ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ: ಮುಖ್ಯಮಂತ್ರಿ ಭರವಸೆ

‘ವರದಿ ಬಂದ ಬಳಿಕ ನಿರ್ಧಾರ’
Last Updated 13 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿರ್ಧರಿಸುವ ಸಲುವಾಗಿ ರಚಿಸಿರುವ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನದಾಸ್‌ ನೇತೃತ್ವದ ಏಕಸದಸ್ಯ ಆಯೋಗ ವರದಿ ಸಲ್ಲಿಸಿದಬಳಿಕ ಮೀಸಲಾತಿ ಹೆಚ್ಚಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮೂವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಆಯೋಗವು ಶೀಘ್ರ ವರದಿ ಸಲ್ಲಿಸುವಂತೆ ಕೋರಲಾಗುವುದು. ಬಳಿಕ ಚರ್ಚಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು. ಸದ್ಯ ಪರಿಶಿಷ್ಟ ಪಂಗಡಕ್ಕೆ ಶೇ 3ರಷ್ಟು ಮೀಸಲಾತಿ ಇದೆ ಎಂದರು.

‘ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಧರ್ಮ.
ಮುಂದಿನ ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಸಮುದಾಯದವರು ನೆಮ್ಮದಿಯ, ಗೌರವಯುತ ಜೀವನ ಸಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಹಿಂದಿನ ಸಮ್ಮಿಶ್ರ ಸರ್ಕಾರ ರಚಿಸಿದ ಆಯೋಗವನ್ನೇ ಈ ಸರ್ಕಾರವೂ ಮುಂದುವರಿಸುವ ಮೂಲಕ ನಾಯಕ ಜನಾಂಗಕ್ಕೆ ಶೀಘ್ರ ಮೀಸಲಾತಿಯ ಸೌಲಭ್ಯ ದೊರಕುವಂತೆ ಮಾಡಲು ಬಯಸಿದೆ. ಆಯೋಗವು ಎರಡು ತಿಂಗಳೊಳಗೆ ತನ್ನ ವರದಿ ನೀಡುವ ನಿರೀಕ್ಷೆ ಇದೆ’ ಎಂದರು.

ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಮಹಾಸಸ್ವಾಮೀಜಿ, ‘ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ರಾಜುಗೌಡ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆಶೇ 7.5ರಷ್ಟು ಮೀಸಲಾತಿ ನೀಡಿದರೆ ನಾಯಕ ಸಮುದಾಯಕ್ಕೆ ಯಾವ ಕೊಡುಗೆಯೂ ಬೇಡ ಎಂದರು.

ವಾಲ್ಮೀಕಿ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಕಮಲಾ ಹಂಪನಾ (ಸಾಹಿತ್ಯ), ಓಬಳ‍ಪ್ಪ (ಸಮಾಜ ಸೇವೆ) ಮತ್ತು ಡಾ.ಜಿ.ರಂಗಯ್ಯ (ಶಿಕ್ಷಣ) ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ₹5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

ಕಲ್ಲು ತೂರಾಟ
ನಂಜನಗೂಡು: ಪಟ್ಟಣದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ವೇಳೆ ಕಲ್ಲು ತೂರಾಟ ನಡೆದಿದ್ದು, 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೆರವಣಿಗೆಯಲ್ಲಿ ಹೆಚ್ಚಿನ ಡಿ.ಜೆ ವಾಹನಗಳಿಗೆ ಅವಕಾಶ ನೀಡದ್ದಕ್ಕೆ ಆಕ್ರೋಶಗೊಂಡ ಯುವಕರು ಕಲ್ಲು ತೂರಾಟ ನಡೆಸಿದರು. ಡಿವೈಎಸ್‌ಪಿ ಮಲ್ಲಿಕ್, ಸರ್ಕಲ್‌ ಇನ್‌ಸ್ಪೆಕ್ಟರ್ ಶೇಖರ್ ಹಾಗೂ ಗ್ರಾಮಾಂತರ ವಿಭಾಗದ ಇನ್‌ಸ್ಪೆಕ್ಟರ್ ಪುನೀತ್‌ ಅವರನ್ನು ಯುವಕರ ಗುಂಪು ಹಿಡಿದು ಎಳೆದಾಡಿತು. ಈ ವೇಳೆ ಮಲ್ಲಿಕ್ ಅವರ ಬಳಿ ಇದ್ದ ₹ 25
ಸಾವಿರವಿದ್ದ ಪರ್ಸ್ ಕಳೆದು ಹೋಯಿತು. ಪುನೀತ್‌ ಅವರ ಸಮವಸ್ತ್ರ ಹರಿಯಿತು.

‘ಮೀಸಲಾತಿ ಹೆಚ್ಚಿಸದಿದ್ದರೆ ನಿವೃತ್ತಿ’
ಚಿತ್ರದುರ್ಗ: ‘ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿರುವ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಏರಿಕೆ ಮಾಡಬೇಕು ಎಂಬ ಬೇಡಿಕೆ ಎರಡು ತಿಂಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆ ಇದೆ. ಮೀಸಲಾತಿ ಪ್ರಮಾಣ ನಿರೀಕ್ಷೆಯಷ್ಟು ಏರಿಕೆಯಾಗದೇ ಇದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದರು.

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ‘ನಾಯಕ ಸಮುದಾಯಕ್ಕೆ ಕೇಂದ್ರ ಸರ್ಕಾರ ಶೇ 7.5ರಷ್ಟು ಮೀಸಲಾತಿ ಕಲ್ಪಿಸಿದೆ. ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಕೂಡ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿವೆ. ಆದರೂ ಸಮುದಾಯಕ್ಕೆ ಜನಸಂಖ್ಯೆ ಆಧಾರಿತ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣದ ಏರಿಕೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿ ರಚನೆಯಾಗಿದೆ. ಹಿಂದಿನ ಸರ್ಕಾರ ಸಮಿತಿಗೆ ಕಾಲಮಿತಿ ನಿಗದಿ ಮಾಡಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಶಿಫಾರಸು ಮಾಡಿಸಲಾಗಿದೆ’ ಎಂದರು.

ವಿಧಾನಸೌಧದ ಹೊರಗೂ ಮಾಧ್ಯಮ ನಿರ್ಬಂಧ!
ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ದೃಶ್ಯ ಮಾಧ್ಯಮದವರ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿದ್ದ ಸರ್ಕಾರ, ಭಾನುವಾರ ವಿಧಾನಸೌಧದ ಹೊರಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧ ವಿಧಿಸಿತು.

ಇದರಿಂದ ರೊಚ್ಚಿಗೆದ್ದ ದೃಶ್ಯ ಮಾಧ್ಯಮಗಳ ಪತ್ರಕರ್ತರು ಮತ್ತು ಛಾಯಾಗ್ರಾಹಕರು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಬಹಿಷ್ಕರಿಸಿ, ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಆಗಿದ್ದೇನು: ವಾಲ್ಮೀಕಿ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡುವುದಿತ್ತು. ಇದನ್ನು ಚಿತ್ರೀಕರಿಸಲು ತೆರಳುತ್ತಿದ್ದ ದೃಶ್ಯ ಮಾಧ್ಯಮದವರಿಗೆ ಪೊಲೀಸರು ನಿರ್ಬಂಧ ವಿಧಿಸಿದರು.

ದೇವೇಗೌಡರ ವಿರೋಧ: ‘ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ನಿರ್ಬಂಧಿಸುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸ್ಫೀಕರ್‌ ನಿರ್ಬಂಧ ಹೇರಿದ್ದಾರೆ ಎಂದು ಹೇಳುತ್ತಲೇ ಇದೀಗ ಸರ್ಕಾರವೇ ನಿರ್ಬಂಧ ಹೇರಿದಂತಿದ್ದು, ಇದರ ವಿರುದ್ಧ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ, ಸ್ಪಂದಿಸದಿದ್ದರೆ ಉಗ್ರವಾಗಿ ಪ್ರತಿಭಟಿಸಲಾಗುವುದು’ ಎಂದು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT