ಭಾನುವಾರ, ಆಗಸ್ಟ್ 25, 2019
23 °C
ಉತ್ತರ ಕರ್ನಾಟಕ ಜಿಲ್ಲೆಗಳ ಮಕ್ಕಳಿಂದ ಪೋಷಕರಿಗೆ ಫೋನ್‌ ಕರೆ

ಅವ್ವಾ ಮಳೆ ಕಡಿಮೆ ಆಗೈತಾ...

Published:
Updated:

ತುಮಕೂರು: ‘ಅವ್ವಾ ಮಳೆ ಕಡಿಮೆ ಆಗೈತಾ...ರಾತ್ರಿನೂ ಬಂತಾ. ಅಕ್ಕ ಏನ್‌ ಮಾಡ್ತಾಳ, ಅಣ್ಣಾ ಎಲ್ಲಿಗೆ ಹೋಗ್ಯಾನ, ಅಜ್ಜಾ ಹೇಂಗದಾನ’ ಹೀಗೆ ಆ ಮಕ್ಕಳು ಒಂದೇ ಉಸಿರಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಪಕ್ಕದಲ್ಲಿದ್ದವರ ಮುಖದಲ್ಲಿ ನೋವಿನ ಛಾಯೆ ಇಣುಕುತ್ತದೆ. 

ಇಲ್ಲಿನ ಸಿದ್ಧಗಂಗಾಮಠದ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ 10 ಸಾವಿರ ಮಕ್ಕಳಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮಕ್ಕಳೇ ಗರಿಷ್ಠ ಸಂಖ್ಯೆಯಲ್ಲಿ ಇದ್ದಾರೆ.

ಪೋಷಕರು ಮತ್ತು ಸಂಬಂಧಿಕರಿಗೆ ಮಠದ ಆವರಣದ ಅಂಗಡಿಗಳಲ್ಲಿನ ‘ಕಾಯಿನ್ ಬಾಕ್ಸ್’ನಿಂದ ಕರೆ ಮಾಡಿ ಪ್ರವಾಹ ‍ಪರಿಸ್ಥಿತಿಯ ಬಗ್ಗೆ ಮಕ್ಕಳು ಮಾಹಿತಿ ಪಡೆಯುತ್ತಿದ್ದಾರೆ.

ಭಾನುವಾರ ಶಾಲೆಗೆ ರಜೆಯಾದ ಕಾರಣ ಕರೆ ಮಾಡಲು ₹ 1ರ ನಾಣ್ಯ ಹಿಡಿದು ನೂರಾರು ಮಕ್ಕಳು ‘ಕಾಯಿನ್ ಬಾಕ್ಸ್’ ಎದುರು ನಿಂತಿದ್ದರು.

ಪೋಷಕರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದರೆ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು.

‘ನಿಮ್ಮ ಕಡೆ ಹೆಚ್ಚು ಮಳಿ ಬರಾಕ ಹತೈತಿ. ಊರುಗಳೇ ಕೊಚ್ಚಿ ಹೋಗಾಕತ್ಯಾವು. ಪೇಪರನ್ಯಾಗ ಬಂದೈತಿ ಅಂತಹ ಬಹಳ ಬಂದಿ ಹೇಳಿದ್ರು. ಬುದ್ದಿಯವ್ರು (ಸಿದ್ದಲಿಂಗ ಸ್ವಾಮೀಜಿ) ಪ್ರಾರ್ಥನೆಯಲ್ಲಿ ವಿಷಯ ತಿಳಿಸಿದ್ರು. ಅದಕ್ಕ ಫೋನ್ ಮಾಡ್ದೆ’ ಎಂದು ಪೋಷಕರಲ್ಲಿ ಆತಂಕ ಬಿಚ್ಚಿಡುತ್ತಿದ್ದರು.

‘ನೀವು ಬರ್ತೀನಿ ಅಂದಿದ್ರಲ್ಲ. ಯಾವಾಗ ಬರ್ತೀರಿ’ ಎಂದು ಕೆಲ ಮಕ್ಕಳು ಪೋಷಕರನ್ನು ಪ್ರಶ್ನಿಸಿದರೆ, ಮತ್ತೆ ಕೆಲ ಮಕ್ಕಳು ‘ರಜೆ ಕೊಡ್ತಾರಲ್ಲ ಆಗ ಬರ್ತೀನಿ. ಕರಕೊಂಡು ಹೋಗ್ರಿ’ ಎನ್ನುತ್ತಿದ್ದರು.

‘ಅಪ್ಪನಿಗೆ ಫೋನ್ ಮಾಡಿದ್ದೆ. ಮಳಿ ಜೋರ್ ಐತಂತೆ. ಆರಾಮಾಗಿದ್ದಾರಂತೆ’ ಎಂದು 7ನೇ ತರಗತಿ ವಿದ್ಯಾರ್ಥಿ ಲಿಂಗಸುಗೂರು ತಾಲ್ಲೂಕಿನ ಈಚನಾಳದ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ.

‘ವಿಜಯಪುರ, ಬಾಗಲಕೋಟ ಜಿಲ್ಲಾ ಕೊಚ್ಚಿಕೊಂಡ ಹೊಂಟಾವ ಅಂತಾರಿ. ಊರಿಗೆ ಫೋನ್ ಮಾಡಿದ್ದೆ’ ಎಂದು 7ನೇ ತರಗತಿ ವಿದ್ಯಾರ್ಥಿ ವಿಜಯಪುರ ಜಿಲ್ಲೆಯ ಮಾವಾಡ ಗ್ರಾಮದ ಪರಶುರಾಮ್ ಹೇಳಿದನು.

‘ನಮ್ಮ ಜಿಲ್ಲಾದಾಗ ಹೆಚ್ಚು ಮಳಿ ಆಗೇತ್ರಿ. ಆದ್ರ, ನಮ್ಮೂರ ಕಡೆ ಕಡಿಮೆ ಅಂದರು’ ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಸಂದೀಪ್ ತಿಳಿಸಿದ.

‘ಮಕ್ಕಳ ಮಾತು ಕೇಳಿ ನೋವಾಗುತ್ತದೆ’

‘ಮಕ್ಕಳು ಫೋನ್ ಮಾಡಿ ತಮ್ಮ ಮನೆಯವರ ಜತೆ ಮಾತನಾಡುವುದನ್ನು ಕೇಳಿದಾಗ ಮನಸ್ಸಿಗೆ ನೋವಾಗುತ್ತದೆ. ಆ ಕಡೆಯಿಂದ ಮಕ್ಕಳ ಪೋಷಕರು ಆರಾಮಾಗಿದ್ದೀವಿ. ಮಳೆ ಕಡಿಮೆಯಾದ ನಂತರ ಬನ್ನಿ ಎಂದು ಸಾಂತ್ವನದ ಮಾತುಗಳನ್ನು ಹೇಳುತ್ತಿದ್ದಾರೆ’ ಎಂದು ‘ಕಾಯನ್ ಬಾಕ್ಸ್’ ಇದ್ದ ಅಂಡಿಯ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರೆ ಮಾಡುವ ಮಕ್ಕಳ ಸಂಖ್ಯೆ ನಾಲ್ಕೈದು ದಿನಗಳಿಂದ ಹೆಚ್ಚುತ್ತಲೇ ಇದೆ. ಕೆಲವು ಮಕ್ಕಳು ಆ ಕಡೆಯ ಮಾತುಗಳನ್ನು ಕೇಳಿ ಕಣ್ಣೀರು ಹಾಕಿದ್ದಾರೆ. ಫೋನ್ ಮಾಡಲು ಬಂದಾಗ ಬೇರೆ ಬೇರೆ ಜಿಲ್ಲೆಯ ಮಕ್ಕಳು ಪರಸ್ಪರ ತಮ್ಮ ಊರಿನ ಮಳೆಯ ಬಗ್ಗೆ ಮಾತನಾಡಿಕೊಳ್ಳುತ್ತಾರೆ’ ಎಂದರು.

Post Comments (+)