ಪಕ್ಷಾಂತರಿಗಳಿಗೆ ಜೈಲುಶಿಕ್ಷೆಯಾಗಲಿ: ವಾಟಾಳ್ ನಾಗರಾಜ್ ಆಗ್ರಹ

7

ಪಕ್ಷಾಂತರಿಗಳಿಗೆ ಜೈಲುಶಿಕ್ಷೆಯಾಗಲಿ: ವಾಟಾಳ್ ನಾಗರಾಜ್ ಆಗ್ರಹ

Published:
Updated:

ಕಾರವಾರ: ‘ರಾಜ್ಯದಲ್ಲಿ ದನಕರುಗಳಿಗೆ, ನಾಯಿಗಳಿಗೆ ಸರಳವಾಗಿ ಓಡಾಡಲು ಸಾಧ್ಯವಿದೆ. ಆದರೆ, ಶಾಸಕರಿಗೆ ಸಾಧ್ಯವಿಲ್ಲದಂತಹ ವಾತಾವರಣವಿದೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಟೀಕಿಸಿದರು.

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆ ಜಾರಿಗೆ ಒತ್ತಾಯಿಸಿ ನಗರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರವಾರ ಆಯೋಜಿಸಲಾದ ವಾಹನ ಸಂಚಾರ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬಿಜೆಪಿ ಅವರು ಆರು ತಿಂಗಳಿನಿಂದ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಪದ್ಧತಿಯನ್ನು ನಾನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಈ ರೀತಿಯ ಕುದುರೆ ವ್ಯಾಪಾರ ನಿಲ್ಲಬೇಕು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವಂಥದ್ದು ಖಂಡನೀಯ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಒಂದಿಷ್ಟು ಶಾಸಕರನ್ನು, ಗೋವಾದಲ್ಲಿ ಮತ್ತೊಂದಿಷ್ಟು ಶಾಸಕರನ್ನು ಪ್ರಾಣಿಗಳನ್ನು ಝೂನಲ್ಲಿ ಕೂಡಿಡುವಂತೆ ಹಿಡಿದಿಟ್ಟಿದ್ದಾರೆ. ಈಗಿನ ಸ್ಥಿತಿಯಲ್ಲಿ ಶಾಸಕರ ಬೆಲೆ ಮೂರು ಕಾಸಿಗಿಂತಲೂ ಕಡೆಯಾಗಿದೆ. ಈಗ ಉಂಟಾಗುತ್ತಿರುವ ವ್ಯವಸ್ಥೆ ಬದಲಾಗಬೇಕು. ಶಾಸಕರು ಪಕ್ಷಾಂತರ ಮಾಡಿದರೆ ಆರು ವರ್ಷ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು. ಅವರು ಅಧಿಕಾರ ಕಳೆದುಕೊಳ್ಳಬೇಕು ಹಾಗೂ ಜೈಲು ಶಿಕ್ಷೆಯಾಗಬೇಕು. ಅಂತಹ ಜನಪ್ರತಿನಿಧಿಗಳ ವಿರುದ್ಧ ಕ್ಷೇತ್ರದ ಮತದಾರರು ತೀವ್ರ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ರೈಲು ಮಾರ್ಗ ನಿರ್ಮಾಣವಾಗಲಿ: ಸುಮಾರು 20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ನಿರ್ಮಾಣವಾಗಬೇಕು. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

'ಇಲ್ಲಿ ಮಾಡಿರುವುದು ಕೇವಲ ಪ್ರಾತಿನಿಧಿಕ ಹೋರಾಟ. ಕಾರವಾರದ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಚಿಂತನೆ ನಡೆಸದಿದ್ದರೆ ಕಾರವಾರ ಬಂದ್ ಮಾಡಲಾಗುವುದು. ಜೈಲ್ ಭರೋ ಕೂಡ ಮಾಡುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಲಾಯಿತು. ಪೊಲೀಸರು ವಾಟಾಳ್ ನಾಗರಾಜ್ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !