು ದಕ್ಕಲ್ಲವೆಂದು ಮನವರಿಕೆಯಾಯಿತು.

ಪದವಿ ಶಿಕ್ಷಣ ಮುಗಿಸಿಕೊಂಡು, 2016ರಲ್ಲಿ ಎರಡನೆ ಪ್ರಯತ್ನ ಮಾಡಿದೆ. 598 ರ್‍ಯಾಂಕ್‌ ಗಳಿಸಿ, ರೈಲ್ವೆ ಸೇವೆಗೆ ಆಯ್ಕೆಯಾದೆ. ಅದು ತೃಪ್ತಿ ತರಲಿಲ್ಲ. ತರಬೇತಿಗೆ ಹೋಗದೆ, ಒಂದು ವರ್ಷದ ರಜೆ ಪಡೆದು ಮತ್ತೆ ಅಧ್ಯಯನದಲ್ಲಿ ಮಗ್ನನಾದೆ. ಮೂರನೆ ಪ್ರಯತ್ನದಲ್ಲಿ ಸಂದರ್ಶನ ಹಂತದ ವರೆಗೆ ತಲುಪಿದೆ. ರ್‍ಯಾಂಕ್‌ ಸಿಗಲಿಲ್ಲ. ಬೇಸರಿಸದೆ, ನಾಲ್ಕನೆ ಪ್ರಯತ್ನಕ್ಕೆ ಸಿದ್ಧನಾದೆ.

ಬಂದಿರುವ ರ್‍ಯಾಂಕ್‌ನಿಂದ ಪೊಲೀಸ್‌ ಅಧಿಕಾರಿ ಹುದ್ದೆ ಸಿಗುವ ನಿರೀಕ್ಷೆ ಇದೆ. ಆದರೂ, ಈ ವರ್ಷದ ಪರೀಕ್ಷೆ ಬರೆಯಲು ಈಗಾಗಲೇ ಅರ್ಜಿ ಹಾಕಿದ್ದೇನೆ.

ಪರೀಕ್ಷೆಗಾಗಿ ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ. ಆ ವಿಷಯದ ಪಠ್ಯ ಕಡಿಮೆ ಇದ್ದರೂ, ನನ್ನ ವ್ಯಕ್ತಿತ್ವದಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಪದವಿ ಬಳಿಕ ದೃಢ ನಿರ್ಧಾರದಿಂದ ಗುರಿ ತಲುಪಲು ಬಹುತೇಕ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೆ. ಹಾಗಾಗಿ ಈ ಬಾರಿ ತೃಪ್ತಿಕರ ಫಲ ಸಿಕ್ಕಿದೆ.

ಬಿ.ಜೆ. ಹರ್ಷವರ್ಧನ್‌, ಬೆಂಗಳೂರು, 352 ರ‍್ಯಾಂಕ್‌ 
**

‘ಮನೆಯಲ್ಲಿಯೇ ಓದಿ, ವಿದೇಶಾಂಗ ಸೇವೆಗೆ’

2016ರಲ್ಲಿ ಕಾನೂನು ಪದವಿ ಶಿಕ್ಷಣ ಮುಗಿಸಿದ ಬಳಿಕ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಎರಡನೆ ಪ್ರಯತ್ನದಲ್ಲಿ ರೈಲ್ವೆ ಇಲಾಖೆಯಲ್ಲಿ ಹುದ್ದೆ ಸಿಕ್ಕಿತು. ಈ ಬಾರಿಯ ಮೂರನೇ ಯತ್ನದಲ್ಲಿ ವಿದೇಶಾಂಗ ಇಲಾಖೆ(ಐಎಫ್‌ಎಸ್‌) ಹುದ್ದೆ ಸಿಗುವುದು ಬಹುತೇಕ ಖಚಿತವಾಗಿದೆ.

ಪರೀಕ್ಷೆಗೆಂದು ವಿಶೇಷ ತರಬೇತಿಗಾಗಿ ಹೋಗಿರಲಿಲ್ಲ. ಮನೆಯಲ್ಲಿಯೇ ಪ್ರತಿದಿನ 10–12 ತಾಸು ಓದುತ್ತಿದ್ದೆ. ಗುರಿ ಸಾಧನೆಯ ಏಕಾಗ್ರತೆಗೆ ಭಂಗ ಬಾರದಿರಲೆಂದು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರಲಿಲ್ಲ.

ಆಕರ್ಷಣೆಗಳಿಂದ ದೂರವಿದ್ದು ಕಠಿಣ ಪರಿಶ್ರಮ, ಭರವಸೆಯಿಂದ ಪ್ರಯತ್ನ ಮಾಡಿದ್ದಕ್ಕೆ ಯಶಸ್ಸು ಸಿಕ್ಕಿದೆ. ಇದರಲ್ಲಿ ಪೋಷಕರ ಪ್ರೋತ್ಸಾಹವು ಇದೆ. 

10ನೇ ತರಗತಿ ವರೆಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಬೆಂಗಳೂರಿನಲ್ಲೇ ಓದಿದೆ. ಚೆನ್ನೈನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿದೆ. ಬಳಿಕ ದೆಹಲಿಯ ನ್ಯಾಷನಲ್‌ ಲಾ ಯುನಿವರ್ಸಿಟಿಯಲ್ಲಿ ಕಾನೂನು ಅಧ್ಯಯನ ಮಾಡಿದೆ.

ದೇಶವನ್ನು ಪ್ರತಿನಿಧಿಸುವ ಹುದ್ದೆ ಸಿಗುತ್ತಿದೆ. ಬಹಳ ಸಂತಸವಾಗುತ್ತಿದೆ.

ಟಿ.ಕೆ. ರಂಗಶ್ರೀ, ಬೆಂಗಳೂರು, 50ನೇ ರ‍್ಯಾಂಕ್‌
**

‘ಮತ್ತೊಬ್ಬರನ್ನು ಬೆಳೆಸಲು ನಾಗರಿಕ ಸೇವೆಗೆ’

ಅಪ್ಪ ಕೃಷಿ ಇಲಾಖೆಯಲ್ಲಿ ನಿರ್ದೇಶಕ ಹುದ್ದೆಯಲ್ಲಿದ್ದರು. ಅವರ ಕಾರ್ಯವೈಖರಿ, ಮಾರ್ಗದರ್ಶನದಿಂದಾಗಿ ನಾಗರಿಕ ಸೇವಾ ಹುದ್ದೆಗೇರಬೇಕೆಂಬ ಗುರಿ ಖಚಿತವಾಯಿತು.

ಪಿ.ಯು.ಶಿಕ್ಷಣದ ಬಳಿಕ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್‌ನಲ್ಲಿ ಬಿ.ಟೆಕ್‌. ಮುಗಿಸಿದೆ. ಬಳಿಕ ಕ್ಯಾಟ್‌ ಪರೀಕ್ಷೆ ಪಾಸಾಗಿ ಅಹಮದಾಬಾದ್‌ನ ಐಐಎಂನಲ್ಲಿ ವ್ಯವಹಾರ ಅಧ್ಯಯನದ ಪದವಿ ಪೂರೈಸಿಕೊಂಡು, ಏರ್‌ಟೆಲ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ. 

ಕಂಪನಿ ಸಂಬಳದಿಂದ ಜೀವನ ಸಾಗುತ್ತಿದ್ದಾಗ, ಸಾಮಾಜಿಕ ಕೊಡುಗೆ ನೀಡಲು ಆಗುತ್ತಿಲ್ಲವಲ್ಲ. ನಾನು ಮಾತ್ರ ಬೆಳೆಯುತ್ತಿದ್ದೇನೆ. ನಮ್ಮ ಜತೆ ಇರುವವರು ಬೆಳೆಯುತ್ತಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಹಾಗಾಗಿ ಪರೀಕ್ಷೆ ಬರೆಯುವ ಹಂಬಲ ಬಲವಾಯಿತು.

ಪ್ರತಿ ಪ್ರಯತ್ನದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡೆ. ವೇಳಾಪಟ್ಟಿ ಹಾಕಿಕೊಂಡು ಓದಿದೆ. ಮಾದರಿ ಪರೀಕ್ಷೆಗಳನ್ನು ಬರೆಯಲು, ಪ್ರಚಲಿತ ವಿದ್ಯಮಾನಗಳ ಮನನಕ್ಕೆ ನಿರ್ದಿಷ್ಟ ಸಮಯ ಮೀಸಲಿಟ್ಟಿದೆ. ಹಾಗಾಗಿ 5ನೇ ಪ್ರಯತ್ನದಲ್ಲಿ ಸಫಲನಾಗಿದ್ದೇನೆ.

ನಾವು ಏನಾಗಬೇಕು, ಯಾಕಾಗಬೇಕು ಎಂಬ ಸ್ಪಷ್ಟತೆ ಇದ್ದರೆ, ಗುರಿ ಸಾಧನೆಯ ಹಾದಿ ಕಠಿಣವಲ್ಲ.

ಎಂ.ಎನ್‌. ದೀಪನ್‌, ಬೆಂಗಳೂರು, 566 ರ‍್ಯಾಂಕ್‌
**

ಒಂದೂವರೆ ವರ್ಷ ಅಧ್ಯಯನದಿಂದ ಯಶಸ್ಸು

ಕೆಲಸ ಅರಸಿಕೊಂಡು ಒಡಿಸ್ಸಾದಿಂದ ಬೆಂಗಳೂರಿಗೆ ಬಂದೆ. ಬೆಳಗಿನ 10ರಿಂದ ಸಂಜೆ 6ರ ವರೆಗೆ ಐಟಿ ಕಚೇರಿಯ ಕೆಲಸ. ಬಳಿಕ ವಿರಾಮ, ಬೆಳಗಿನ ಜಾವ 3 ಗಂಟೆಯ ವರೆಗೂ ಓದು. ಈ ಜೀವನ ಕ್ರಮವೇ ನನಗೆ ಯಶಸ್ಸು ತಂದು ಕೊಟ್ಟಿದೆ.

ಐಐಟಿ ರೂರ್ಕಿಯಲ್ಲಿ ಎಲೆಕ್ಟ್ರಿಕಲ್‌ ಪದವಿ ಬಳಿಕ ಉದ್ಯೋಗಕ್ಕೆ ಸೇರಿದೆ. ಅಜ್ಜ ಊರಲ್ಲಿ ಸರ್‌ಪಂಚ್‌ ಆಗಿದ್ದರು. ಅವರ ಕಳಕಳಿಯ ಕಾರ್ಯವೈಖರಿ ನನ್ನನ್ನು ಆಕರ್ಷಿಸಿತ್ತು. ಅದೇ, ಸರ್ಕಾರಿ ಸೇವೆಯ ಬಯಕೆ ಹುಟ್ಟಿಸಿತ್ತು.

ಕೆಲಸದೊಂದಿಗೆ ಅಧ್ಯಯನ ನಿಭಾಯಿಸಿ, ಪೂರ್ವಭಾವಿ ಪರೀಕ್ಷೆ ಪಾಸಾದ ಮೇಲೆಯೇ ಮನೆಯವರಿಗೆ ವಿಷಯ ತಿಳಿಸಿದೆ. ಖುಷಿಯಾದರು. ಕೆಲಸಕ್ಕೆ ರಜೆ ಹಾಕಿ ಮುಖ್ಯ ಪರೀಕ್ಷೆಯ ತಯಾರಿ ಮಾಡಿಕೊಂಡೆ.

ಸಾವಿರಾರು ಅಧ್ಯಯನ ಸಾಮಗ್ರಿಗಳಲ್ಲಿ ಎಚ್ಚರಿಕೆಯಿಂದ ಆಯ್ಕೆ ವಿಷಯ, ಆನ್‌ಲೈನ್‌ ಸಾಮಗ್ರಿ ಮತ್ತು ನಿಯತಕಾಲಿಕೆಗಳನ್ನು ಆಯ್ದುಕೊಂಡೆ. ಯಶಸ್ಸಿಗೆ ಶಾರ್ಟ್‌ಕಟ್‌ಗಳಿಲ್ಲ. ಸ್ಥಿರ ಮತ್ತು ಶಿಸ್ತುಬದ್ಧ ಅಧ್ಯಯನದಿಂದ 22ನೇ ವಯಸ್ಸಿಗೇ ಯಶಸ್ಸು ಸಿಕ್ಕಿದೆ.

ಸೌಮ್ಯ ರಂಜನ್‌ ರಾವುತ್‌, 118 ರ‍್ಯಾಂಕ್‌

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !