ಭಾನುವಾರ, ಡಿಸೆಂಬರ್ 6, 2020
19 °C

ಅರ್ಹ ಬಡವರಿಗೆ ಮಾತ್ರ ವಸತಿ, ಅನರ್ಹರಿಗೆ ಮನೆ ಕೊಟ್ಟರೆ ಕ್ರಮ: ಸಚಿವ ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅರ್ಹ ಬಡವರಿಗೆ ಮಾತ್ರ ಸರ್ಕಾರದ ವಸತಿ ಯೋಜನೆಗಳ ಫಲ ಸಿಗಬೇಕು. ಅನರ್ಹರಿಗೆ ಈ ಯೋಜನೆಯಡಿ ಮನೆ ಮಂಜೂರು ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.

‘ಪ್ರಜಾವಾಣಿ’  ಗುರುವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಅನರ್ಹರಿಗೆ ಮನೆ ಮಂಜೂರು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಗತ್ಯ ಕಾನೂನು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಟಿ.ನರಸೀಪುರದ ಮಂಜುನಾಥ್‌ ಕರೆ ಮಾಡಿ, ಒಬ್ಬ ಫಲಾನುಭವಿಗೆ ಎರಡೆರಡು ಮನೆ ಮಂಜೂರು ಮಾಡಿರುವ ವಿಚಾರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಅನೇಕ ಗ್ರಾಮಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮನೆ ಮಂಜೂರು ಮಾಡಿದ ಬಗ್ಗೆ ದೂರುಗಳು ಬಂದಿವೆ.  ಗಂಡನಿಗೊಂದು ಮನೆ, ಹೆಂಡತಿಗೊಂದು ಮನೆ, ಉಪಪತ್ನಿಗೊಂದು ಮನೆ ನೀಡುವುದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದರು.

ಬೀದರ್‌ನ ಗೋರಕ್‌ನಾಥ್‌ ಕರೆಗೆ ಉತ್ತರಿಸಿದ ಸಚಿವರು, ‘ಬಡವರಿಗೆ ಸೂರು ಕಲ್ಪಿಸಲು ಬಳಸಬೇಕಾದ ಹಣವನ್ನು ಯಾರದೋ ಫಲಾನುಭವಿಗಳ ಹೆಸರಿನಲ್ಲಿ ಧನಿಕರು ತಮ್ಮ ಮನೆಗೆ ಕೊಟ್ಟಿಗೆ, ಹಂದಿಗೂಡು ಕಟ್ಟಿಸಲು ಇನ್ನು ಅವಕಾಶ ನೀಡಲಾರೆ’ ಎಂದರು. 

ಕಂತು ಬಿಡುಗಡೆಗೆ ಲಂಚ: ವಸತಿ ಯೋಜನೆಗಳ ಅನುದಾನ ಕಂತು ಬಿಡುಗಡೆ ಮಾಡಲು ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಿರುವುದು ಹಾಗೂ ವಿಳಂಬ ಮಾಡುತ್ತಿರುವ ಬಗ್ಗೆಯೂ ಫಲಾನುಭವಿಗಳು ದೂರಿದರು.

‘ಯಾವುದೇ ಅಧಿಕಾರಿ ಲಂಚಕ್ಕಾಗಿ ಪೀಡಿಸಿದರೆ ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.

10 ಲಕ್ಷ ಮನೆ 

‘ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಡವರಿಗಾಗಿ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಇಲಾಖೆಯಲ್ಲಿ ಪೋಲಾಗುವ ಹಣವನ್ನು ಉಳಿಸುವುದರ ಜೊತೆ, ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ಸೋಮಣ್ಣ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು