ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುಪಿಎಸ್‌ಸಿ: ಕನ್ನಡದಲ್ಲಿ ಬರೆದರೆ ಒಳ್ಳೆಯ ರ‍್ಯಾಂಕ್‌’

Last Updated 28 ಡಿಸೆಂಬರ್ 2019, 14:05 IST
ಅಕ್ಷರ ಗಾತ್ರ

ಬೆಳಗಾವಿ: ‘ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವುದರಿಂದ ಒಳ್ಳೆಯ ರ‍್ಯಾಂಕ್‌ ಪಡೆಯಲು ಅವಕಾಶವಿದೆ. ಪ್ರಶ್ನೆಪತ್ರಿಕೆ ಇಂಗ್ಲಿಷ್‌ನಲ್ಲಿ ಇರುತ್ತದೆ. ಅದನ್ನು ಓದಿ ಅರ್ಥ ಮಾಡಿಕೊಂಡು, ಕನ್ನಡದಲ್ಲಿ ಉತ್ತರಿಸಬಹುದು’ ಎಂದು ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿಯ ಬೋಧಕಿ ಪರ್ವೀನ್ ಆಜ್ರಾ ತಿಳಿಸಿದರು.

ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದ ಅವರು, ‘ಅತ್ಯುತ್ತಮ ಪಠ್ಯ ಸಾಮಗ್ರಿಗಳು‌ ಇಂಗ್ಲಿಷ್‌ನಲ್ಲಿ ದೊರೆಯುತ್ತವೆ. ಮೊದಲಿಗೆ ಆಸಕ್ತಿ ಇರಬೇಕು. ಯಾವ ವಿಷಯಕ್ಕೆ ಕೋಚಿಂಗ್ ಅಗತ್ಯವಿದೆ, ಅಧ್ಯಯನ ‌ಸಾಮಗ್ರಿ ಲಭ್ಯವಿದೆ ಮತ್ತು ಯಾವ ವಿಷಯ ಟ್ರೆಂಡಿಂಗ್‌ನಲ್ಲಿದೆ ಎನ್ನುವುದನ್ನು ತಿಳಿದು ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯುಪಿಎಸ್‌ಸಿ ಪರೀಕ್ಷೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತಲೂ ದೊಡ್ಡದು. ಗಂಭೀರವಾಗಿ ಸಿದ್ಧವಾದರೆ ವೈಫಲ್ಯ ಇರುವುದೇ ಇಲ್ಲ. ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಕೂಡ ಇದು ಸಹಕಾರಿಯಾಗಿದೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಾದರೆ ಉಳಿದ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡಬಹುದು’ ಎಂದು ತಿಳಿಸಿದರು.

‘ನಮ್ಮ ಅಕಾಡೆಮಿಯಲ್ಲಿ 20 ವರ್ಷಗಳಲ್ಲಿ ತರಬೇತಿ ಪಡೆದ 20ಸಾವಿರ ಮಂದಿ ಸರ್ಕಾರಿ ನೌಕರಿ ಗಳಿಸಿದ್ದಾರೆ’ ಎಂದು ಹೇಳಿದರು.

‘ಪ್ರತಿ ವರ್ಷವೂ ಯುಪಿಎಸ್‌ಸಿ ಪರೀಕ್ಷೆ ನಡೆಸಲಾಗುತ್ತದೆ. 11ರಿಂದ 12 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಪರೀಕ್ಷಾ ಹಂತದವರೆಗೆ ಬಹಳಷ್ಟು ಮಂದಿ ಬರುವುದಿಲ್ಲ. ಬಂದವರಲ್ಲೂ ಹಲವರು ಗಂಭೀರವಾಗಿ ಪರಿಗಣಿಸಿರುವುದಿಲ್ಲ. 40ಸಾವಿರ ಮಂದಿ ಮಾತ್ರ‌ ಗಂಭೀರ ಅಭ್ಯರ್ಥಿಗಳಾಗಿರುತ್ತಾರೆ’ ಎಂದು ಅಂಕಿ–ಅಂಶ ನೀಡಿದರು.

‘5ರಿಂದ 12ನೇ ತರಗತಿವರೆಗಿನ ಎನ್‌ಸಿಇಆರ್‌ಟಿಯ 42 ಪುಸ್ತಕಗಳನ್ನು ಓದಬೇಕು. ಏನು ಓದಬೇಕು ಎನ್ನುವುದಕ್ಕಿಂತ ಏನು‌ ಓದಬಾರದು ಎನ್ನುವುದನ್ನು ತಿಳಿದುಕೊಳ್ಳಬೇಕು. ಮೂರು ‘ಆರ್’ಗಳನ್ನು (ರೀಡ್, ರಿವೈಸ್ ಹಾಗೂ ರಿಪ್ರಡ್ಯೂಸ್) ಪಾಲಿಸಬೇಕು. ವಿಷಯಗಳ ಬಗ್ಗೆ ಅಂತರ್ಗತ ಕುತೂಹಲ ಬೆಳೆಸಿಕೊಳ್ಳಬೇಕು’ ಎಂದರು.

‘ತಟಸ್ಥ‌ ನಿಲುವು‌ ಹೊಂದಿರುವ ‘ಪ್ರಜಾವಾಣಿ’ಯನ್ನು ದಿನವೂ ಓದುವುದರಿಂದ ಬಹಳ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಅಭ್ಯರ್ಥಿಯಲ್ಲಿ ಸಾಮಾಜಿಕ‌ ಕಳಕಳಿ, ಬಡವರ ಪರವಾದ ಕಾಳಜಿ, ಸಮತೋಲನ ಹಾಗೂ ಜಾತ್ಯತೀತ ಮನೋಭಾವದ ವ್ಯಕ್ತಿತ್ವ ಇದೆಯೇ ಎನ್ನುವುದನ್ನು ಸಂದರ್ಶನದಲ್ಲಿ ಗಮನಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT