ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಶಿಖರದಿಂದ ಸೋಲಿನ ಪ್ರಪಾತಕ್ಕೆ

Last Updated 30 ಜುಲೈ 2019, 20:09 IST
ಅಕ್ಷರ ಗಾತ್ರ

‘ಎ ಲಾಟ್ ಕ್ಯಾನ್‌ ಹ್ಯಾಪನ್‌ ಓವರ್‌ ಎ ಕಪ್‌ ಆಫ್‌ ಕಾಫಿ’

–ಇದು ಜಾಗತಿಕ ಕಾಫಿ ಮಾರುಕಟ್ಟೆಯ ಎತ್ತರಕ್ಕೆ ಬೆಳೆದಿದ್ದ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರು ಸ್ಥಾಪಿಸಿದ ‘ಕೆಫೆ ಕಾಫಿ ಡೇ’ ಶಾಪಿಯ ಅಡಿಬರಹ. ಸಿದ್ಧಾರ್ಥ ಅವರ ಬದುಕಿನ ಚಿತ್ರಣವನ್ನೂ ಈ ಘೋಷವಾಕ್ಯ ಬಲು ಅರ್ಥಗರ್ಭಿತವಾಗಿ ಕಟ್ಟಿಕೊಡುತ್ತದೆ. ಹೌದು, ಕಾಫಿ ಅವರ ಬದುಕಿನಲ್ಲಿ ಏನೆಲ್ಲವನ್ನೂ ಸಂಭವಿಸುವಂತೆ ಮಾಡಿದೆ. ಯಶಸ್ಸಿನ ಉತ್ತುಂಗಕ್ಕೆ ಒಯ್ದಿದೆ; ಆರ್ಥಿಕ ಮುಗ್ಗಟ್ಟಿನ ಪ್ರಪಾತಕ್ಕೂ ತಳ್ಳಿದೆ. ಕಾಫಿ ಕಪ್‌ನಲ್ಲಿ ಬಿರುಗಾಳಿ ಏಳುವುದು ಎಂದರೆ ಏನು ಎನ್ನುವುದಕ್ಕೂ ಅವರ ಜೀವನ ಒಂದು ರೂಪಕದಂತಿದೆ.

ಚಿಕ್ಕಮಗಳೂರಿನವರಾದ (ಗೌತಹಳ್ಳಿ) ಸಿದ್ಧಾರ್ಥ ಬಾಲ್ಯದಲ್ಲಿ ಆಡಿ ಬೆಳೆದದ್ದು ಕಾಫಿ ತೋಟದಲ್ಲಿ. ತಂದೆ ಗಂಗಯ್ಯ ಹೆಗ್ಡೆ ಮಲೆನಾಡಿಗರಿಗೆ ಕಾಫಿಯನ್ನು ಹೇಗೆ ವ್ಯವಸ್ಥಿತವಾಗಿ ಬೆಳೆಸಬೇಕು ಎನ್ನುವುದನ್ನು ಹೇಳಿಕೊಟ್ಟರೆ, ಮಗ ಸಿದ್ಧಾರ್ಥ, ಬೆಳೆದ ಕಾಫಿಗೆ ಹೇಗೆ ಮಾರುಕಟ್ಟೆ ದಕ್ಕಿಸಿಕೊಳ್ಳಬೇಕು ಎಂಬ ಪಾಠವನ್ನುಕಲಿಸಿದವರು. ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಯನ್ನು ಜಗತ್ತಿನ ಅಗಲಕ್ಕೆ ವಿಸ್ತರಿಸಿದವರು. ತಮ್ಮ ಬೆಳೆಗೆ ಮಾರುಕಟ್ಟೆ ಒದಗಿಸಲು ಸಂಪೂರ್ಣವಾಗಿ ಇವರನ್ನೇ ನಂಬಿದ ಸಾವಿರಾರು ಕಾಫಿ ಬೆಳೆಗಾರರು ಇಲ್ಲಿದ್ದಾರೆ.

ಮನೆತನದಿಂದ ಬಳುವಳಿಯಾಗಿ ಬಂದ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮುನ್ನ ಸಿದ್ಧಾರ್ಥ ಅವರು, ಅದೃಷ್ಟವನ್ನು ಪಣಕ್ಕೆ ಒಡ್ಡಿದ್ದು ಷೇರು ಮಾರುಕಟ್ಟೆಯಲ್ಲಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಚೇತನಹಳ್ಳಿ ಎಸ್ಟೇಟ್‌ಗೆ ವಾಪಸಾಗುವ ಮುನ್ನ ಅವರು, ಮುಂಬೈನ ಜೆ.ಎಂ. ಫೈನಾನ್ಷಿಯಲ್ಸ್ ಲಿಮಿಟೆಡ್‌ನಲ್ಲಿ ಕೆಲಕಾಲ ಷೇರು ವಹಿವಾಟಿನ ಕೆಲಸ ಮಾಡಿದ್ದರು.

ಅಮಾಲ್ಗಮೇಟೆಡ್‌ ಕಾಫಿ ಬೀನ್ (ಎಬಿಸಿ) ಕಂಪನಿಯ ಮೂಲಕ ಕಾಫಿ ರಫ್ತು ಮಾರುಕಟ್ಟೆಯಲ್ಲಿ ಬಹುದೊಡ್ಡ ಉದ್ಯಮಿಯಾಗಿ ಬೆಳೆದರು. ಬಳಿಕ ಅವರ ಕಣ್ಣು ಹೊರಳಿದ್ದು ಕಾಫಿ ಸಂಸ್ಕೃತಿಯ ಕಡೆಗೆ. ಅದರ ಪರಿಣಾಮವೇ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ 1996ರ ಜುಲೈ 11ರಂದು ಮೊದಲ ಕೆಫೆ ಕಾಫಿ ಡೇ (ಸಿಸಿಡಿ) ಶಾಪಿಯ ಆರಂಭಿಸಿದರು.

ಎರಡು ದಶಕಗಳ ಹಿಂದೆ ಹೀಗೆ ಶುರುವಾದ ಅಪ್ಪಟ ಕರ್ನಾಟಕ ಬ್ರ್ಯಾಂಡ್ ಮುಂದೆ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದ್ದು ಇತಿಹಾಸ. ವರ್ಷಕ್ಕೆ ಹತ್ತಿರ–ಹತ್ತಿರ 1,600 ಕೋಟಿ ರೂಪಾಯಿ ವ್ಯವಹಾರ ಮಾಡುವ ಉದ್ಯಮವಾಗಿದೆ ಈ ಸಿಸಿಡಿ. ಜಗತ್ತಿನ ಹಲವು ದೇಶಗಳಲ್ಲಿ ಸಾವಿರಾರು ಸಿಸಿಡಿ ಶಾಪಿಗಳಿವೆ. ಅವುಗಳೇನು ಬರಿ ಕಾಫಿ ಕುಡಿಯುವ ಹೋಟೆಲ್‌ಗಳಲ್ಲ. ಬ್ಯುಸಿನೆಸ್‌ ಮೀಟಿಂಗ್‌ ಕೇಂದ್ರಗಳು, ಸ್ಟಾರ್ಟ್‌ ಅಪ್‌ಗಳಿಗೆ ಬೀಜಾಂಕುರ ಮಾಡಿದ ತಾಣಗಳು, ಪುಸ್ತಕ ಬಿಡುಗಡೆಗೆ ವೇದಿಕೆಯಾದ, ಮದುವೆ ಮಾತುಕತೆಗಳಿಗೆ ಸಾಕ್ಷಿಯಾದ ಜಾಗಗಳೂ ಆಗಿವೆ.

ಎರಡು ದಶಕಗಳ ಅವಧಿಯಲ್ಲಿ ಮಲೆನಾಡಿನ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಅಂತೆಯೇ ಈ ಅವಧಿಯಲ್ಲಿ ಸಿಸಿಡಿ 6000 ಸದಸ್ಯರ ದೊಡ್ಡ ಕುಟುಂಬವಾಗಿ ಬೆಳೆದು ನಿಂತಿದೆ. ಆದರೆ, ಈ ಅವಧಿಯಲ್ಲಿ ಬರಿಸ್ತಾ, ಕೋಸ್ಟಾ ಮತ್ತು ಸ್ಟಾರ್‌ಬಕ್ಸ್‌ದಂತಹ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆ ಪ್ರವೇಶಿಸಿದ್ದರಿಂದ ‘ಸಿಸಿಡಿ’ ತೀವ್ರ ಪೈಪೋಟಿ ಎದುರಿಸಿತು. ಇಂತಹ ಪೈಪೋಟಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದ ಸಿದ್ಧಾರ್ಥ ಅವರು, ಬರುಬರುತ್ತಾ ಉದ್ಯಮದಲ್ಲಿ ಅನುಭವಿಸಿದ ಆರ್ಥಿಕ ಸಂಕಷ್ಟಗಳಿಂದ ಕುಗ್ಗುತ್ತಾ ಹೋದರು ಎಂದು ಅವರನ್ನು ತುಂಬಾ ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಕಾಫಿ ಉದ್ಯಮಕ್ಕೆ ಮಾತ್ರಸಿದ್ಧಾರ್ಥ ತಮ್ಮನ್ನು ಸೀಮಿತಗೊಳಿಸಲಿಲ್ಲ. ಎಸ್‌ಐಸಿಎಲ್‌ ಸರಕು ಸಾಗಣೆ ಕಂಪನಿಯನ್ನು ಅವರು ಸ್ಥಾಪಿಸಿದ್ದರು. ಪೀಠೋಪಕರಣ ತಯಾರಿಕೆಗಾಗಿ ‘ದಿ ಡಾರ್ಕ್‌ ಫಾರೆಸ್ಟ್‌’ ಫರ್ನಿಚರ್‌ ಕಂಪನಿಯನ್ನು ಕಟ್ಟಿದರು. ಸಿಸಿಡಿಗೆ ‘ದಿ ಡಾರ್ಕ್‌ ಫಾರೆಸ್ಟ್‌’ ಸಂಸ್ಥೆಯಿಂದಲೇ ಪೀಠೋಪಕರಣ ಮಾಡಿಸಿ ತರುತ್ತಿದ್ದರು. ಗ್ಲೋಬಲ್‌ ಟೆಕ್ನಾಲಜಿ ವೆಂಚರ್ಸ್‌, ಮೈಂಡ್‌ ಟ್ರೀ, ಲಿಕ್ವಿಡ್‌ ಕ್ರಿಸ್ಟಲ್, ವೇ2 ವೆಲ್ತ್‌ ಸಂಸ್ಥೆಗಳ ಮೂಲಕವೂ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದರು.

ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್‌.ಎಂ.ಕೃಷ್ಣ ಅವರ ಅಳಿಯನಾಗಿದ್ದ ಸಿದ್ಧಾರ್ಥ (ಕೃಷ್ಣ ಅವರ ಪುತ್ರಿ ಮಾಳವಿಕ ಅವರನ್ನು ವಿವಾಹವಾಗಿದ್ದರು) ಅವರನ್ನು ಸರಳ ಮತ್ತು ಮೆದುಮಾತಿನ ಮನುಷ್ಯ ಎಂದೇ ಅವರ ಗೆಳೆಯರು ಗುರ್ತಿಸುತ್ತಾರೆ. ‘ನಮ್ಮ ಎಸ್ಟೇಟ್‌ಗಳಲ್ಲಿ ನಡೆಯುತ್ತಿದ್ದ ಮದುವೆಗಳಿಗೆ ಬಂದರೆ ಎಲ್ಲರಂತೆಯೇ ಸರದಿಯಲ್ಲಿ ನಿಂತು ಬಿಡುತ್ತಿದ್ದರು. ಆತಿಥೇಯರು ಹೋಗಿ ಕರೆದರೂ ಸರದಿ ಬಿಟ್ಟು ಬರುತ್ತಿರಲಿಲ್ಲ. ಅಷ್ಟೊಂದು ಸೀದಾ, ಸಾದಾ ಮನುಷ್ಯನಾಗಿದ್ದರು’ ಎನ್ನುತ್ತಾರೆ.

ಎಲ್ಲ ವರ್ಗಗಳ ಜನರಿಗೂ ಉಚಿತ ಚಿಕಿತ್ಸೆ ನೀಡುವಂತಹ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸಿದ್ಧಾರ್ಥ ಅವರು ಚಿಕ್ಕಮಗಳೂರಿನಲ್ಲಿ ನಿರ್ಮಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಹಂತದಲ್ಲಿದೆ. ಊರಿನ ಜನರಿಗಾಗಿ ಅವರ ಹೃದಯ ಮಿಡಿಯುತ್ತಿತ್ತು ಎನ್ನುವುದಕ್ಕೆ ಅವರ ಈ ಕಾರ್ಯವೇ ಸಾಕ್ಷಿ ಎಂದು ಅವರು ಹೇಳುತ್ತಾರೆ.

ಸಿದ್ಧಾರ್ಥ ಅವರನ್ನು ವಿವಾದಗಳೇನು ಬೆನ್ನು ಬೀಳದೆ ಬಿಟ್ಟಿಲ್ಲ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಆಡಳಿತ ಯಂತ್ರದಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಸಾವಿರಾರು ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ದೂರುಗಳಿದ್ದವು. ಕೃಷ್ಣ ಅವರು ಬಿಜೆಪಿಯತ್ತ ವಾಲಿದ್ದು ಅಳಿಯನನ್ನು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಸಂಕಷ್ಟಗಳಿಂದ ಪಾರು ಮಾಡುವ ಸಲುವಾಗಿಯೇ ಎಂಬ ಗುಸುಗುಸು ಹರಡಿತ್ತು. ಆದರೆ, ಬಿಜೆಪಿ ಆಡಳಿತದ ಅವಧಿಯಲ್ಲೇ ಸಿದ್ಧಾರ್ಥ ಅವರ ಕಂಪನಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು.

ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿದ, ಬೃಹತ್‌ ಸಂಖ್ಯೆಯ ಕಾಫಿ ಬೆಳೆಗಾರರಲ್ಲಿ ದೊಡ್ಡ ದೊಡ್ಡ ಕನಸು ಬಿತ್ತಿದ ಉದ್ಯಮಿ, ‘ನಾನು ಸೋತೆ’ ಎಂದು ಕೈಚೆಲ್ಲಿದ್ದಾರೆ. ‘ಎ ಲಾಟ್ ಕ್ಯಾನ್‌ ಹ್ಯಾಪನ್‌ ಓವರ್‌ ಎ ಕಪ್‌ ಆಫ್‌ ಕಾಫಿ’ ಎಂಬುದು ನಿಜವೇ ಎಂಬ ಪ್ರಶ್ನೆ ಉಳಿದಿದೆ.

ಸಂಪತ್ತು ₹ 18,590 ಕೋಟಿ

‘ಯಾರನ್ನಾದರೂ ವಂಚಿಸುವ ಅಥವಾ ಹಾದಿ ತಪ್ಪಿಸುವ ಉದ್ದೇಶವನ್ನು ನಾನು ಯಾವತ್ತೂ ಹೊಂದಿರಲಿಲ್ಲ. ಉದ್ಯಮಿಯಾಗಿ ನಾನು ವಿಫಲನಾಗಿರುವೆ’ ಎಂದು ನಿರ್ದೇಶಕ ಮಂಡಳಿಗೆ ಬರೆದ ಪತ್ರದಲ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವ ಸಿದ್ಧಾರ್ಥ ಅವರು, ಕಂಪನಿಯ ಒಡೆತನದಲ್ಲಿ ಇರುವ ಸಂಪತ್ತಿನ ಪಟ್ಟಿಯನ್ನೇ ನೀಡಿದ್ದಾರೆ.

ಪಾಲು ಬಂಡವಾಳ: ಕಂಪನಿಯಲ್ಲಿ ಪ್ರವರ್ತಕ ಮತ್ತು ಪ್ರವರ್ತಕರ ಸಮೂಹದ ಪಾಲು ಬಂಡವಾಳವು ಶೇ 53.93ರಷ್ಟು ಮತ್ತು ಸಾರ್ವಜನಿಕರ ಪಾಲು ಶೇ 46.03ರಷ್ಟಿತ್ತು. 6 ಮಂದಿ ಪ್ರವರ್ತಕರು ಮತ್ತು 40,678 ಮಂದಿ ಪಾಲು ಬಂಡವಾಳ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT