ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ತಪಾಸಣಾ ಕೇಂದ್ರ ಸಿದ್ಧ

Last Updated 16 ನವೆಂಬರ್ 2019, 22:12 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಸಾಮರ್ಥ್ಯ ಹಾಗೂ ಸ್ಥಿತಿಗತಿ ಕುರಿತ ತಪಾಸಣೆಗೆ ಇಲ್ಲಿನ ಚೊಕ್ಕನಹಳ್ಳಿಯಲ್ಲಿ ನಿರ್ಮಿಸಲಾಗಿರುವ ‘ಇನ್‌ಸ್ಪೆಕ್ಷನ್‌ ಆ್ಯಂಡ್‌ ಸರ್ಟಿಫಿಕೇಷನ್‌ ಸೆಂಟರ್‌‘ (ಐಸಿಸಿ) ಸದ್ಯದಲ್ಲೇ ಕಾರ್ಯಾರಂಭ ಮಾಡಲಿದ್ದು, ಮೈಸೂರು ಮತ್ತು ಧಾರವಾಡದ ತಪಾಸಣಾ ಕೇಂದ್ರಗಳ ಕಟ್ಟಡ ಕಾಮಗಾರಿಯೂ ಪೂರ್ಣಗೊಂಡಿದೆ.

ಚೊಕ್ಕನಹಳ್ಳಿ ಕೇಂದ್ರಕ್ಕೆ ರಾಜ್ಯ ಸರ್ಕಾರ ₹ 30 ಕೋಟಿ, ಕೇಂದ್ರ ಸರ್ಕಾರ ₹ 26 ಕೋಟಿ ನೀಡಿವೆ. ಮೈಸೂರು ಕೇಂದ್ರಕ್ಕೆ ₹ 16 ಕೋಟಿ ಮತ್ತು ಧಾರವಾಡ ಕೇಂದ್ರಕ್ಕೆ ₹ 15.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಮೂರೂ ಕೇಂದ್ರಗಳಿಗೆ ಸ್ಪೇನ್‌ನಿಂದ ಯಂತ್ರಗಳನ್ನು ತರಲಾಗುತ್ತಿದೆ. ಈ ಸಂಬಂಧದ ಮಾತುಕತೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ತಂಡ ಸದ್ಯದಲ್ಲೇ ಸ್ಪೇನ್‌ಗೆ ಪ್ರಯಾಣಿಸಲಿದೆ.

ಇದಲ್ಲದೆ, ಹಾಸನ ಮಂಗಳೂರು, ಕಲಬುರಗಿ ಹಾಗೂ ಶಿವಮೊಗ್ಗ ನಗರಗಳಲ್ಲೂ ಐಸಿಸಿ ಕೇಂದ್ರ ಸ್ಥಾಪಿಸುವ ಉದ್ದೇಶವಿದ್ದು, ಸರ್ಕಾರದ ಅನುಮೋದನೆ ದೊರೆತಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಸದ್ಯ, ನೆಲಮಂಗಲ ಬಳಿ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಶಾಲಾ ವಾಹನಗಳು ಮತ್ತು 15 ವರ್ಷ ಮೀರಿದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. 28 ತಿಂಗಳ ಹಿಂದೆ ಈ ಐಸಿಸಿ ಕಾರ್ಯಾರಂಭ ಮಾಡಿದ್ದು, ಇದುವರೆಗೆ 11,500 ವಾಹನಗಳನ್ನು ತಪಾಸಣೆ ಮಾಡಲಾಗಿದೆ.

ಚೊಕ್ಕನಹಳ್ಳಿ ಬಳಿ ಎರಡನೇ ಕೇಂದ್ರ ಕಾರ್ಯಾರಂಭ ಮಾಡುವುದರಿಂದ ಒತ್ತಡ ಕಡಿಮೆ ಆಗಲಿದ್ದು, ಸ್ವಲ್ಪಮಟ್ಟಿಗೆ ಬೇರೆ ವಾಹನಗಳನ್ನು ತಪಾಸಣೆ ಮಾಡಲು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿಯೇ ಈಗ ವಾಹನಗಳ ತಪಾಸಣೆ ನಡೆಸಿ ಸಾಮರ್ಥ್ಯ ಪ್ರಮಾಣ ಪತ್ರ (ಎಫ್‌ಸಿ) ಕೊಡುತ್ತಿದ್ದಾರೆ. ಅವರಿಂದ ನಿಖರ ತಪಾಸಣೆ ಸಾಧ್ಯವಾಗುತ್ತಿಲ್ಲ. ಯಂತ್ರಗಳ ನೆರವಿನಿಂದ ತಪಾಸಣೆ ಮಾಡುವುದರಿಂದ ಏನೇ ಲೋಪದೋಷಗಳಿದ್ದರೂ ಗಮನಕ್ಕೆ ಬರುತ್ತದೆ ಎಂದು ಮೂಲಗಳು ಹೇಳಿವೆ.

ಎಲ್ಲ ಜಿಲ್ಲೆಗಳಲ್ಲೂ ಕ್ರಮೇಣ ಇನ್‌ಸ್ಪೆಕ್ಷನ್‌ ಆ್ಯಂಡ್‌ ಸರ್ಟಿಫಿಕೇಷನ್‌ ಸೆಂಟರ್‌ ಅನ್ನು ಸ್ಥಾಪಿಸಲಾಗುವುದು. ಯಂತ್ರಗಳ ನೆರವಿನಿಂದ ವಾಹನಗಳ ಸಾಮರ್ಥ್ಯ ತಪಾಸಣೆ ನಡೆಯುವುದರಿಂದ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗಲಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಐದು ಜಿಲ್ಲೆಗಳಲ್ಲಿ ಚಾಲನಾ ಪಥ
ಮೈಸೂರು, ಹಾಸನ, ಶಿವಮೊಗ್ಗ, ಧಾರವಾಡ ಮತ್ತು ಕಲಬುರಗಿಯಲ್ಲಿ ₹ 23 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ಚಾಲನಾ ಪಥ ನಿರ್ಮಿಸಲಾಗುತ್ತಿದೆ.

ಈ ಉದ್ದೇಶಕ್ಕಾಗಿ ಶಿವಮೊಗ್ಗಕ್ಕೆ ₹ 6.38 ಕೋಟಿ, ಕಲಬುರಗಿಗೆ ₹ 4.15 ಕೋಟಿ, ಮೈಸೂರು, ಹಾಸನ ಹಾಗೂ ಧಾರವಾಡಕ್ಕೆ ತಲಾ ₹ 4 ಕೋಟಿ ಮಂಜೂರಾಗಿದೆ.

ಭಾರಿ ವಾಹನಗಳ ಚಾಲನಾ ಪಥ ನಿರ್ಮಾಣದ ಹೊಣೆಯನ್ನು ಕೆಎಸ್‌ಆರ್‌ಟಿಸಿ ಹಾಗೂ ಲಘು ವಾಹನಗಳ ಚಾಲನಾ ಪಥ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ.

*
ಇನ್‌ಸ್ಪೆಕ್ಷನ್‌ ಸರ್ಟಿಫಿಕೇಟ್‌ ಸೆಂಟರ್‌ನಲ್ಲಿ ವಾಹನಗಳ ತಪಾಸಣೆ ವೈಜ್ಞಾನಿಕವಾಗಿ ನಡೆಸುವುದರಿಂದ ಏನೇ ಲೋಪದೋಷ ಇದ್ದರೂ ಗಮನಕ್ಕೆ ಬರುತ್ತದೆ.
-ಬಿ.ಪಿ ಉಮಾಶಂಕರ್‌, ಹೆಚ್ಚುವರಿ ಕಮಿಷನರ್‌, ಸಾರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT