ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಹಕ್ಕಿಗಳಿಗೆ ವಿಡಿಯೊ ಕರೆ ಸೌಲಭ್ಯ

Last Updated 27 ಮಾರ್ಚ್ 2020, 23:24 IST
ಅಕ್ಷರ ಗಾತ್ರ

ಚೆನ್ನೈ: ‘ನಾನು ಚೆನ್ನಾಗಿದ್ದೇನೆ. ನೀನು ಅಳಬಾರದು. ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸಬೇಕು. ಬಿಸಿನೀರು ಬಳಸುವುದನ್ನು ಮರೆಯಬೇಡ. ನೀವೆಲ್ಲರೂ ಸುರಕ್ಷಿತವಾಗಿರಬೇಕು’ – ವಿಡಿಯೊ ಕರೆ ಮುಖಾಂತರ ತಂದೆಯೊಬ್ಬರು ಮಗಳನ್ನು ಸಂತೈಸಿದ್ದು ಹೀಗೆ...

ಕೊರೊನಾ ವೈರಸ್ ಪಿಡುಗಿನಿಂದಾಗಿ ಕಾರಾಗೃಹಗಳಲ್ಲಿರುವ ಬಂದಿಗಳಿಗೆ ತಮ್ಮ ಕುಟುಂಬದವರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೊ ಕರೆ ಮುಖಾಂತರ ಮಾತುಕತೆ ನಡೆಯುತ್ತಿದೆ. ಕೊರೊನಾ ವೈರಸ್‌ನಿಂದ ಕುಟುಂಬ ಸುರಕ್ಷಿತವಾಗಿದೆಯೇ ಎಂದು ತಿಳಿದುಕೊಳ್ಳಲು ಮಾತುಕತೆಯ ಮೊದಲ ಕೆಲ ನಿಮಿಷಗಳನ್ನು ಜೈಲಿನಲ್ಲಿರುವವರು ವಿನಿಯೋಗಿಸುತ್ತಿದ್ದಾರೆ.

ರಾಜ್ಯದ 15 ಜೈಲುಗಳಲ್ಲಿರುವ ಕೈದಿಗಳು ತಮ್ಮ ಕುಟುಂಬ ಸದಸ್ಯರ ಜತೆ ವಾಟ್ಸ್‌ಆ್ಯಪ್ ಕಾಲ್ ಮುಖಾಂತರ ಸಂವಾದ ನಡೆಸಲು ತಮಿಳುನಾಡಿನ ಕಾರಾಗೃಹ ಇಲಾಖೆಯು ವ್ಯವಸ್ಥೆ ಮಾಡಿಕೊಟ್ಟಿದೆ. ಸೋಂಕು ಹರಡುತ್ತಿದ್ದು, ಕಾರಾಗೃಹ ಆವರಣದಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾರ್ಚ್ ಮಧ್ಯಭಾಗದಿಂದ ಸಂಬಂಧಿಕರ ನೇರ ಭೇಟಿಯನ್ನು ಇಲಾಖೆ ರದ್ದುಗೊಳಿಸಿದೆ.

‘ನೇರ ಭೇಟಿ ರದ್ದುಗೊಂಡಿದ್ದರಿಂದ ವಿಡಿಯೊ ಸಂವಾದ ನಡೆಸಲು 58 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ನಿರ್ಧರಿಸಲಾಯಿತು. ಕೊರೊನಾ ವೈರಸ್ ಬಾಧಿಸುತ್ತಿದ್ದು, ಕೈದಿಗಳಿಗೆ ತಮ್ಮ ಕುಟುಂಬದವರ ಯೋಗಕ್ಷೇಮ ತಿಳಿದುಕೊಳ್ಳುವ ಹಂಬಲವಿತ್ತು. ಹಾಗೆಯೇ ಕೈದಿಗಳ ಆರೋಗ್ಯ ವಿಚಾರಿಸಲು ಕುಟುಂಬದವರು ಹಾತೊರೆಯುತ್ತಿದ್ದರು. ಹೀಗಾಗಿ ವಿಡಿಯೊ ಕರೆ ಸೌಲಭ್ಯ ಕಲ್ಪಿಸಲಾಯಿತು. ಪರಸ್ಪರರ ಮನಸ್ಸಿನಲ್ಲಿದ್ದ ಒತ್ತಡ ಈ ವಿಡಿಯೊ ಕರೆ ಸೌಲಭ್ಯದಿಂದ ನಿವಾರಣೆಯಾಗಿದೆ’ ಎಂದು ತಮಿಳುನಾಡು ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಾರ್ಚ್ 25ರಿಂದ ಚೆನ್ನೈ ಕೇಂದ್ರ ಕಾರಾಗೃಹ, ಮದುರೈ, ಕಡಲೂರ್, ವೆಲ್ಲೂರು ಮೊದಲಾದ ಜೈಲುಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿಗದಿತ ಕೋಣೆಯಲ್ಲಿ ಮಾತುಕತೆ ನಡೆಸಲು ಪ್ರತೀ ಕೈದಿಗೆ ಸಮಯ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT