ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತಾದ್‌ ಬಾಲೇಖಾನ್‌ ಸ್ಮರಣೆ

Last Updated 22 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಸಿತಾರ್‌ ಮಾಂತ್ರಿಕ ಉಸ್ತಾದ್ ಬಾಲೇಖಾನ್‌ ಅವರ 76ನೇ ಹುಟ್ಟುಹಬ್ಬ ಮತ್ತು ‘ಇನ್ಫೊಸಿಸ್‌ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೇಖಾನ್‌ ಸ್ಮಾರಕ ಪ್ರಶಸ್ತಿ 2018’ ಪ್ರದಾನ ಸಮಾರಂಭ ನ.25ರಂದು ನಗರದಲ್ಲಿ ಆಯೋಜನೆಗೊಂಡಿದೆ. ಉಸ್ತಾದ್‌ ಬಾಲೇಖಾನ್‌ ಟ್ರಸ್ಟ್‌ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಬಾಲೇಖಾನ್‌ ಅವರ ಪುತ್ರ ಉಸ್ತಾದ್‌ ಹಫೀಸ್‌ ಬಾಲೇಖಾನ್‌. ಅಪ್ಪನ ಪರಂಪರೆಯನ್ನು ಮುಂದುವರಿಸುತ್ತಿರುವ ಇವರೂ ಸಿತಾರ್‌ ಕಲಾವಿದರು. 2010ರಿಂದ ತಂದೆಯ ಸ್ಮರಣೆಯಲ್ಲಿ ಸಂಗೀತ ಕಛೇರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಗರದಲ್ಲಿ ನಡೆಸುತ್ತಾ ಬಂದಿದ್ದಾರೆ.

ಅಪ್ಪನ ಹೆಸರಿನ ಈ ಪ್ರಶಸ್ತಿಯನ್ನು 2015ರಿಂದ ನೀಡಲಾಗುತ್ತಿದೆ. ದೇಶದ ಪ್ರಸಿದ್ದ ಸಿತಾರ್‌ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪ್ರಶಸ್ತಿಗೆ ಸುಧಾ ಮೂರ್ತಿ ಅವರ ಇನ್ಫೊಸಿಸ್‌ ಫೌಂಡೇಷನ್‌ ಹಣಕಾಸಿನ ನೆರವು ನೀಡುತ್ತಿದೆ. ಪ್ರಶಸ್ತಿ ಮೊತ್ತ ₹1ಲಕ್ಷ ಎಂದು ಟ್ರಸ್ಟ್‌ ಅಧ್ಯಕ್ಷ ಉಸ್ತಾದ್‌ ಹಫೀಸ್‌ ಬಾಲೇಖಾನ್‌ ತಿಳಿಸಿದ್ದಾರೆ.

ಈ ವರ್ಷದ ‘ಇನ್ಫೊಸಿಸ್‌ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೇಖಾನ್‌ ಸ್ಮಾರಕ ಪ್ರಶಸ್ತಿ’ಯನ್ನು ಕಾಶ್ಮೀರ ಕಣಿವೆಯ ಸಂತೂರ್‌ ವಾದಕ ಪಂಡಿತ್‌ ಭಜನ್‌ ಸೊಪೊರಿ ಅವರಿಗೆ ನೀಡಲಾಗುತ್ತಿದೆ. ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನ ಘರಾನ ಶೈಲಿಯ ಸಂಗೀತಗಾರ. ಇವರ ಕುಟುಂಬದ ಆರನೇ ತಲೆಮಾರಿನ ಸಂತೂರ್‌ ವಾದಕ ಇವರು. ಪ್ರಯಾಗ್‌ ಸಂಗೀತ ಸಮಿತಿ ಮತ್ತು ಅಲಹಾಬಾದ್‌ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹತ್ತು ವರ್ಷ ಬಾಲಕ ಸೊಪೊರಿ ಮೊದಲ ಕಛೇರಿ ನೀಡಿದ್ದರು.

ಉರ್ದು, ಹಿಂದಿ, ಕಾಶ್ಮೀರಿ, ಗುಜರಾತಿ, ಭೋಜ್‌ಪುರಿ, ಹಿಮಾಚಲ, ರಾಜಾಸ್ತಾನಿ, ಪಂಜಾಬಿ ಹಾಗೂ ತೆಲುಗು ಭಾಷೆಗಳ ಸುಮಾರು 4 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸೊಪೋರಿ ಮಟ್ಟುಗಳನ್ನು ಹಾಕಿದ್ದಾರೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿರುವ ಇವರಿಗೆಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದೆಹಲಿ ತೆಲುಗು ಅಕಾಡೆಮಿ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, ದೆಹಲಿ ರತ್ನ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ.

‘ಬಾಲೇಖಾನ್‌ ಟ್ರಸ್ಟ್‌, ಪ್ರತಿ ವರ್ಷ ಇಬ್ಬರು ಸಂಗೀತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ₹12 ಸಾವಿರ ನೀಡಲಾಗುತ್ತಿದೆ. ಈ ವರ್ಷ ಸೌಭಾಗ್ಯಲಕ್ಷ್ಮಿ ವಸಂತರಾವ್ ಜಾಜಿ ದತ್ತಿ ಬಹುಮಾನವನ್ನು ಎಂ.ರಾಧಾ ಅವರಿಗೆ ಮತ್ತು ಪದಾಯ್‌ ಟ್ರಸ್ಟ್‌ ಬಹುಮಾನವನ್ನು ಎಂ. ಭಾರ್ಗವಿ ಅವರಿಗೆ ನೀಡಲಾಗುತ್ತದೆ. ಪ್ರತಿ ವರ್ಷದ ಸಂಪ್ರದಾಯದಂತೆ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಛೇರಿ ನಡೆಯಲಿದೆ’ ಎಂದು ಹಫೀಸ್‌ ತಿಳಿಸಿದ್ದಾರೆ.

ಟ್ರಸ್ಟ್‌ ವತಿಯಿಂದ ಬಾಲೇಖಾನ್‌ ಅವರ ಪುಣ್ಯತಿಥಿಯ ಸಂದರ್ಭದಲ್ಲೂ ಸಂಗೀತ ಕಛೇರಿ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಸಹವಾದ್ಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಪ್ರದಾಯಕ್ಕೆ ಇದೇ ಡಿಸೆಂಬರ್‌ನಲ್ಲಿ ನಗರದಲ್ಲಿ ನಡೆಯುವ ಬಾಲೇಖಾನ್‌ ಪುಣ್ಯತಿಥಿ ಕಾರ್ಯಕ್ರಮ ನಾಂದಿಯಾಗಲಿದೆ ಎಂದು ಅವರು ಟ್ರಸ್ಟ್‌ನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

**

ಕಾರ್ಯಕ್ರಮ ವಿವರ: ಪ್ರಶಸ್ತಿ ಪುರಸ್ಕೃತರು– ಭಜನ್‌ ಸೊಪೊರಿ, ಅತಿಥಿ– ಶ್ರೀನಿವಾಸ ಜಿ. ಕಪ್ಪಣ್ಣ, ಸುಭಾಷ್‌ ಭರಣಿ, ಸ್ಥಳ– ಜೆಎಸ್‌ಎಸ್‌ ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್‌, ಜಯನಗರ, ಸಂಜೆ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT