ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಂ 29, 30ಕ್ಕೆ ತಿದ್ದುಪಡಿಗೆ ವಿಶ್ವ ಹಿಂದು ಪರಿಷತ್ ಆಗ್ರಹ

ವಿಶ್ವ ಹಿಂದು ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಬೈಠಕ್
Last Updated 27 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ಸಂವಿಧಾನದ 29 ಮತ್ತು 30ನೇ ಕಲಂಗೆ ತಿದ್ದುಪಡಿ ಮಾಡುವ ಮೂಲಕಅಲ್ಪಸಂಖ್ಯಾತರ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾದ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ವಿಸ್ತರಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.

ನಗರದ ಸಂಘನಿಕೇತನದಲ್ಲಿ ಶುಕ್ರವಾರ ಆರಂಭಗೊಂಡ ವಿಹಿಂಪದ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರಕುಮಾರ್ ಜೈನ್, ‘ಈ ಕುರಿತು ಬೈಠಕ್‌ನಲ್ಲಿ ವಿಸ್ತೃತ ಚರ್ಚೆಯಾಗಲಿದೆ. ನಾವು ಎಲ್ಲಿಯೂ ಅಲ್ಪಸಂಖ್ಯಾತರ ಹಕ್ಕು ಮತ್ತು ಸೌಲಭ್ಯಗಳನ್ನು ಮೊಟಕುಗೊಳಿಸಿ ಎಂದು ಒತ್ತಾಯಿಸುವುದಿಲ್ಲ. ಆದರೆ, ಅದೇ ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ನೀಡಿ ಎನ್ನುತ್ತಿದ್ದೇವೆ. ಈಗಿರುವ ಕಲಂ ಕೋಮುವಾದಿ ಹಾಗೂ ಅಸಮಾನತೆಯಿಂದ ಕೂಡಿದ್ದು, ತಿದ್ದುಪಡಿಗೆ ಆಗ್ರಹಿಸುತ್ತಿದ್ದೇವೆ. ಜಾತ್ಯತೀತತೆ– ಸಮಾನತೆ ಎಂದರೆ ಕುರಾನ್, ಬೈಬಲ್ ಮಾದರಿಯಲ್ಲೇ ಭಗವದ್ಗೀತೆ, ರಾಮಾಯಾಣ, ಮಹಾಭಾರತಕ್ಕೂ ಅವಕಾಶ ಸಿಗಬೇಕಲ್ಲವೇ?’ ಎಂದು ಪ್ರಶ್ನಿಸಿದರು.

‘ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯ ಸರ್ಕಾರಗಳು ಹಿಂದು, ಸಂವಿಧಾನ ಹಾಗೂ ದೇಶ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದು, ವಿಹಿಂಪ ಕಟುವಾಗಿ ಖಂಡಿಸುತ್ತದೆ. ಅನಿವಾರ್ಯ ಬಿದ್ದರೆ, ಈ ಸರ್ಕಾರಗಳ ವಿರುದ್ಧ ಜನಾಂದೋಲನ ನಡೆಸಲೂ ಸಿದ್ಧ’ ಎಂದು ಎಚ್ಚರಿಸಿದರು.

‘ಮೌಲ್ವಿ, ಫಾದರ್‌ಗಳಿಗೆ ಹೆಚ್ಚಿನ ವೇತನ, ಹಿಂದೂ ಪೂಜಾರಿ, ಪುರೋಹಿತರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ವೋಟ್ ಬ್ಯಾಂಕ್‌ಗೋಸ್ಕರ ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಜಿಹಾದಿ ಹಾಗೂ ಮತಾಂತರಕ್ಕೆ ಪ್ರೇರಣೆಯಾಗುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಮಹಿಳಾ ದೌರ್ಜನ್ಯಗಳ ಹೆಚ್ಚಳವು ಎಚ್ಚರಿಕೆ ನೀಡುತ್ತಿದೆ. ಮಹಿಳಾ ಸಶಕ್ತೀಕರಣ, ರಕ್ಷಣೆ, ಗೌರವಯುತ ಬದುಕಿನ ಬಗ್ಗೆಯೂ ಸರ್ಕಾರಗಳು ಆದ್ಯತೆ ನೀಡಬೇಕು. ಈ ಬಗ್ಗೆಯೂ ಸರ್ಕಾರಗಳಿಗೆ ನಮ್ಮ ಸ್ಪಷ್ಟ ಸಂದೇಶಗಳ ನಿರ್ಣಯಗಳನ್ನು ಕಳುಹಿಸಿಕೊಡಲಾಗುವುದು’ ಎಂದು ವಿವರಿಸಿದರು.

‘ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶಗಳನ್ನು ನೀಡಿ, ಬೀದಿಗಿಳಿಯುವಂತೆ ಮಾಡಿದ್ದಾರೆ’ ಎಂದು ಖೇದ ವ್ಯಕ್ತಪಡಿಸಿದರು.

‘ಇತರ ಧಾರ್ಮಿಕ ನಂಬಿಕೆ’ (other religious persuasion) ಎಂಬುದು ದೇಶ ವಿಘಟನೆಗಾಗಿ ಬ್ರಿಟೀಷರ ಷಡ್ಯಂತ್ರವಾಗಿದ್ದು, ಸ್ವತಂತ್ರ ಭಾರತದ ನೇತಾರರೂ ಇದನ್ನೇ ಮುಂದುವರಿಸಿದರು. ಇದನ್ನು ರದ್ದು ಮಾಡಬೇಕು. ಏಕೆಂದರೆ, ಆದಿವಾಸಿ, ಬುಡಕಟ್ಟುಗಳು ಹಿಂದೂ ಸಮಾಜದ ಭಾಗ. ಅವರನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ’ ಎಂದರು.

ಈ ಎಲ್ಲ ವಿಚಾರಗಳ ಬಗ್ಗೆ ಬೈಠಕ್‌ನಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಅಲ್ಲದೇ, ವಿಹಿಂಪ 60 ವರ್ಷ ಪೂರೈಸುತ್ತಿದ್ದು, ಈ ತನಕದ ಕಾರ್ಯವೈಖರಿ ಹಾಗೂ ಮುಂದಿನ ರೂಪುರೇಷೆಗಳ ಬಗ್ಗೆಯೂ ಚರ್ಚಿಸುತ್ತೇವೆ. ಇತರ 18 ದೇಶಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 300 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎಂದರು.

ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT