ವರ್ಚಗಲ್‌: ಗೊಂಬೆಗಳ ಮದುವೆ ಸಂಭ್ರಮ

7
ಮಳೆಗಾಗಿ ವಿಶಿಷ್ಟ ಆಚರಣೆ ಮೂಲಕ ವರುಣನಿಗೆ ಮೊರೆ ಇಟ್ಟ ಗ್ರಾಮಸ್ಥರು

ವರ್ಚಗಲ್‌: ಗೊಂಬೆಗಳ ಮದುವೆ ಸಂಭ್ರಮ

Published:
Updated:
ಮುಧೋಳ ತಾಲ್ಲೂಕು ವರ್ಚಗಲ್‌ನಲ್ಲಿ ಬುಧವಾರ ಗೊಂಬೆಗಳಿಗೆ ಶಾಸ್ತ್ರೋತ್ತರವಾಗಿ ಮದುವೆ ಮಾಡಿಸಿದ ಗ್ರಾಮಸ್ಥರು ಮಳೆಗಾಗಿ ವರುಣನಿಗೆ ಮೊರೆ ಇಟ್ಟರು.

ಲೋಕಾಪುರ (ಬಾಗಲಕೋಟೆ): ಮಳೆಯ ಸಮೃದ್ಧಿಗಾಗಿ ವರುಣ ದೇವನಿಗೆ ಪ್ರಾರ್ಥಿಸಿ ಸಮೀಪದ ವರ್ಚಗಲ್ ಗ್ರಾಮದಲ್ಲಿ ಬುಧವಾರ ಗೊಂಬೆಗಳ ಮದುವೆ ಮಾಡಲಾಯಿತು.

ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಸಾಮಾನ್ಯ ಮದುವೆ ಸಮಾರಂಭದಲ್ಲಿ ಮಾಡುವ ಎಲ್ಲಾ ಕೈಂಕರ್ಯಗಳು ಈ ವೇಳೆ ನಡೆದವು. ಓಣಿಯ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮೊದಲಿಗೆ ಓಣಿಯ ಹಿರಿಯರೆಲ್ಲಾ ಸೇರಿ ಗೊಂಬೆಗಳಿಗೆ ಅರಿಷಿಣ ಹಚ್ಚಿ ನೀರು ಹಾಕಿದರು. ನಂತರ ಚಿಕ್ಕ ಮಕ್ಕಳ ಕೈಗೆ ಗೊಂಬೆಗಳನ್ನು ಕೊಟ್ಟು ಅವರ ಮೂಲಕವೇ ಮದುವೆ ಮಾಡಿಸಿದರು. ಹೆಣ್ಣು ಮತ್ತು ಗಂಡು ಗೊಂಬೆಗಳಿಗೆ ಸುರಗಿ ಕಟ್ಟುವ ಜೊತೆಗೆ ವಿಶೇಷ ಆರತಿ ಮಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಸಾಮಾನ್ಯ ಮದುವೆಗಳ ರೀತಿ ಶಾಸ್ತ್ರೋತ್ತವಾಗಿ ವಿಧಿ–ವಿಧಾನ ಪಾಲನೆ ಮಾಡಿದ್ದು ಗಮನ ಸೆಳೆಯಿತು.

ಗ್ರಾಮಸ್ಥರೆಲ್ಲ ಸೇರಿ ವರನ ಮನೆಯಲ್ಲಿ ಹಾಲುಗಂಬ ನೆಟ್ಟು, ಒಳಕಲ್ಲು ಪೂಜಿ ಮಾಡಿದರು. ಬಳೆ ತೊಡಿಸುವುದು, ವಿವಿಧ ಪದಾರ್ಥಗಳ ಕುಟ್ಟುವಿಕೆ ಸಾಂಪ್ರದಾಯ ನೆರವೇರಿತು. ವರನ ಕಡೆಯವರು ಬಂದಾಗ ಇದಿರುಗೊಳ್ಳಲಾಯಿತು. ವಧುವಿನ ಕಡೆಯವರು ಬಂದು ವರನ ಬಳಗದವರಿಗೆ ಸಿಹಿ ನೀಡಿ ಮದುವೆಗೆ ಆಮಂತ್ರಿಸಿದರು. 

‘ನಾವು ಸಂಪೂರ್ಣ ಕೃಷಿಯನ್ನೇ ನಂಬಿದ್ದೇವೆ. ಮಳೆ ಇಲ್ಲದೆ ಕೆಲಸವೇ ಇಲ್ಲ, ಗ್ರಾಮದಲ್ಲಿ ಎಲ್ಲರೂ ಸೇರಿ, ಈ ರೀತಿ ಧಾರ್ಮಿಕ ಕಾರ್ಯಗಳಲ್ಲಿ ತೊಡುಗುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ. ಮನಸ್ಸಿಗೂ ಕೊಂಚ ನೆಮ್ಮದಿ ಸಿಗುತ್ತದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ರೇಣುಕಾ ಕುಂಬಾರ.

ಗ್ರಾಮಸ್ಥರಾದ ಈರಪ್ಪ ಕಟ್ಟಿ, ಕರೆಯಪ್ಪ ಪೂಜಾರ, ಶಂಕರಗೌಡ ಪಾಟೀಲ, ಹಣಮಪ್ಪ ತುಳಸಿಗೇರಿ, ಬಸನಗೌಡ ಪಾಟೀಲ, ಪಾರ್ವತೆವ್ವ ಪಾಟೀಲ, ಶ್ಯಾಮಲವ್ವ ತುಳಸಿಗೇರಿ, ಗೌರವ್ವ ವಿ. ಪಾಟೀಲ, ಪಾರವ್ವ ಪಾಟೀಲ, ಯಮನವ್ವ ಮುತ್ತಣ್ಣವರ, ಕಮಲವ್ವ ಕಟ್ಟಿ, ಚಿನ್ನವ್ವ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !