ಸೋಮವಾರ, ಆಗಸ್ಟ್ 19, 2019
21 °C
ಜಿಲ್ಲೆಗೆ ಬಾರದ ನಾಯಕರು

ಪ್ರವಾಹದಿಂದ ನಲುಗಿದ ಬದುಕು; ಉತ್ತರ ಕನ್ನಡಕ್ಕೆ ಏಕೀ ಅನಾದರ?

Published:
Updated:
Prajavani

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಸೊಕ್ಕೇರಿದ ನದಿಗಳೆಲ್ಲ ಶಾಂತವಾಗಿವೆ. ಆದರೆ, ಪ್ರವಾಹದಿಂದ ಸಂತ್ರಸ್ತರಾದವರು ದಿಕ್ಕುತೋಚದಂತಾಗಿದ್ದಾರೆ.

ಜಿಲ್ಲೆಯಲ್ಲಿ ಹರಿಯುವ ಅಘನಾಶಿನಿ, ಕಾಳಿ, ಗಂಗಾವಳಿ, ಶರಾವತಿ, ವರದಾ ನದಿಗಳ ರೌದ್ರ ನರ್ತನಕ್ಕೆ ಕೃಷಿಕರು, ಕೂಲಿ ಕಾರ್ಮಿಕರು, ಅಂಬಿಗರು, ತೋಟಿಗರು, ಬುಡಕಟ್ಟು ಜನರು ಅಕ್ಷರಶಃ ನಲುಗಿದ್ದಾರೆ.

ಮಲೆನಾಡು, ಕರಾವಳಿ, ಅರೆಬಯಲು ಸೀಮೆ ಸಮ್ಮಿಲನದ ಜಿಲ್ಲೆಯಲ್ಲಿ ಯಾವೊಂದು ಪ್ರದೇಶವನ್ನೂ ಬಿಡದ ಮಹಾಮಳೆ, ಜನರ ಬದುಕನ್ನು ಚಿಂದಿ ಮಾಡಿದೆ.

ನೆರೆ ಇಳಿದ ಮೇಲಿನ ದೃಶ್ಯಗಳು ಯುದ್ಧಭೂಮಿಯಂತೆ ಕಾಣುತ್ತಿವೆ. ಚಿಂದಿಯಾಗಿ ಬಿದ್ದಿರುವ ಸಾಮಗ್ರಿಗಳು, ಕುಸಿದು ಬಿದ್ದ ಕಟ್ಟಡಗಳು, ಮುರಿದ ಸೇತುವೆಗಳು, ನೀರಿನ ಸೆಳೆತಕ್ಕೆ ರಸ್ತೆಗೆ ಬಂದು ಬಿದ್ದಿರುವ ಮನೆಯ ಸಾಮಗ್ರಿಗಳು ಪ್ರವಾಹದ ಚಿತ್ರಣ ನೀಡುತ್ತಿವೆ.

ನದಿ ಪಾತ್ರದ 150ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಪುನರ್ವಸತಿ ಕೇಂದ್ರಗಳು ಆಶ್ರಯ ನೀಡಿವೆ. ‘ತೊಟ್ಟ ಬಟ್ಟೆಯಲ್ಲಿ ಮನೆಬಿಟ್ಟು ಬಂದಿದ್ದೇವೆ. ಒಂದು ವಾರ ಕಳೆಯಿತು. ತೊಡಲು ಬಟ್ಟೆ, ಒಳ ಉಡುಪು ಇಲ್ಲದೇ ಮೈಮೇಲೆ ಗುಳ್ಳೆಗಳಾಗುತ್ತಿವೆ, ಹೇಳಿಕೊಳ್ಳಲು ಆಗುತ್ತಿಲ್ಲ. ಮಕ್ಕಳು, ವೃದ್ಧರಿಗೆ ಕಾಯಿಲೆ ಅಂಟುತ್ತಿದೆ’ ಎಂದು ಬಿಳಿಹೊಂಯ್ಗಿಯ ಗೌರಿ ಹರಿಕಾಂತ ಗುಟ್ಟಾಗಿ ಹೇಳಿದರು.

‘10 ದಿನಗಳಿಂದ ನೀರಿನಲ್ಲಿರುವ ಮರಗಳಿಗೆ ಇನ್ನು ಹೆಚ್ಚು ದಿನ ಆಯಸ್ಸಿಲ್ಲ. ಪುನಃ ತೋಟ ರೂಪಿಸಿಕೊಳ್ಳಲು ಆರೆಂಟು ವರ್ಷ ಬೇಕು’ ಎನ್ನುತ್ತಾರೆ ಕೃಷಿಕ ಮಣ್ಮನೆಯ ಪ್ರವೀಣ ಹೆಗಡೆ.

ಪ್ರಾಥಮಿಕ ಮಾಹಿತಿಯಿಂತೆ ಜಿಲ್ಲೆಯಲ್ಲಿ 9100 ಹೆಕ್ಟೇರ್ ಕೃಷಿಭೂಮಿ, 1000 ಹೆಕ್ಟೇರ್ ತೋಟಗಾರಿಕಾ ಬೆಳೆ, 2000ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹಲವಾರು ಹಳ್ಳಿಗಳಲ್ಲಿ ಆಗಿರುವ ನಷ್ಟದ ವರದಿ ಇನ್ನಷ್ಟೇ ಬರಬೇಕಾಗಿದೆ.

* ಅಘನಾಶಿನಿಯಲ್ಲಿ ನೀರು ಏರಿದ್ದನ್ನು ಕಂಡು ಮನೆಬಿಟ್ಟು ಓಡಿಬಂದೆವು. ಈಗ ನೋಡಿದರೆ, ಮನೆಯಲ್ಲಿರುವ ಅಕ್ಕಿ–ಬೇಳೆ ಎಲ್ಲವನ್ನೂ ಆಕೆ ನುಂಗಿದ್ದಾಳೆ. ಅಡುಗೆ ಮಾಡಲು ಪಾತ್ರೆಯನ್ನೂ ಉಳಿಸಿಲ್ಲ

- ಸರೋಜಾ ಅಂಬಿಗ, ದೀವಗಿಯ ಸಂತ್ರಸ್ತೆ

* ಜಿಲ್ಲಾಡಳಿತ ನೆರವು ನೀಡುತ್ತಿದೆ. ಹಾನಿಯ ಚಿತ್ರಣ ಸರ್ಕಾರದೆದುರು ಸಿಕ್ಕಿಲ್ಲ. ಮುಖ್ಯಮಂತ್ರಿ ಉಳಿದ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ನಮ್ಮಲ್ಲಿಗೆ ಬಂದಿಲ್ಲ. ಅವರು ತಕ್ಷಣ ಭೇಟಿ ನೀಡಲಿ

- ವಿನೋದ ನಾಯಕ, ಭಾಸಗೋಡ

* ಹಾಲಕ್ಕಿ ಒಕ್ಕಲಿಗರು ಸೇರಿದಂತೆ, ನದಿಯಂಚಿಗೆ ಬದುಕು ಕಟ್ಟಿಕೊಂಡ ಸಾವಿರಾರು ಬಡಜನರು ಪ್ರವಾಹದಿಂದ ಸಂಪೂರ್ಣ ನೆಲೆ ಕಳೆದುಕೊಂಡಿದ್ದಾರೆ. ಸರ್ಕಾರ ವಿಶೇಷ ನೆರವು ನೀಡಲಿ.

- ಹನುಮಂತ ಗೌಡ, ಉ.ಕ.ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ

* ಕಾಳಿಗೆ ಅಣೆಕಟ್ಟು ಕಟ್ಟಿದಾಗ ನಿರಾಶ್ರಿತ<br/>ರಾದವರು ಹೆಗ್ಗಾರ್, ವೈದ್ಯ ಹೆಗ್ಗಾರ್, ಕಲ್ಲೇಶ್ವರ ಭಾಗದಲ್ಲಿ ನೆಲೆಕಂಡು ಕೊಂಡಿದ್ದರು. ಗಂಗಾವಳಿ ಆರ್ಭಟಕ್ಕೆ ಮತ್ತೆ ಅವರೆಲ್ಲ ನಿರಾಶ್ರಿತರಾಗಿದ್ದಾರೆ.

- ಗಣಪ ಸಿದ್ದಿ, ಕಲ್ಲೇಶ್ವರ

Post Comments (+)