ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ವಿ.ವಿ ಬೆಳ್ಳಿಹಬ್ಬ ಮೊಟಕು: ಏಕಪಕ್ಷೀಯ ನಿರ್ಧಾರ ಕುಲಪತಿಗೆ ಮುಳುವಾಯಿತೇ?

ಸಮಾರೋಪ ಮೊಟಕು; ವಿ.ವಿ. ಒಳ, ಹೊರಗೂ ವಿರೋಧದ ಬಿಸಿ
Last Updated 28 ಜನವರಿ 2019, 20:15 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಸಮಾರೋಪಕ್ಕೆ ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಿದಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಏಕಪಕ್ಷೀಯ ನಿರ್ಧಾರ ಸ್ವತಃ ಅವರಿಗೆ ಮುಳುವಾಯಿತೇ?

ಸದ್ಯದ ವಿದ್ಯಮಾನ ನೋಡಿದರೆ ಈ ಪ್ರಶ್ನೆ ಮೂಡುವುದು ಸಹಜ. ಭಟ್‌ ಅವರನ್ನು ಆಹ್ವಾನಿಸಿದ್ದಕ್ಕೆ ವಿ.ವಿ. ಒಳ ಹಾಗೂ ಹೊರಗೂ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಘಂಟಿಯವರ ಬೆಂಬಲಕ್ಕೆ ಬೆರಳೆಣಿಕೆಯಷ್ಟು ಜನ ಕೂಡ ನಿಲ್ಲಲಿಲ್ಲ. ಅದರಲ್ಲೂ ವಿ.ವಿ.ಯಲ್ಲೂ ಯಾರೊಬ್ಬರು ಅವರನ್ನು ಬೆಂಬಲಿಸಲಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಕನ್ನಡ ವಿ.ವಿ.ಯಲ್ಲಿ ಫೆ. 1ರಂದು ಹಮ್ಮಿಕೊಂಡಿದ್ದ ಬೆಳ್ಳಿಹಬ್ಬದ ಸಮಾರೋಪವನ್ನು ಮೊಟಕುಗೊಳಿಸುವ ನಿರ್ಧಾರ ಸೋಮವಾರ ಪ್ರಕಟಿಸಿದರು. ಅಷ್ಟೇ ಅಲ್ಲ, ಬೆಳ್ಳಿಹಬ್ಬದ ಪ್ರಯುಕ್ತ ಜ. 31ರಂದು ಆಯೋಜಿಸಿದ್ದ ಕವಿ–ಕಾವ್ಯ ಸಂಭ್ರಮ ಕೂಡ ಮುಂದೂಡಿದ್ದಾರೆ.

ನುಡಿಹಬ್ಬ ಸೇರಿದಂತೆ ಯಾವುದೇ ಪ್ರಮುಖ ಕಾರ್ಯಕ್ರಮಗಳನ್ನು ವಿ.ವಿ.ಯಲ್ಲಿ ಸಂಘಟಿಸುವ ಮುನ್ನ ಕುಲಪತಿಗಳು ಸಿಂಡಿಕೇಟ್‌ ಸಭೆಯ ಸದಸ್ಯರು, ಹಿರಿಯ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುವುದು ಸಂಪ್ರದಾಯ. ಆದರೆ, ಈ ವಿಷಯದಲ್ಲಿ ಹಾಗಾಗಿಲ್ಲ. ಘಂಟಿ ಒಬ್ಬರೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು, ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲು ಸೂಚಿಸಿದ್ದಾರೆ. ಈ ವಿಷಯವನ್ನು ಸ್ವತಃ ಘಂಟಿಯವರೇ ಒಪ್ಪಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಆಹ್ವಾನ ಪತ್ರಿಕೆ ಹರಿದಾಡುತ್ತಿದ್ದಂತೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗಿದೆ.ಅನೇಕ ಜನ ಬರಹಗಾರರು, ಹೋರಾಟಗಾರರು ವಿರೋಧ ದಾಖಲಿಸಿ, ಪೋಸ್ಟ್‌ ಮಾಡಿದ್ದಾರೆ.ಕವಿಗಳಾದಲಕ್ಷ್ಮೀಪತಿ ಕೋಲಾರ,ಹನುಮಂತ ಹಾಲಗೇರಿ,ರಮೇಶ್ ಗಬ್ಬೂರು,ಜಾಜಿ ದೇವೇಂದ್ರಪ್ಪ,ಅರುಣ್ ಜೋಳದಕೂಡ್ಲಿಗಿ,ಕೆ.ಪಿ.ನಟರಾಜ್ ಅವರು ಕವಿಗೋಷ್ಠಿ ಬಹಿಷ್ಕಿರಿಸಿದ್ದರು.

‘ಕೋಮು ನಂಜನ್ನು ಹರಡುತ್ತ, ಕನ್ನಡದ ಪ್ರಮುಖ ಸಾಹಿತಿಗಳ ವಿರುದ್ಧ ಸುಳ್ಳು ಬಿತ್ತಿ ದ್ವೇಷ ಕಾರಿದ ವಿಶ್ವೇಶ್ವರ ಭಟ್‌ ಆವರನ್ನು ಕನ್ನಡ ವಿ.ವಿ.ಗೆ ಆಹ್ವಾನಿಸಿರುವುದು ಅಧೋಗತಿಗೆ ಇಳಿದಿರುವುದನ್ನು ತೋರಿಸುತ್ತದೆ’ ಎಂದು ಬಿ. ಶ್ರೀಪಾದ, ಡಾ. ಶ್ರೀಕಂಠ ಕೂಡಿಗೆ, ಎಂ. ದತ್ತಾತ್ರೇಯ, ದಿನೇಶ್‌ ಅಮೀನ್‌ಮಟ್ಟು, ಕೆ.ಫಣಿರಾಜ್‌, ಸುರೇಶ್‌ ಭಟ್‌ ಬಾಕ್ರಬೈಲು, ವಿ.ಎಸ್‌. ಶ್ರೀಧರ್‌, ಶಿವರಾಮಯ್ಯ, ಜೆ.ಎಂ. ವೀರಸಂಗಯ್ಯ, ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಹಲವರು ಸಾಮೂಹಿಕವಾಗಿ ಪೋಸ್ಟ್‌ ಮಾಡಿದ್ದರು.

’ವಿಶ್ವೇಶ್ವರ ಭಟ್‌ ಅವರು ಮಹಿಳೆಯರ ವಿಷಯದಲ್ಲಿ ಅತ್ಯಂತ ಕೀಳು ಮಟ್ಟದಲ್ಲಿ ವಿಷ ಕಾರಿಕೊಂಡಿದ್ದಾರೆ. ಅವರು ಸಂವಿಧಾನ ವಿರೋಧಿ ಮನಃಸ್ಥಿತಿ ಹೊಂದಿದ್ದಾರೆ. ಇದೇ ವಿ.ವಿ. ಕುಲಪತಿಯಾಗಿದ್ದ ಡಾ.ಎಂ.ಎಂ. ಕಲಬುರ್ಗಿ ವಿರುದ್ಧ ಸುಳ್ಳು, ಇಲ್ಲಸಲ್ಲದನ್ನು ಬರೆದು ಜನರನ್ನು ಎತ್ತಿ ಕಟ್ಟಿದರು. ಅಂತಿಮವಾಗಿ ಕಲಬುರ್ಗಿಯವರು ಹತ್ಯೆಗೀಡಾಗಬೇಕಾಯಿತು. ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಲಕ್ಷಣ ಪತ್ರಕರ್ತನನ್ನು ಆಹ್ವಾನಿಸಿರುವುದು ಆತಂಕ ಉಂಟು ಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ಚಳವಳಿಯ ಸ್ವರೂಪ ಪಡೆದುಕೊಂಡಿತ್ತು.

ಹೊರಗಿನ ಬಿಸಿಯಿಂದತಡವಾಗಿ ಎಚ್ಚೆತ್ತವಿ.ವಿ.ಯ ಪ್ರಾಧ್ಯಾಪಕರು ಸೋಮವಾರ ವಿರೋಧ ದಾಖಲಿಸಿ ಮನವಿ ಸಲ್ಲಿಸಿದರೆ, ಬಯಲು ಚಿಂತನ ಸಂಶೋಧನಾ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮ ಕೈಬಿಡದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ಕೂಡ ನೀಡಿದರು. ಅದಕ್ಕೆ ಮಣಿದು ಕುಲಪತಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

‘ಎಲ್ಲ ವಿಚಾರಧಾರೆಯವರು ವಿ.ವಿ.ಗೆ ಬಂದು, ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಲಾಗಿತ್ತು ಹೊರತು ಬೇರೆ ಯಾವುದೇ ಉದ್ದೇಶವೂ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದರಿಂದ ಕಾರ್ಯಕ್ರಮ ಮುಂದೂಡುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಮಲ್ಲಿಕಾ ಘಂಟಿ ತಿಳಿಸಿದ್ದಾರೆ.

‘ನಮ್ಮ ನಡುವೆ ಇಷ್ಟೊಂದು ಅಸಹನೆ ಇರಬಾರದಿತ್ತು. ವಿಶ್ವೇಶ್ವರ ಭಟ್‌ ಅವರು ಪ್ರಮುಖ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ನಿರ್ವಹಿಸಿ, ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಓದುಗರನ್ನು ಹೆಚ್ಚಿಸಿದ್ದಾರೆ. ಅಂತಹದ್ದರಲ್ಲಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಚತ್ರ ಅನಿಸುತ್ತಿದೆ’ ಎಂದು ನಿಂಗಪ್ಪ ಮುದೇನೂರು ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT