ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿಯಿಂದ ಮಾತನಾಡಿ: ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್‌ ವಾಗ್ದಾಳಿ

Last Updated 16 ನವೆಂಬರ್ 2019, 11:03 IST
ಅಕ್ಷರ ಗಾತ್ರ

ಮೈಸೂರು: ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಶವಪೆಟ್ಟಿಗೆಗೆ ಈಗಾಗಲೇ ಕೊನೆಯ ಮೊಳೆ ಹೊಡೆದಿದ್ದಾರೆ. ಅದರ ಮೇಲೆ ಮತ್ತೆ ಮತ್ತೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಉಪಚುನಾವಣೆಯ ಈ ಅವಧಿಯಲ್ಲಿ ‘ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎನ್ನುತ್ತಾ ತಿರುಗಾಡುತ್ತಿದ್ದಾರೆ. ನೀವು ಈ ಹಿಂದೆ ಹೇಳಿದ್ದು ಏನಾದರೂ ಆಗಿದೆಯೇ? ಉತ್ಪ್ರೇಕ್ಷೆಯ ಮಾತುಗಳನ್ನಾಡಬೇಡಿ. ಜವಾಬ್ದಾರಿಯಿಂದ ಹೇಳಿಕೆ ನೀಡಿ' ಎಂದು ಹರಿಹಾಯ್ದರು.

'ಸಿದ್ದರಾಮಯ್ಯ ಅವರು ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಹೇಳುತ್ತಲೇ ಕಳೆದ ವಿಧಾನಸಭಾ ಚುನಾವಣೆ ಎದುರಿಸಿದ್ದರು. ಕಾಂಗ್ರೆಸ್‌ನ ಬಲ 130 ಸ್ಥಾನಗಳಿಂದ 80ಕ್ಕೆ ಕುಸಿಯಿತು. ಲೋಕಸಭೆ ಚುನಾವಣೆ ವೇಳೆ ರಾಹುಲ್‌ ಗಾಂಧಿಯೇ ಮುಂದಿನ ಪ್ರಧಾನಿ ಎನ್ನುತ್ತಿದ್ದರು. ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು' ಎಂದರು.

‘ಮುಖ್ಯಮಂತ್ರಿ ಆಗಿದ್ದುಕೊಂಡೇ ಕದ್ದು ಓಡಿ ಬಾದಾಮಿಯಲ್ಲಿ ಸ್ಪರ್ಧಿಸಬೇಕಾಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿರಿ. ಮುಂದಿನ ದಸರಾಗೆ ನಾನೇ ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತೇನೆ ಎಂದಿದ್ದಿರಿ. ನಿಮಗೆ ಮಾನ ಮರ್ಯಾದೆ ಇದೆಯ'ಎಂದು ಪ್ರಶ್ನಿಸಿದರು.

'ದೋಸ್ತಿ ಸರ್ಕಾರ ಬೀಳಲು ಶ್ರೀನಿವಾಸ ಪ್ರಸಾದ್‌ ಕಾರಣ ಎಂಬ ಎಚ್‌. ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌, ಜೆಡಿಎಸ್‌ ಪರಸ್ಪರ ಕಚ್ಚಾಡಿಕೊಂಡಿದ್ದರಿಂದ ಸರ್ಕಾರ ಪತಗೊಂಡಿದೆ. ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಸರ್ಕಾರ ಪತನಗೊಳ್ಳಲು ಅಪ್ಪ–ಮಕ್ಕಳು ಕಾರಣ’ ಎಂದು ಸಿದ್ದರಾಮಯ್ಯ ಹೇಳಿದ್ದರು. ವಿಶ್ವನಾಥ್‌ ನನ್ನ ಸ್ನೇಹಿತರು. ಅವರು ಯಾವ ಕಾರಣಕ್ಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ' ಎಂದು ತಿಳಿಸಿದರು.

'ವಿಶ್ವನಾಥ್‌ ಅವರಿಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೆ ಅವಮಾನ ಮಾಡಲಾಗಿದೆ. ಇದರಿಂದ ಬೇಸತ್ತು ಪಕ್ಷದಿಂದ ಹೊರಬಂದಿದ್ದರು' ಎಂದರು.

'ಶಿಕ್ಷಣ ಇಲಾಖೆ ಹೊರಡಿಸಿದ ಕೈಪಿಡಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಆಗಿರುವ ವಿಷಯದಲ್ಲಿ ಶಿಕ್ಷಣ ಸಚಿವರು ಬೇಜವಾಬ್ದಾರಿಯಿಂದ ವರ್ತಿಸಿಲ್ಲ. ಅವರು ರಾಜೀನಾಮೆ ನೀಡಬೇಕಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಒಳಗೊಂಡಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ. ಕಣ್ತಪ್ಪಿನಿಂದ ಪ್ರಮಾದ ಆಗಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಈ ವಿವಾದ ಇಲ್ಲಿಗೆ ಕೊನೆಗೊಂಡಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT