‘ಸಹಜ ಸಂರಚನೆಗೆ ಧಕ್ಕೆಯಾದರೆ ಅಪಾಯ’

7
ಗಾಡ್ಗೀಳ್‌ ವರದಿ ಜಾರಿ ಮಾಡಿ – ಭೂವಿಜ್ಞಾನಿ ಸಲಹೆ

‘ಸಹಜ ಸಂರಚನೆಗೆ ಧಕ್ಕೆಯಾದರೆ ಅಪಾಯ’

Published:
Updated:
Deccan Herald

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಹಾಗೂ ಕೇರಳದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ ವಾಗಿರುವುದಕ್ಕೆ ಪಶ್ಚಿಮಘಟ್ಟಗಳಲ್ಲಿ ಮಿತಿಮೀರಿದ ಮಾನವ ಚಟುವಟಿಕೆಯೇ ಕಾರಣವೇ?

ಹೌದು ಎನ್ನುತ್ತಾರೆ ಭೂವಿಜ್ಞಾನಿಗಳು.

ಪಶ್ಚಿಮಘಟ್ಟಗಳ ಸಂರಚನೆ ವಿಶಿಷ್ಟವಾದುದು, ಬಲು ಸೂಕ್ಷ್ಮವಾದುದು. ಇದಕ್ಕೆ ಧಕ್ಕೆ ಉಂಟು ಮಾಡಿದ್ದರಿಂದಲೇ ಈ ವಿಕೋಪಗಳು ಸಂಭವಿಸಿವೆ. ಇವುಗಳನ್ನು ಸಹಜ ಸ್ಥಿತಿಯಲ್ಲಿ ಉಳಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಖ್ಖನ್‌ ಪ್ರಸ್ಥಭೂಮಿಯ ಉಳಿದ ಭೂಪ್ರದೇಶಗಳಿಗೆ ಹೋಲಿಸಿದರೆ ಪಶ್ಚಿಮಘಟ್ಟಗಳಲ್ಲಿ ಶಿಥಿಲೀಕರಣ (ಕಲ್ಲು ಮಣ್ಣಾಗುವುದು) ಪ್ರಕ್ರಿಯೆ ಹೆಚ್ಚು. ಹಾಗಾಗಿ ಉಳಿದ ಕಡೆಗಳಿಗಿಂತ ಇಲ್ಲಿ ಮಣ್ಣಿನ ಪದರ ಜಾಸ್ತಿ ದಪ್ಪವಾಗಿರುತ್ತದೆ. ಇಲ್ಲಿ ನೂರಾರು ಅಡಿಗಳಷ್ಟು ಮಣ್ಣು ಇರುತ್ತದೆ. ಈ ಬಾರಿ  ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆ ಆಗಿರುವ ಕಾರಣ ಸಹಜವಾಗಿ ಇಲ್ಲಿನ ಭೂಪ್ರದೇಶದ ಮೇಲೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಅಲ್ಲಲ್ಲಿ ಭೂಕುಸಿತಗಳು ಉಂಟಾಗಿವೆ’ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಉಪನಿರ್ದೇಶಕರಾಗಿದ್ದ ವೆಂಕಟಸ್ವಾಮಿ ವಿವರಿಸಿದರು.

ಮೇಲ್ಪದರ ವ್ಯತ್ಯಯದಿಂದ ಅಪಾಯ: ‘ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಾನವ ಚಟುವಟಿಕೆಯಿಂದಾಗಿ ಭೂಮಿಯ ಹೊರಕವಚ ಸಂಪೂರ್ಣ ಬದಲಾಗುತ್ತಿದೆ. ಇಲ್ಲಿ ಈ ಹಿಂದೆ, ಮೇಲ್ಮೈ ಸಂರಚನೆಗೆ ಅನುಗುಣವಾಗಿ ದಟ್ಟಾರಣ್ಯ, ಪೊದೆ, ಹುಲ್ಲುಹಾಸುಗಳ ಹದವಾದ ಮಿಶ್ರಣವಿತ್ತು. ಇತ್ತೀಚೆಗೆ ಇಲ್ಲಿ ರಸ್ತೆ ನಿರ್ಮಾಣಕ್ಕೆ, ಕಟ್ಟಡ ನಿರ್ಮಾಣ, ತೋಟಗಳ ವಿಸ್ತರಣೆಗೆ ಗುಡ್ಡಗಳನ್ನು ಕತ್ತರಿಸಲಾಗಿದೆ. ಕಲ್ಲು ಕ್ವಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಾಡುಗಳನ್ನು ಕಡಿಯಲಾಗಿದೆ. ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ನೀರು ಭೂಮಿಯೊಳಗೆ ಇಂಗದಂತೆ ತಡೆಯುವ ಹುಲ್ಲುಹಾಸುಗಳು ಮಾಯವಾಗಿವೆ. ಭಾರಿ ಮಳೆಯಾಗಿದ್ದರಿಂದ ಭೂಮಿಯ ಆಳಕ್ಕೆ ಇಂಗುವ ನೀರಿನ ಪ್ರಮಾಣವೂ ಹೆಚ್ಚಿದೆ. ಇದು ಮಣ್ಣಿನ ಪದರ ಸಡಿಲಗೊಳ್ಳುವುದಕ್ಕೆ ಕಾರಣವಾಗಿದೆ. ನೀರಿನ ಹರಿವಿನಿಂದ ಹೆಚ್ಚು ಒತ್ತಡ ಸೃಷ್ಟಿಯಾಗಿರುವ ಕಡೆ ಭೂಕುಸಿತ ಉಂಟಾಗಿದೆ’ ಎಂದು ವಿಶ್ಲೇಷಿಸಿದರು.

ಒಳಗೂ ಇದೆ ನದಿ: ‘ನಾವು ಭೂಮಿಯ ಮೇಲ್ಭಾಗದಲ್ಲಿ ಮಾತ್ರ ನದಿ ತೊರೆಗಳನ್ನು ನೋಡುತ್ತೇವೆ. ನದಿಗಳು ಹರಿಯುವುದೇ ಶಿಲಾಪದರದ ಬಿರುಕುಗಳ ಮೂಲಕ. ಮೇಲ್ಮೈನಿಂದ ಒಂದೆರಡು ಕಿ.ಮೀ ಆಳದಲ್ಲೂ ನೀರಿನ ಹರಿವು ಇರುತ್ತವೆ. ಭೌಗೋಳಿಕ ಬದಲಾವಣೆಗಳು ನದಿಯ ಹರಿವಿನ ದಿಕ್ಕನ್ನೂ ಬದಲಾಯಿಸುತ್ತಿವೆ. ನಾವು ಕೊಡಗಿನಲ್ಲಿ ನೋಡುತ್ತಿರುವುದೂ ಇದನ್ನೇ. ಕಣ್ಣಿಗೆ ಕಾಣಿಸದೆ ಒಳಗೊಳಗೇ ಹರಿಯುವ ನೀರು ಕೂಡಾ ಭೂಕುಸಿತಕ್ಕೆ  ಕಾರಣ’ ಎಂದರು.

‘ಅರಣ್ಯ ನಾಶ ಮಾಡಿ, ಭೂಮಿ ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳನ್ನು ವಿಸ್ತರಿಸುವ ಕಾರ್ಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸದ್ದಿಲ್ಲದೆ ನಡೆದಿದೆ. ಕಾಫಿ ಇಲ್ಲಿನ ಸಹಜ ಸಸ್ಯವಲ್ಲ. ಈ ತೋಟಗಳಿಂದಾಗಿಯೂ ನೀರು ಇಂಗುವ ಸಹಜ ಪ್ರಕ್ರಿಯೆಯ ವ್ಯತ್ಯಯವಾಗಿದೆ’ ಎಂದು ಅವರು ವಿವರಿಸಿದರು.

ಸಲಹೆಗಳು
* ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ವಿಸ್ತೃತ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಅದನ್ನು ಜಾರಿಗೊಳಿಸಬೇಕು.
* ಪಶ್ಚಿಮಘಟ್ಟ ಪ್ರದೇಶದ ಮೇಲ್ಮೈ ಸಂರಚನೆಗೆ ಧಕ್ಕೆ ಉಂಟು ಮಾಡುವ ಮಾನವ ಚಟುವಟಿಕೆಗೆ ನಿರ್ಬಂಧ ಹೇರಲೇಬೇಕು
* ಇಲ್ಲಿ ಯಾವುದೇ ಭಾರಿ ಯೋಜನೆಗಳನ್ನು ಕಾರ್ಯಗತಗೊಳಿಸಬಾರದು

‘ಭೂಕುಸಿತ ತಡೆಯುತ್ತಿರುವುದೇ ಕಾಡುಗಳು’
‘ಬೆಟ್ಟ ಸಾಲುಗಳಿರುವಲ್ಲಿ ಭೂಕುಸಿತ ಸರ್ವೇ ಸಾಮಾನ್ಯ. ಪಶ್ಚಿಮಘಟ್ಟಗಳಿಗೆ ಹೋಲಿಸಿದರೆ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭೂಕುಸಿತ ಹೆಚ್ಚು. ಆದರೆ, ಸಹ್ಯಾದ್ರಿ ಬೆಟ್ಟಸಾಲುಗಳಲ್ಲಿರುವ ದಟ್ಟಾರಣ್ಯ ಇಲ್ಲಿ ಭೂಕುಸಿತ ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಂದಾಗಿ ಇಲ್ಲಿನ ಕಾಡುಗಳನ್ನು ಕಳೆದುಕೊಂಡಷ್ಟೂ ಅಪಾಯದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ’ ಎಂದು ವೆಂಕಟಸ್ವಾಮಿ ಎಚ್ಚರಿಸಿದರು.

***

ವಿಜ್ಞಾನಿಗಳ ಶಿಫಾರಸುಗಳು ಮೂಲೆಗುಂಪಾಗುವುದೇ ಹೆಚ್ಚು. ವಿಕೋಪ ಸಂಭವಿಸಿದಾಗ ಮಾತ್ರ ಸರ್ಕಾರಗಳಿಗೆ ವಿಜ್ಞಾನಿಗಳ ನೆನಪಾಗುತ್ತಾರೆ.
ವೆಂಕಟಸ್ವಾಮಿ, ಭೂವಿಜ್ಞಾನಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !