ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಸಿ ರೊಮ್ಯಾನ್ಸ್‌’ನಿಂದ ‘ವಾರ್‌’ ತನಕ...

Last Updated 1 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಶುದ್ಧ್‌ ದೇಸಿ ರೊಮ್ಯಾನ್ಸ್‌’ ಸಿನಿಮಾದ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ವಾಣಿ ಕಪೂರ್‌, ಇದೇ ಸಿನಿಮಾದ ಅಭಿನಯಕ್ಕಾಗಿ ‘ಬೆಸ್ಟ್‌ ಫಿಮೇಲ್‌ ಡೆಬ್ಯು’ ಪ್ರಶಸ್ತಿಯನ್ನೂ ಪಡೆದಿದ್ದರು.

‘ಆಹಾ ಕಲ್ಯಾಣಂ’, ‘ಬೇಫಿಕರ್‌’ ಸಿನಿಮಾಗಳಲ್ಲಿ ಅಭಿನಯಿಸಿದ ಬಳಿಕ ಈಗ ಅವರಿಗೆ, ಇಂದು ಬಿಡುಗಡೆಯಾಗುವ ‘ವಾರ್‌’ ಸಿನಿಮಾದಲ್ಲಿ ಹೃತಿಕ್‌ ರೋಷನ್‌ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೈಗರ್ ಶ್ರಾಫ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ದೂರವಾಣಿ ಮೂಲಕ ವಾಣಿ ಕಪೂರ್ ತಮ್ಮ ಸಿನಿಜರ್ನಿಯನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಆಯ್ಕೆ ಹೇಗೆ ಮಾಡುತ್ತೀರಿ?

ಸಿನಿಮಾದಲ್ಲಿ ನಾಯಕಿಯ ಪಾತ್ರ ಗಟ್ಟಿಯಾಗಿರಬೇಕು. ಜೊತೆಗೆ ನಿರ್ದೇಶಕರು, ನಿರ್ಮಾಣದ ಬಗ್ಗೆಯೂ ಗಮನವಹಿಸುತ್ತೇನೆ. ಕೆಲವೊಮ್ಮೆ ಸಿನಿಮಾದ ನಟ, ನಟಿಯರು ಕೂಡ ಮುಖ್ಯ ಆಗುತ್ತಾರೆ. ಟೈಗರ್ ಶ್ರಾಫ್‌ ಹಾಗೂ ಹೃತಿಕ್‌ಗೆ ಬಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಇದೆ. ಅಲ್ಲದೇ ಈ ನಟರ ಹಿಂದಿನ ಸಿನಿಮಾಗಳು ನನಗೆ ಇಷ್ಟ ಆಗಿವೆ. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಸ್ಕ್ರಿಪ್ಟ್‌ ಆಯ್ಕೆ ಮಾಡುತ್ತೇನೆ.

‘ವಾರ್‌’ ನಿಮ್ಮ ಭವಿಷ್ಯ ಬದಲಿಸುವ ಸಿನಿಮಾ ಆಗಲಿದೆಯಾ?

ಇದೇ ನಿರೀಕ್ಷೆಯಲ್ಲಿಯೇ ನಾನು ಈ ಸಿನಿಮಾ ಒಪ್ಪಿಕೊಂಡೆ. ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ. ಜೊತೆಗೆ ಬಾಲಿವುಡ್‌ನಲ್ಲಿ ಇಂತಹ ಸಿನಿಮಾ ಹಿಂದೆಂದೂ ಬಂದಿಲ್ಲ. ಈ ಸಿನಿಮಾದ ಜಗತ್ತೇ ಬೇರೆ ಇದೆ. ಟೈಗರ್ ಹಾಗೂ ಹೃತಿಕ್‌ ಇದ್ದರೆ ಎಲ್ಲರಿಗೂ ಗೊತ್ತಿರುವಂತೆ ಒಂದಿಷ್ಟು ಆ್ಯಕ್ಷನ್‌, ಥ್ರಿಲ್‌ ಎಲ್ಲಾ ಇದ್ದೇ ಇರುತ್ತದೆ.

ನನಗೆ ವಿಭಿನ್ನ ಪಾತ್ರಗಳು ಬಾಲಿವುಡ್‌ನಲ್ಲಿ ಸಿಗುತ್ತಿವೆ ಅನ್ನುವ ಖುಷಿ ಇದೆ. ಸಹನಟರ ಬಗ್ಗೆ ನಾನು ಹೇಳಲೇಬೇಕು. ಈ ಸಿನಿಮಾದಲ್ಲಿ ನಾನು ಹೃತಿಕ್‌ಗೆ ನಾಯಕಿಯಾಗಿದ್ದೇನೆ. ಅಷ್ಟು ದೊಡ್ಡ ನಟರಾಗಿದ್ದರೂ ಅವರು ನನ್ನೊಂದಿಗೆ ಸಹಜವಾಗಿದ್ದರು. ಕೆಲವು ಸಂದರ್ಭದಲ್ಲಿ ನಟನೆಯ ಬಗ್ಗೆಯೂ ಮಾತನಾಡಿದರು. ಈ ಸಿನಿಮಾದಿಂದ ನನ್ನ ನಿರೀಕ್ಷೆ ಕೂಡ ದೊಡ್ಡದಿದೆ. ಸಿಕ್ಕ ಒಂದು ಒಳ್ಳೆಯ ಅವಕಾಶದಿಂದ ಬಾಲಿವುಡ್‌ನಲ್ಲಿ ನೆಲೆವೂರುವಂತಹ ಅಭಿನಯ ನೀಡಬೇಕು ಎಂದು ಪ್ರಯತ್ನಿಸಿದ್ದೇನೆ. ಯಶಸ್ಸು ನೀಡುವುದು, ಬಿಡುವುದು ಜನರಿಗೆ ಬಿಟ್ಟಿದ್ದು. ಸಿನಿಮಾ ಎಲ್ಲರಿಗೂ ಇಷ್ಟ ಆದರೆ ಸಾಕು.

ಫಿಟ್‌ನೆಸ್‌ಗೆ ನೀವು ಎಷ್ಟು ಸಮಯ ಕೊಡುತ್ತೀರಿ?

ನಾನು ನಟಿಯಾಗಿ ಮಾತ್ರ ಫಿಟ್‌ನೆಸ್‌ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇದಕ್ಕೂ ಮೊದಲು ನಾನು ರೂಪದರ್ಶಿಯಾಗಿ ಕೆಲಸ ಮಾಡಿದ್ದೇನೆ. ಫಿಟ್ ಆಗಿಲ್ಲದಿದ್ದರೆ ಫ್ಯಾಷನ್‌ ಜಗತ್ತಿನಲ್ಲಿ ಉಳಿಯುವುದು ಕಷ್ಟ. ನಾನು ನಟಿಯಾಗಿಲ್ಲದೇ ಸಾಮಾನ್ಯ ಯುವತಿಯಾಗಿದ್ದರೂ ಫಿಟ್‌ನೆಸ್‌ ಬಗ್ಗೆ ಖಂಡಿತಾ ಗಮನಕೊಡುತ್ತಿದ್ದೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದು. ದಿನದಲ್ಲಿ ಎರಡು ತಾಸು ನಾನು ವ್ಯಾಯಾಮ ಮಾಡುತ್ತೇನೆ. ದಿನದಲ್ಲಿ ಎರಡು ಹೊತ್ತಾದರೂ ಮನೆ ಊಟ ಮಾಡುತ್ತೇನೆ.

ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುತ್ತೀರಾ?

ನಾನು ದಕ್ಷಿಣದ ಸಿನಿಮಾಗಳ ಅಭಿಮಾನಿ. ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ‘ಅರ್ಜುನ್‌ ರೆಡ್ಡಿ’ ನನಗೆ ಅತ್ಯಂತ ಇಷ್ಟವಾದ ಸಿನಿಮಾ. ಸಾಕಷ್ಟು ಬಾರಿ ನೋಡಿದ್ದೇನೆ. ನಾನಿ ಜೊತೆ ‘ಆಹಾ ಕಲ್ಯಾಣಂ’ ಸಿನಿಮಾ ಮಾಡಿದ್ದೇನೆ. ಅವರೊಂದಿಗೆ ಅಭಿನಯಿಸಿದ್ದು ತುಂಬಾ ಖುಷಿ ಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT