ಗುರುವಾರ , ಡಿಸೆಂಬರ್ 12, 2019
24 °C
ಪ್ರತ್ಯೇಕ ಧರ್ಮ ಶಿಫಾರಸ್ಸು ತಿರಸ್ಕರಿಸಿದ ಕೇಂದ್ರ

ಪ್ರತಿಭಟನೆಯಾಗಿ ಬದಲಾದ ಲಿಂಗಾಯತ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೋರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲೆಂದೇ ಇಲ್ಲಿ ಆಯೋಜಿಸಿರುವ ಲಿಂಗಾಯತ ಸಮಾವೇಶ ಪ್ರತಿಭಟನೆಯಾಗಿ ಬದಲಾಯಿತು.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಸಂಗತಿ ಸೋಮವಾರ ಸಮಾವೇಶದ ಉದ್ಘಾಟನೆ ಆಗುವ ಮುನ್ನ ಬಹಿರಂಗ ಆಗುತ್ತಿದ್ದಂತೆಯೇ, ಇಲ್ಲಿನ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಘೋಷಣೆಗಳು ಮೊಳಗಿದವು. ರಾಜ್ಯ ಸರ್ಕಾರದ ಇದೇ ಮಾದರಿಯ ಶಿಫಾರಸ್ಸನ್ನು 2012ರಲ್ಲಿ ತಿರಸ್ಕರಿಸಲು ನೀಡಿರುವ ಕಾರಣಗಳನ್ನೇ ಕೇಂದ್ರ ಸರ್ಕಾರ ಮತ್ತೆ ನೀಡುವ ಮೂಲಕ ಲಿಂಗಾಯತರನ್ನು ಕೆಣಕಿದೆ. ಕಾನೂನು ಹೋರಾಟದ ಹಾದಿ ಈಗ ಸುಗಮಗೊಂಡಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಮುಖಂಡರು ಹೇಳಿದರು.

ಜೈನರೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ಪಡೆದಿದ್ದಾರೆ. ಅದೇ ರೀತಿ ಲಿಂಗಾ
ಯತರೂ ಕಾನೂನಿನ ಮೊರೆ ಹೋದಲ್ಲಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.

‘ಉತ್ತರ ಭಾರತದಲ್ಲಿ ಒಂದೊಂದೇ ರಾಜ್ಯಗಳು ನಿಮ್ಮ ಕೈತಪ್ಪಿ ಹೋಗುತ್ತಿವೆ. ದಕ್ಷಿಣ ಭಾರತಕ್ಕೆ ಬರುವ ಕನಸು ಕಾಣಬೇಡಿ. ಅಲ್ಲಿ ಬಹುಸಂಖ್ಯಾತ ಲಿಂಗಾಯತರು ನಿಮಗೆ ಅವಕಾಶ ನೀಡುವುದಿಲ್ಲ’ ಎಂದು ಮಹಾರಾಷ್ಟ್ರದ ಬಸವ ಬ್ರಿಗೇಡ್‌ ಅಧ್ಯಕ್ಷ ಅವಿನಾಶ ಪೋಶೀಕರ್‌ ಎಚ್ಚರಿಸಿದರು.

‘ಲಿಂಗಾಯತವು ಪ್ರತ್ಯೇಕ ಧರ್ಮ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ವಚನ ಸಾಹಿತ್ಯದ ಭಂಡಾರವೇ ಇದೆ. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಡಿದವರ ಇತಿಹಾಸವೇ ಇದೆ. ಪ್ರತ್ಯೇಕವಾದ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಮಾನ್ಯತೆ ಬೇಕಿದೆ. ಕೊಡದಿದ್ದರೆ ಹೋರಾಟ ಮಾಡುವುದು ಗೊತ್ತಿದೆ’ ಎಂದು ಅವರು ಹೇಳಿದರು.

ವಿವಿಧ ಮಠಾಧೀಶರು, ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಲಿಂಗಾಯತ ಸಮುದಾಯದ ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಲಿಂಗೈಕ್ಯರಾದ ಗದುಗಿನ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ಇಳಕಲ್ಲಿನ ಮಹಾಂತ ಶಿವಯೋಗಿಗಳಿಗೆ ಸಮಾವೇಶದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು