ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತ ಸಾಲಿಯಾನ್‌ 5 ಬಾರಿ ಗೆದ್ದ ಕ್ಷೇತ್ರ

ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ– ಕಾಂಗ್ರೆಸ್ ಜಿದ್ದಾಜಿದ್ದಿನ ಹಣಾಹಣಿ
Last Updated 31 ಮಾರ್ಚ್ 2018, 8:09 IST
ಅಕ್ಷರ ಗಾತ್ರ

ಉಡುಪಿ: ಕಾಪು ತನ್ನದೇ ಆದ ವಿಶಿಷ್ಟತೆ ಹೊಂದಿರುವ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದೆ. ವಸಂತ ಸಾಲಿಯಾನ್ ಹಾಗೂ ಭಾಸ್ಕರ ಶೆಟ್ಟಿ ಅವರಂತಹ ಹಿರಿಯ ರಾಜಕಾರಣಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಈ ಕ್ಷೇತ್ರದ್ದು. ಕಾಂಗ್ರೆಸ್‌ನ ಹಿರಿಯ ನಾಯಕ ವಿನಯ ಕುಮಾರ್ ಸೊರಕೆ ಹಾಲಿ ಶಾಸಕರಾಗಿದ್ದಾರೆ.

ಆರಂಭದಲ್ಲಿ ಈ ಕ್ಷೇತ್ರದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇತ್ತು. 1983 ಮತ್ತು ಆ ನಂತರದ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆಯೇ ತುರುಸಿನ ಸ್ಪರ್ಧೆ ಏರ್ಪಟ್ಟಿರುವುದನ್ನು ಗಮನಿಸಬಹುದು.

ಭಾಸ್ಕರ್ ಶೆಟ್ಟಿ ಅವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಎರಡು ಬಾರಿ ಪಿಎಸ್‌ಪಿ ಅಭ್ಯರ್ಥಿಯಾಗಿ ಜಯ ಗಳಿಸಿದರೆ, ಇನ್ನೆರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾದ ವಸಂತ ಸಾಲಿಯಾನ್ ಅವರನ್ನು ಆ ಕ್ಷೇತ್ರದ ಜನತೆ ಸತತ ಐದು ಬಾರಿ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರ ಎದುರು ಪರಾಜಯಗೊಂಡ ವಸಂತ್ ಸಾಲಿಯಾನ್ ಅವರು ಆ ನಂತರ ಗೆದ್ದಿಲ್ಲ. ಲಾಲಾಜಿ ಅವರು ಸತತ ಎರಡು ಬಾರಿ ಜಯ ಗಳಿಸಿ ಮೂರನೇ ಬಾರಿಗೆ ಸೋತಿದ್ದಾರೆ. ಈಗ ಅವರು ಮತ್ತೊಮ್ಮೆ ಸ್ಪರ್ಧಿಸುವ ಉಮೇದಿನಲ್ಲಿ ಇದ್ದಾರೆ.

ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಸೋತಿರುವ ಹಲವು ಉದಾಹರಣೆಗಳನ್ನು ಕಾಣಬಹುದು. 1962ರಲ್ಲಿ ಕಾಂಗ್ರೆಸ್‌ನ ಪಿಂಟೊ ಅವರು ಪಿಎಸ್‌ಪಿಯ ಭಾಸ್ಕರ ಶೆಟ್ಟಿ ಅವರ ವಿರುದ್ಧ ಕೇವಲ 183 ಮತಗಳ ಅಂತರದಿಂದ ಸೋತಿದ್ದರು. 2008ರಲ್ಲಿ ಲಾಲಾಜಿ ಮೆಂಡನ್ ಅವರು ವಸಂತ ಸಾಲಿಯಾನ ಅವರನ್ನು 967 ಮತಗಳ ಅಂತರದಿಂದ ಮಣಿಸಿದ್ದರು. ಇದೇ ಲಾಲಾಜಿ ಅವರು 2004ರಲ್ಲಿ ಸಾಲಿಯಾನ್ ವಿರುದ್ಧ ಕೇವಲ 1,390 ಮತಗಳ ಅಂತರದಿಂದ ಗೆದ್ದಿದ್ದರು. ಹಾಲಿ ಶಾಸಕ ವಿನಯ ಕುಮರ್ ಸೊರಕೆ ಅವರು ಕಳೆದ ಚುನಾವಣೆಯಲ್ಲಿ 1,885 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದನ್ನು ಸಹ ಸ್ಮರಿಸಬಹುದು.

ಈಗಂತೂ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿಯ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ. ಜೆಡಿಎಸ್‌ ಇದ್ದರೂ ಗಮನ ಸೆಳೆಯುವಂತೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿತ್ತು. ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಅವರು ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಕ್ರಿಶ್ಚಿಯನ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಿದು.

ಮಧ್ವಾಚಾರ್ಯರ ಹುಟ್ಟೂರು ಇದೇ ಕ್ಷೇತ್ರದಲ್ಲಿದೆ. ಮೀನುಗಾರಿಕೆ, ಕೃಷಿ, ತೋಟಗಾರಿಕೆ ಈ ಭಾಗದ ಜನರ ಪ್ರಮುಖ ಉದ್ಯೋಗವಾಗಿದೆ. ಅದಾನಿ (ಉಡುಪಿ) ಉಷ್ಣ ವಿದ್ಯುತ್ ಸ್ಥಾವರ, ಕೇಂದ್ರ ಸರ್ಕಾರದ ಭೂಗರ್ಭ ತೈಲ ಸಂಗ್ರಹಗಾರ (ಐಎಸ್‌ಪಿಆರ್‌ಎಲ್) ಸಹ ಇದೇ ಕ್ಷೇತ್ರದಲ್ಲಿದೆ. ಕಾಪು ಬೀಚ್‌ ಹಾಗೂ ಲೈಟ್ ಹೌಸ್‌ ಪ್ರಸಿದ್ಧವಾಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಸಹ ಇದಾಗಿದೆ. ಶಂಕರಪುರದಲ್ಲಿ ಬೆಳೆಯುವ ಮಲ್ಲಿಗೆ, ಮಟ್ಟುಗುಳ್ಳು ಪ್ರಸಿದ್ಧವಾಗಿದೆ.

**

ಕಾಪು ವಿಧಾನಸಣಾ ಕ್ಷೇತ್ರದ ಹಿಂದಿನ ಪ್ರತಿನಿಧಿಗಳ ವಿವರ (ಜೆಪಿ– ಜನತಾ ಪಾರ್ಟಿ, ಜೆಡಿ– ಜನತಾ ದಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT