ಶುಕ್ರವಾರ, ಡಿಸೆಂಬರ್ 6, 2019
21 °C

FactCheck | ಎನ್.ವೆಂಕಟಾಚಲ ಕರ್ನಾಟಕದ ಪ್ರಥಮ ಲೋಕಾಯುಕ್ತ ಅಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಲೋಕಾಯುಕ್ತಕ್ಕೆ ಹೊಸ ಘನತೆ ತಂದುಕೊಟ್ಟವರು ಮತ್ತು ಅದರ ಶಕ್ತಿಯನ್ನು ಸಮಾಜಕ್ಕೆ ಪರಿಚಯಿಸಿದವರು’ ಎಂದೇ ಇಂದು ನಿಧನರಾದ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರನ್ನು ರಾಜ್ಯದ ಜನರು ಗುರುತಿಸಿ ಗೌರವಿಸುತ್ತಾರೆ.

ಇದನ್ನೂ ಓದಿ: ಲೋಕಾಯುಕ್ತದ ‘ಶಕ್ತಿ’ ತೋರಿಸಿದ್ದ ಎನ್.ವೆಂಕಟಾಚಲ ನಿಧನ

ಆದರೆ ಅವರು ಕರ್ನಾಟಕದ ಮೊದಲ ಲೋಕಾಯುಕ್ತರಲ್ಲ. ಇದು ತಪ್ಪು ಮಾಹಿತಿ. ರಾಜ್ಯದ ಹಲವಾರು ಮಂದಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿರುವ ಶ್ರದ್ಧಾಂಜಲಿ ಬರಹಗಳಲ್ಲಿ ‘ನ್ಯಾಯಮೂರ್ತಿ ಎನ್.ವೆಂಕಟಾಚಲ ರಾಜ್ಯದ ಪ್ರಥಮ ಲೋಕಾಯುಕ್ತರು’ ಎಂಬರ್ಥದ ಸಾಲು ಬರೆದುಕೊಂಡಿದ್ದಾರೆ.

ಬೆಂಗಳೂರು ಆಕಾಶವಾಣಿ ಕೇಂದ್ರವೂ ತನ್ನ twitter.com/airnews_bang ಟ್ವಿಟರ್‌ ಅಕೌಂಟ್‌ನಲ್ಲಿ ಹೀಗೆ ಬರೆದಿದೆ.

‘ಕರ್ನಾಟಕದ ನಿವೃತ್ತ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್‌ನ  ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ವಯೋಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿಂದು ನಿಧನರಾಗಿದ್ದಾರೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೆಂಕಟಾಚಲ ಅವರು, ಕರ್ನಾಟಕದ ಪ್ರಥಮ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು’.

ಈ ಒಕ್ಕಣೆಯಲ್ಲಿರುವ ‘ಪ್ರಥಮ ಲೋಕಾಯುಕ್ತರಾಗಿ’ ಎನ್ನುವುದು ತಪ್ಪು ಮಾಹಿತಿ ಕೊಡುತ್ತವೆ. ವೆಂಕಟಾಚಲ ಅವರು ರಾಜ್ಯದ ನಾಲ್ಕನೇ ಲೋಕಾಯುಕ್ತರು. 1986ರಿಂದ 1991ರವರೆಗೆ ಕಾರ್ಯನಿರ್ವಹಿಸಿದ್ದ ಎ.ಡಿ.ಕೌಶಲ್ ರಾಜ್ಯದ ಮೊದಲ ಲೋಕಾಯುಕ್ತರಾಗಿ ಕೆಲಸ ಮಾಡಿದ್ದರು.

ನಂತರ ರವೀಂದ್ರನಾಥ್‌ ಪೈನೆ (1991–1996), ಅಬ್ದುಲ್‌ ಹಕೀಂ (1996–2001), ಎನ್‌.ವೆಂಕಟಾಚಲ (2001–2006), ಸಂತೋಷ್‌ ಹೆಗ್ಡೆ (2006 – 2010), ಶಿವರಾಜ್‌ ಪಾಟೀಲ್‌ 2011 ಜುಲೈ– ಸೆಪ್ಟೆಂಬರ್‌, ವೈ.ಭಾಸ್ಕರ ರಾವ್‌ (2013ರ ಫೆಬ್ರುವರಿಯಿಂದ 2015ರ ಡಿಸೆಂಬರ್) ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪಿ.ವಿಶ್ವನಾಥ ಶೆಟ್ಟಿ (2017ರ ಜನವರಿಯಿಂದ ಈವರೆಗೆ) ಲೋಕಾಯುಕ್ತರಾಗಿದ್ದಾರೆ.

ಈ ಮಾಹಿತಿಯನ್ನು ಲೋಕಾಯುಕ್ತ ವೆಬ್‌ಸೈಟ್ ಮತ್ತು ವಿಕಿಪಿಡಿಯಾದಲ್ಲಿರುವ Karnataka_Lokayukta ಪುಟ ಪುಷ್ಟೀಕರಿಸುತ್ತದೆ.

ವೆಂಕಟಾಚಾಲ ಪ್ರಥಮ ಲೋಕಾಯುಕ್ತರಾಗಿದ್ದರು ಎನ್ನುವ ತಪ್ಪು ಮಾಹಿತಿ ಇನ್ನೂ ಕೆಲವೆಡೆ ಕಂಡು ಬರುತ್ತಿದೆ.

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು