ಫಲಿತಾಂಶ ವಿಶ್ಲೇಷಣೆ: ‘ದೋಸ್ತಿ’ ವಿರುದ್ಧ ಜನಾದೇಶವಲ್ಲ; ಬಿಜೆಪಿ ಬೀಗುವಂತಿಲ್ಲ

7
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ

ಫಲಿತಾಂಶ ವಿಶ್ಲೇಷಣೆ: ‘ದೋಸ್ತಿ’ ವಿರುದ್ಧ ಜನಾದೇಶವಲ್ಲ; ಬಿಜೆಪಿ ಬೀಗುವಂತಿಲ್ಲ

Published:
Updated:

ಬೆಂಗಳೂರು: ಸ್ಥಳೀಯ ಪರಿಸ್ಥಿತಿ, ಲೋಕಲ್‌ ನಾಯಕರ ಪ‍್ರಭಾವ ಆಧರಿಸಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿ ಸರ್ಕಾರದ ವಿರುದ್ಧದ ಜನಾದೇಶವೆಂಬಂತೆ ಫಲಿತಾಂಶ ಬಂದಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಬಿಂಬಿಸಿಕೊಂಡಿದ್ದ ಬಿಜೆಪಿಯ ರಾಜ್ಯನಾಯಕರಿಗೆ ತುಸು ನಿರಾಶೆಯಾಗುವಂತಹ ಫಲಿತಾಂಶವನ್ನು ನಗರ ಪ್ರದೇಶಗಳ ‘ಪ್ರಜ್ಞಾವಂತ’ ಮತದಾರರು ನೀಡಿದ್ದಾರೆ.

ಇನ್ನೇನು ಆರು ತಿಂಗಳಲ್ಲಿ ಲೋಕಸಭೆಯ ಮಹಾಸಮರಕ್ಕೆ ದೇಶ ಸಜ್ಜಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಕೊಡುಗೆ’ಗಳು ಬಿಜೆಪಿಗೆ ಮತ್ತೆ ಗೆಲುವಿನ ನಗೆ ತಂದುಕೊಡಲಿದೆ ಎಂದು ಆ ಪಕ್ಷಗಳ ನಾಯಕರು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದಾರೆ. ಕೊಡುಗೆಗಳ ಬದಲು ‘ಹೊಡೆತ’ ನೀಡಿದ್ದೇ ಮೋದಿ ಅವರ ಗೆಲುವಿಗೆ ಅಡ್ಡಗಾಲು ಹಾಕಲಿದೆ ಎಂದು ವಿರೋಧಿ ಬಣ ಕೂಗಿಡುತ್ತಿದೆ.

ಬಿಜೆಪಿ ಪ್ರಧಾನ ನೆಲೆ ನಗರ ಪ್ರದೇಶವಾಗಿದ್ದು, ಇಲ್ಲಿ ಬಹುಸಂಖ್ಯಾತರು ಕಮಲ ಪ್ರಿಯರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಈ ಕಾರಣಕ್ಕಾಗಿಯೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಎಚ್.ಡಿ. ಕುಮಾರಸ್ವಾಮಿ ಹಾಗೂ ಜಿ. ಪರಮೇಶ್ವರ ನೇತೃತ್ವದ ದೋಸ್ತಿ ಸರ್ಕಾರದ ಮೂರು ತಿಂಗಳ ಸಾಧನೆಗೆ ಕನ್ನಡಿಯಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಇದ್ದ ‘ಜನಾದೇಶ’ಕ್ಕೆ ವಿರುದ್ಧವಾಗಿ ಮೈತ್ರಿ ಸರ್ಕಾರ ರಚಿಸಿದ್ದ ಜೆಡಿಎಸ್‌–ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಖುದ್ದು ಬಿಜೆ‍ಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರು. ಆದರೆ, ಫಲಿತಾಂಶದ ನೇರನೋಟವನ್ನು ಕಂಡರೆ ಅಂತಹ ಅಭಿಮತ ಹೊರಹೊಮ್ಮಿದಂತೆ ಕಾಣಿಸುತ್ತಿಲ್ಲ.

ಅಷ್ಟಕ್ಕೂ ರಾಜ್ಯದಲ್ಲಿ ದೋಸ್ತಿ ಆಡಳಿತ ನಡೆಸುತ್ತಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಈ ಚುನಾವಣೆಯಲ್ಲಿ ವಿರೋಧಿಗಳಾಗಿ ಕಣದಲ್ಲಿದ್ದವು. ಹಾಗಾಗಿ, ಈ ಫಲಿತವನ್ನು ಮೈತ್ರಿ ವಿರುದ್ಧದ ಜನ ತೀರ್ಪು ಎಂದು ಹೇಳಲೂ ಬಾರದು. ಹಾಗೆ ನೋಡಿದರೆ ಇದು ಮೂರು ಪಕ್ಷಗಳಿಗೆ ಜನರು ನೀಡಿದ ಎಚ್ಚರಿಕೆ ಕರೆಗಂಟೆಯಂತೆ ಕಾಣಿಸುತ್ತಿದೆ. ಚುನಾವಣೆ ನಡೆದ ಮೂರು ಮಹಾನಗರ ಪಾಲಿಕೆಗಳ ಪೈಕಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಅಖಾಡವಾಗಿರುವ ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. 35 ಸ್ಥಾನಗಳ ಪೈಕಿ 20ನ್ನೂ ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್–9, ಜೆಡಿಎಸ್–7ರಲ್ಲಿ ಗೆದ್ದಿದೆ.

ಇನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ‘ಹಿಂದಿನ’ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್‌ ಸಾಧನೆಯನ್ನೇನೂ ಮಾಡಿಲ್ಲ. ಅವರನ್ನು ಸೋಲಿಸಿ ಬಾದಾಮಿಗೆ ಅಟ್ಟಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗೂ ಚಾಮುಂಡೇಶ್ವರಿ ವರವನ್ನು ಕೊಟ್ಟಿಲ್ಲ. ಸಂಸದ ಪ್ರತಾಪ ಸಿಂಹ ಅವರು ‘ಸಿಂಹ’ ಎಂಬ ಪ್ರತಾಪ ತೋರಿಸಲು ಅವಕಾಶವನ್ನೂ ಒದಗಿಸಿಲ್ಲ. 65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ ಪಡೆದಿದ್ದು ಕೇವಲ 22. ಕಾಂಗ್ರೆಸ್‌ 19, ಜೆಡಿಎಸ್‌–ಬಿಎಸ್‌ಪಿ ಕೂಟ 19 ಸ್ಥಾನ ಗಳಿಸಿದ್ದರೆ, ಪಕ್ಷೇತರ ಬಲ 5 ರಷ್ಟಿದೆ. ಶೇ 50ರಷ್ಟು ಸ್ಥಾನದ ಸಮೀಪ ಬರಲು ದೋಸ್ತಿಗಳಿಗೆ ಸಾಧ್ಯವಾಗಿದೆ.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪ್ರತಿನಿಧಿಸುವ ತುಮಕೂರು ಜಿಲ್ಲೆಯ ತುಮಕೂರು ಪಾಲಿಕೆ ಕೂಡ ಅತಂತ್ರವಾಗಿದೆ. ತುಮಕೂರು ನಗರದಲ್ಲಿ ಬಿಜೆಪಿ, ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಉಪ ಮುಖ್ಯಮಂತ್ರಿ ಜತೆಗೆ ಗೃಹ ಖಾತೆ, ಯುವ ಜನ ಸೇವೆ ಖಾತೆ ಹೊಂದಿದ್ದರೂ ಪರಮೇಶ್ವರ ಅವರಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಆಗಿಲ್ಲ. ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ವೆಂಕಟರಮಣಪ್ಪ ಹಾಗೂ ಜೆಡಿಎಸ್‌ನ ಶ್ರೀನಿವಾಸ್(ವಾಸು) ಹೀಗೆ ಒಟ್ಟು ಮೂವರು ಸಚಿವರಿದ್ದಾರೆ. ಆದರೆ ಒಟ್ಟು 35 ಸದಸ್ಯಬಲದ ಪಾಲಿಕೆಯಲ್ಲಿ ಬಿಜೆಪಿ 12, ಕಾಂಗ್ರೆಸ್‌, ಜೆಡಿಎಸ್‌ ತಲಾ 10 ಸ್ಥಾನಗಳಿಸಿವೆ. 3 ಪಕ್ಷೇರರಿದ್ದಾರೆ. ಅಧಿಕಾರ ಹಿಡಿಯಲು ಬೇಕಾದ 18 ಸದಸ್ಯ ಬಲ ಯಾರಿಗೂ ಇಲ್ಲ. ಆದರೆ, ದೋಸ್ತಿ ಪಕ್ಷಗಳು ಅಧಿಕಾರ ಹಿಡಿಯುವ ಅವಕಾಶ ಮಾತ್ರ ಇದೆ.

ನಗರದಲ್ಲಿ ಬಿಜೆಪಿಗೆ ಒಲವಿದೆ ಎಂದು ಹೇಳಲು ಶಿವಮೊಗ್ಗದ ಉದಾಹರಣೆ ನೀಡುವುದಾದರೆ, ತುಮಕೂರು ಅದಕ್ಕೆ ವಿರುದ್ಧವಾದ ನಿದರ್ಶನವಾಗಿ ನಿಲ್ಲುತ್ತದೆ. ಇದೇನಿದ್ದರೂ ಲೋಕಲ್ ಪಾಲಿಟಿಕ್ಸ್‌ ಎಂಬುದಷ್ಟಕ್ಕೆ ಮಾತ್ರ ಸೀಮಿತವಾಗುವುದು ಸೂಕ್ತವೆನಿಸುತ್ತದೆ.

ಲೆಕ್ಕಾಚಾರದ ತರ್ಕ: ಚುನಾವಣೆ ನಡೆದ ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು ಪರಿಗಣಿಸಿ ಇದೇ ಫಲಿತಾಂಶ ಎಂದು ಲೆಕ್ಕ ಹಾಕುವುದಾದರೆ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ, ಪಕ್ಷೇತರ ಸದಸ್ಯರಿಗೆ ಸರಿಸಮನಾಗಿ ಜೆಡಿಎಸ್‌ ಸದಸ್ಯರು ಗೆದ್ದಿದ್ದಾರೆ. ಆದರೆ, ಜೆಡಿಎಸ್ ಪ್ರಾಬಲ್ಯದ ಹಳೆ ಮೈಸೂರು ಭಾಗ ಅಂದರೆ ನಿರ್ದಿಷ್ಟವಾಗಿ ಹಾಸನ, ಮಂಡ್ಯದಲ್ಲಿ ಜೆಡಿಎಸ್‌ ತನ್ನ ಸಾಮರ್ಥ್ಯವನ್ನು ಮೆರೆದಿದೆ.

105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 2702 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2661 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ 929 ಸ್ಥಾನಗಳಲ್ಲಿ ಬಿಜೆಪಿ, 982 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 375 ಸ್ಥಾನಗಳಲ್ಲಿ ಜೆಡಿಎಸ್‌ ಗೆದ್ದಿದೆ. 329 ಸ್ಥಾನಗಳನ್ನು ಪಕ್ಷೇತರರು ಆಕ್ರಮಿಸಿಕೊಂಡಿದ್ದಾರೆ. 13 ಸ್ಥಾನಗಳಲ್ಲಿ ಜೆಡಿಎಸ್‌ನ ಮಿತ್ರ ಪಕ್ಷ ಬಿಎಸ್‌ಪಿ ಗೆದ್ದಿದೆ.

ಈ ಲೆಕ್ಕಾಚಾರವನ್ನು ಗಮನಿಸಿದರೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೈತ್ರಿ ಸರ್ಕಾರದ ಎರಡು ಪಕ್ಷಗಳ ಬಲಾಬಲವನ್ನು ಕೂಡಿಸಿದರೆ 2661ರ ಪೈಕಿ ಸುಮಾರು 1376 ಸ್ಥಾನಗಳಲ್ಲಿ ಜನ ದೋಸ್ತಿಗಳ ಪರ ನಿಂತಿದ್ದಾರೆ. ಬಿಜೆಪಿ ಶೇ 50 ರಷ್ಟು ಸ್ಥಾನಗಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ಈ ಸಂಖ್ಯೆ ಹೇಳುತ್ತದೆ.

ಆದರೆ, ನಗರಸಭೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ಹಿಂದಿಕ್ಕಿದೆ. ಒಟ್ಟು ಚುನಾವಣೆ ನಡೆದ 926 ಸ್ಥಾನಗಳಲ್ಲಿ ಬಿಜೆಪಿ 370 ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 294ರಲ್ಲಿ ಗೆಲ್ಲಲು ಸಫಲವಾಗಿದೆ. ಜೆಡೆಎಸ್‌ 106ರಲ್ಲಿ ಮಾತ್ರ ವಿಜಯಿಯಾಗಿದೆ.

ಇನ್ನು ಪುರಸಭೆಗಳ 1247 ಸ್ಥಾನಗಳ ಪೈಕಿ ಕಾಂಗ್ರೆಸ್ 514 ರಲ್ಲಿ ಗೆದ್ದಿದ್ದರೆ, ಬಿಜೆಪಿ 375ರಲ್ಲಿ ಮಾತ್ರ ಅಸ್ತಿತ್ವ ಪಡೆದಿದೆ. ಜೆಡಿಎಸ್‌ 210ರಲ್ಲಿ ಗೆದ್ದಿದೆ.ಮೂರನೇ ಹಂತದ ನಗರಗಳ ಪೈಕಿ ಕಾಂಗ್ರೆಸ್‌ ತನ್ನ ಬಲವನ್ನು ಉಳಿಸಿಕೊಂಡು, ಜಯಿಸಿಕೊಂಡಿದೆ. ಆದರೆ ಬಿಜೆಪಿ ಹಿನ್ನಡೆ ಅನುಭವಿಸಿದೆ.

ಪಟ್ಟಣ ಪಂಚಾಯಿತಿಗಳ 400 ಸ್ಥಾನಗಳ ಪೈಕಿ 355 ರ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ 138ರಲ್ಲಿ ಕಾಂಗ್ರೆಸ್‌, 130ರಲ್ಲಿ ಬಿಜೆಪಿ ಗೆದ್ದಿದ್ದು, ಇಲ್ಲಿಯೂ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸುವಲ್ಲಿ ಸಫಲವಾಗಿದೆ.

ತರ್ಕ ಮೀರಿದ ಲೆಕ್ಕ: ಜಿ. ಪರಮೇಶ್ವರ ತಾವು ಪ್ರತಿನಿಧಿಸುವ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಪಾಲಿಕೆಯಲ್ಲಿ ಗೆಲುವು ಸಿಗಲಿಲ್ಲ. ಅಲ್ಲದೇ, ಅವರು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರದಲ್ಲಿ ಕೂಡ ಎದುರಾಳಿಯಾಗಿರುವ ಮಾಜಿ ಶಾಸಕ ಸುಧಾಕರ ಲಾಲ್ ಅವರು ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಕೂಡ ಜೆಡಿಎಸ್ ಗೆದ್ದಿದೆ. ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕದಲ್ಲಿ ಕಾಂಗ್ರೆಸ್ ಬದಲು 30 ಜನ ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಪ್ರಭಾವಿ ಸಚಿವ ಎಚ್.ಡಿ. ರೇವಣ್ಣ ಹೊಳೆ ನರಸೀಪುರದಲ್ಲಿ 23 ಸ್ಥಾನಗಳ ಪೈಕಿ ಅಷ್ಟೂ ಸ್ಥಾನಗಳನ್ನೂ ಗೆಲ್ಲಿಸಿಕೊಂಡಿದ್ದಾರೆ. ಬಹುಮತ ಪಡೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಆದರೆ, ಬಿಜೆಪಿ ಶಾಸಕ ಪ್ರೀತಂ, 13 ಸದಸ್ಯರನ್ನು ಗೆಲ್ಲಿಸಿಕೊಂಡು ಪ್ರಬಲ ವಿರೋಧ ಪಕ್ಷವಾಗಿಸುವಲ್ಲಿ ಗೆದ್ದಿದ್ದಾರೆ. ಶಾಸಕ ಅಜಯಸಿಂಗ್ ಪ್ರತಿನಿಧಿಸುವ ಜೇವರ್ಗಿಯಲ್ಲಿ ಬಿಜೆಪಿ ಗೆದ್ದಿದೆ.

---

ಚುನಾವಣೆ ನಡೆದ ಸ್ಥಳೀಯ ಸಂಸ್ಥೆಗಳು 105
ಒಟ್ಟು ಸ್ಥಾನ 2702
ಫಲಿತಾಂಶ 2661
ಬಿಜೆಪಿ 929
ಕಾಂಗ್ರೆಸ್‌ 982
ಜೆಡಿಎಸ್‌ 375
ಇತರೆ 329

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !