ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಎಲ್‌ನಿಂದ ಸ್ವದೇಶಿ ವೆಂಟಿಲೇಟರ್‌ ಅಭಿವೃದ್ಧಿ: ಸೋಂಕಿತರಿಗೆ ‘ಸ್ವಸ್ಥ ವಾಯು’

Last Updated 14 ಮೇ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ ಅಭಾವ ಮನಗಂಡು‌ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ
(ಎನ್‌ಎಎಲ್‌) ‘ಸ್ವಸ್ಥ ವಾಯು’ ಹೆಸರಿನ ವಿನೂತನವಾದ ವೆಂಟಿಲೇಟರ್‌ ಅಭಿವೃದ್ಧಿಪಡಿಸಿದೆ.

ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮತ್ತು ಸ್ಥಳೀಯವಾಗಿ ಸಿಗುವ ಬಿಡಿಭಾಗಗಳನ್ನು ಬಳಸಿ ಕೇವಲ 36 ದಿನಗಳಲ್ಲಿ ಈ ವೆಂಟಿಲೇಟರ್‌ ರೂಪಿಸಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಲಾಗಿರುವ ಯಂತ್ರವನ್ನು ನರ್ಸ್‌ಗಳ ಸಹಾಯವಿಲ್ಲದೆ ಸುಲಭವಾಗಿ ಬಳಸಬಹುದು. ಹಗುರವಾಗಿರುವ ಸರಳ ಸಾಧನವನ್ನು ಸ್ಥಳಾಂತರಿಸುವುದೂ ಸುಲಭ. ಇದು ಈ ಯಂತ್ರದ ವಿಶೇಷತೆ.

ಮೈಕ್ರೊ ಕಂಟ್ರೋಲರ್‌ ಆಧಾರಿತ ಕ್ಲೋಸ್ಡ್‌ ಲೂಪ್‌ ಅಡಾಪ್ಟಿವ್‌ ನಿಯಂತ್ರಣ ವ್ಯವಸ್ಥೆ ಹೊಂದಿರುವ ವೆಂಟಿಲೇಟರ್‌ನಲ್ಲಿ ಜೈವಿಕ ಹೊಂದಾಣಿಕೆ ಇರುವ ಅನಿಲ ಫಿಲ್ಟರ್‌ಗಳಿವೆ. ಮೇಲಾಗಿ ಸೋಂಕು ನಿರೋಧಕ ವೆಂಟಿಲೇಟರ್ ಎಂಬುವುದು ಇದರ ಹೆಗ್ಗಳಿಕೆ ಎಂದು ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ ಹೇಳಿದೆ.

ಸಿಎಸ್ಐಆರ್- ಎನ್ಎಎಲ್ ಬಾಹ್ಯಾಕಾಶ ವಿನ್ಯಾಸ ವಿಭಾಗದ ಅನುಭವ ಆಧರಿಸಿ ಇದನ್ನು ರೂಪಿಸಿದೆ. ಕೋವಿಡ್‌–19 ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಶ್ವಾಸಕೋಶ ತಜ್ಞರ ಸಲಹೆ, ಸೂಚನೆ ಆಧರಿಸಿ ಈ ವೆಂಟಿಲೇಟರ್‌ ಅಭಿವೃದ್ಧಿಪಡಿಸಲಾಗಿದೆ. ಕ್ಲಿನಿಕಲ್‌ ಟ್ರಯಲ್‌ಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಎನ್‌ಎಎಲ್‌ ನಿರ್ದೇಶಕ ಜೀತೇಂದ್ರ ಜಾಧವ್‌ ಹೇಳಿದ್ದಾರೆ.

ಕೋವಿಡ್‌–19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸೌಮ್ಯವಾಗಿ ಕಾರ್ಯನಿರ್ವಹಿಸುವ ವೆಂಟಿಲೇಟರ್‌ ಮತ್ತು ಇನ್‌ಕ್ಯುಬೇಷನ್‌ಗಳ ಅಗತ್ಯವಿರುತ್ತದೆ. ಆ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಸ್ವಸ್ಥ ವಾಯು’ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಐಸಿಎಂಆರ್‌ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮೋದನೆಗಾಗಿ ಕಾಯುತ್ತಿದ್ದು, ಅನುಮೋದನೆ ಸಿಕ್ಕರೆ ಖಾಸಗಿ ಉದ್ಯಮಗಳ ಪಾಲುದಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್‌ಗಳ ಉತ್ಪಾದನೆಗೆ ಮುಂದಾಗುವುದಾಗಿ ಹೇಳಿದ್ದಾರೆ.

ಎನ್‌ಎಎಲ್ ಎಲೆಕ್ಟ್ರಾನಿಕ್ಸ್‌ ವಿಭಾಗದ ಮುಖಸ್ಥ ಡಾ.ಸಿ.ಎಂ.ಆನಂದ ನೇತೃತ್ವದಲ್ಲಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಅಮರ ನಾರಾಯಣ, ಡಾ. ವಿರೇನ್‌ ಸರ್ದನ್‌ ಮತ್ತು ತಂಡ ವೆಂಟಿಲೇಟರ್ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT