ಶುಕ್ರ ಯಾನ: ಪೂರ್ವಭಾವಿ ಕಾರ್ಯಕ್ಕೆ ಚಾಲನೆ

7
2023 ರಲ್ಲಿ ಬಾಹ್ಯಾಕಾಶ ನೌಕೆ ಉಡಾವಣೆ

ಶುಕ್ರ ಯಾನ: ಪೂರ್ವಭಾವಿ ಕಾರ್ಯಕ್ಕೆ ಚಾಲನೆ

Published:
Updated:
Deccan Herald

ಬೆಂಗಳೂರು: ಚಂದ್ರ ಮತ್ತು ಮಂಗಳ ಯಾನದ ಬಳಿಕ ಶುಕ್ರ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಯೋಜನೆಗೆ ಸಂಬಂಧಿಸಿದಂತೆ ಇಸ್ರೊ ಪೂರ್ವಭಾವಿ ಕಾರ್ಯಕ್ಕೆ ಚಾಲನೆ ನೀಡಿದೆ.

2023ರ ಮಧ್ಯ ಭಾಗದಲ್ಲಿ ನೌಕೆಯ ಉಡಾವಣೆ ನಿಗದಿಯಾಗಿದ್ದು, ನೌಕೆ ಹೊತ್ತೊಯ್ಯುವ ವೈಜ್ಞಾನಿಕ ಸಾಧನಗಳನ್ನು ಒಳಗೊಂಡ ಪೇಲೋಡ್‌ಗಳ ನಿರ್ಮಾಣಕ್ಕೆ ದೇಶ– ವಿದೇಶಗಳ ವಿಜ್ಞಾನಿಗಳ ಸಹಭಾಗಿತ್ವ ಪಡೆಯಲು ಇಸ್ರೊ ಮುಂದಾಗಿದೆ.

ವೈಜ್ಞಾನಿಕ ಸಾಧನಗಳನ್ನು ಒಳಗೊಂಡ ಎಲ್ಲ ಪೇಲೋಡ್‌ಗಳನ್ನು 2022ಕ್ಕೆ ಸಿದ್ಧಪಡಿಸಲು ಗಡುವು ನಿಗದಿ ಮಾಡಿದೆ. ಚಂದ್ರಯಾನ–2 ಮತ್ತು ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸುವ ಯೋಜನೆಗಳು ಪೂರ್ಣಗೊಂಡ ಬಳಿಕ ಶುಕ್ರ ಗ್ರಹ ನೌಕೆಯ ಉಡಾವಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಇಸ್ರೊ ಮೂಲಗಳು ತಿಳಿಸಿವೆ.

ಶುಕ್ರ ಗ್ರಹಕ್ಕೆ ಒಯ್ಯುವ ಉಪಗ್ರಹ 100 ಕೆ.ಜಿ ತೂಕದ್ದಾಗಿರಲಿದ್ದು, ಇದರಲ್ಲಿ ವೈಜ್ಞಾನಿಕ ಅಧ್ಯಯನದ ಸಾಧನಗಳನ್ನು ಅಳವಡಿಸಲಾಗುವುದು. ಆರಂಭದಲ್ಲಿ ಶುಕ್ರ ಗ್ರಹದಿಂದ 60,000 ಕಿ.ಮೀ ದೂರದಲ್ಲಿ ನೌಕೆಯು ಪರಿಭ್ರಮಣ ನಡೆಸಲಿದೆ. ಬಳಿಕ ಕ್ರಮೇಣ ಅಂತರ ಕಡಿಮೆ ಮಾಡಲಾಗುತ್ತದೆ.

ಭೂಮಿ ಮತ್ತು ಶುಕ್ರ ಗ್ರಹಗಳನ್ನು ಸೌರಮಂಡಲದ ‘ಅವಳಿ ಸಹೋದರಿಯರು’ ಎಂದೇ ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ಎರಡೂ ಗ್ರಹಗಳ ಗಾತ್ರ, ಸಮೂಹ ದ್ರವ್ಯ, ಸಾಂದ್ರತೆ ಮತ್ತು ಗುರುತ್ವ ಒಂದೇ ರೀತಿಯದ್ದಾಗಿವೆ. 4.5 ಶತಕೋಟಿ ವರ್ಷಗಳ ಹಿಂದೆ ಎರಡೂ ಗ್ರಹಗಳ ಹುಟ್ಟು ಒಂದೇ ಏಕ ಕಾಲದಲ್ಲಿಯೇ ಆಯಿತು. ಇವೆಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನದಲ್ಲಿ ಒತ್ತು ನೀಡಲು ಇಸ್ರೊ ಚಿಂತನೆ ನಡೆಸಿದೆ.

1960 ರ ಬಳಿಕ ಶುಕ್ರ ಗ್ರಹದ ಅಧ್ಯಯನಕ್ಕೆ ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿವೆ. ಕೆಲವು ಯೋಜನೆಗಳಲ್ಲಿ ಬಾಹ್ಯಾಕಾಶ ನೌಕೆಗಳು ಕಕ್ಷೆಯಲ್ಲಿದ್ದು ಅಧ್ಯಯನ ನಡೆಸಿದ್ದರೆ, ಇನ್ನೂ ಕೆಲವು ಯೋಜನೆಗಳಲ್ಲಿ ಲ್ಯಾಂಡರ್‌ಗಳನ್ನು ಇಳಿಸಿ ಶೋಧನೆ ನಡೆಸಲಾಗಿದೆ. ಆದರೆ, ವೈಜ್ಞಾನಿಕ ಅಧ್ಯಯನ ಇನ್ನೂ ಸಾಕಷ್ಟು ವಿಷಯಗಳಿವೆ. ಮುಖ್ಯವಾಗಿ ಶುಕ್ರಗ್ರಹದ ರಚನೆ, ಪರಿಭ್ರಮಣ, ಮೇಲ್ಮೈ ವಿಕಾಸ, ಹಸಿರುಮನೆ ವಿದ್ಯಮಾನಗಳ ಸಂಶೋಧನೆಗೆ ಅವಕಾಶವಿದೆ ಎಂದು ಇಸ್ರೊ ಹೇಳಿದೆ.

ಸಂಶೋಧನಾ ಪ್ರಸ್ತಾವನೆ: ಶುಕ್ರಗ್ರಹದಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಹೊಂದಿರುವ ಸಂಶೋಧನಾ ಸಂಸ್ಥೆಗಳು, ಬಾಹ್ಯಾಕಾಶ ಏಜೆನ್ಸಿಗಳಿಂದ ಪ್ರಸ್ತಾವನೆಗಳನ್ನು ಡಿಸೆಂಬರ್‌ 20 ರೊಳಗೆ ಸಲ್ಲಿಸುವಂತೆ ಇಸ್ರೊ ಮನವಿ ಮಾಡಿದೆ.

**

ಮೈಕ್ರೊಗ್ರಾವಿಟಿ ಪ್ರಯೋಗ

ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವುದಕ್ಕೆ ಪೂರ್ವಭಾವಿಯಾಗಿ ಭೂಮಿಯ ಕೆಳ ಹಂತದ ಕಕ್ಷೆಯಲ್ಲಿ ಮೈಕ್ರೊಗ್ರಾವಿಟಿ(ಅಲ್ಪ ಗುರುತ್ವ) ಪ್ರಯೋಗ ನಡೆಸಲು ಇಸ್ರೊ ಉದ್ದೇಶಿಸಿದೆ. ಪ್ರಯೋಗ ನಡೆಸಲು ದೇಶದ ವೈಜ್ಞಾನಿಕ ಸಮುದಾಯಕ್ಕೆ ಇಸ್ರೊ ಸಂಸ್ಥೆ ಆಹ್ವಾನ ನೀಡಿದೆ.

ಈ ಪರೀಕ್ಷೆಯನ್ನು ಭೂಮಿಯಿಂದ 400 ಕಿ.ಮೀ ಎತ್ತರದಲ್ಲಿ ನಡೆಸಲಾಗುವುದು. ಆಸ್ಟ್ರೊ ಬಯಾಲಜಿ, ಆಸ್ಟ್ರೊ ಕೆಮಿಸ್ಟ್ರಿ, ಬಾಹ್ಯಾಕಾಶ ಔಷಧ, ಮೂಲಭೂತ ಭೌತವಿಜ್ಞಾನ, ಬಾಹ್ಯಾಕಾಶ ಪರಿಸರದಲ್ಲಿ ಜೀವ ವಿಜ್ಞಾನ,  ಜೀವ ರಕ್ಷಕ ವ್ಯವಸ್ಥೆ ಮತ್ತು ಜೈವಿಕ ತ್ಯಾಜ್ಯ ನಿರ್ವಹಣೆ, ಬಾಹ್ಯಾಕಾಶದಲ್ಲಿ ಎದುರಾಗುವ ತೊಂದರೆಗಳು ಮತ್ತು ನಿವಾರಣೆ, ಸೆನ್ಸರ್‌ ಅಭಿವೃದ್ಧಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸಬಹುದು. ಈ ಪ್ರಯೋಗಗಳನ್ನು 24 ತಿಂಗಳು ಮತ್ತು 30 ತಿಂಗಳ ಕಾಲ ಪ್ರತ್ಯೇಕವಾಗಿ ನಡೆಸಬಹುದು ಎಂದು ಇಸ್ರೊ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !