ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ತಿನಲ್ಲಿ ಆಡಳಿತ ಪಕ್ಷದಿಂದಲೇ ಧರಣಿ

ವಿಧಾನಸಭೆಯ ಸಭಾಧ್ಯಕ್ಷರ ವಿರುದ್ಧ ಹಗುರ ಮಾತು l ತನಿಖೆಗೆ ಒತ್ತಾಯ
Last Updated 11 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ನಡವಳಿಕೆ ಖಂಡಿಸಿ ವಿರೋಧ ಪಕ್ಷದವರು ಧರಣಿ ನಡೆಸುವುದು ರೂಢಿ. ಆದರೆ, ಆಡಳಿತ ಪಕ್ಷದವರೇ ಧರಣಿ ನಡೆಸಿದ ಅಪರೂಪದ ಪ್ರಸಂಗಕ್ಕೆ ವಿಧಾನ ಪರಿಷತ್‌ ಸೋಮವಾರ ಸಾಕ್ಷಿಯಾಯಿತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರ ಖರೀದಿಗೆ ಆಮಿಷ ಒಡ್ಡಿರುವುದು ಆಡಿಯೊದಿಂದ ಬಯಲಾಗಿದೆ ಎಂದು ಆರೋಪಿಸಿದ ಆಡಳಿತ ಪಕ್ಷದ ಸದಸ್ಯರು, ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬೆಳಿಗ್ಗೆ ಧರಣಿ ನಡೆಸಿದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಗದ್ದಲದಿಂದಾಗಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಎರಡು ಬಾರಿ ಕಲಾಪ ಮುಂದೂಡಿದರು.

ಪ್ರಶ್ನೋತ್ತರ ಆರಂಭವಾಗುತ್ತಲೇ ಆಡಳಿತ ಪಕ್ಷದ ಸದಸ್ಯರು, 'ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತರುವಂತಹ ಬೆಳವಣಿಗೆಗಳು ನಡೆದಿವೆ. ಶಾಸಕರ ಖರೀದಿಗೆ ಆಮಿಷ ಒಡ್ಡಿರುವ ಯಡಿಯೂರಪ್ಪ ಅವರನ್ನು ಬಂಧಿಸಬೇಕು' ಎಂದು ಒತ್ತಾಯಿಸಿ ಘೋಷಣೆ ಕೂಗಲಾರಂಭಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, 'ಸರ್ಕಾರ ನಿಮ್ಮದು. ನೀವು ತನಿಖೆಗೆ ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸುವುದು ಯಾವ ನ್ಯಾಯ. ಸದನದ ಇತಿಹಾಸದಲ್ಲಿ ಎಂದಾದರೂ ಈ ರೀತಿ ಆಗಿದೆಯೇ' ಎಂದು ಪ್ರಶ್ನಿಸಿದರು.

ಸಭಾಪತಿಯವರು ಪದೇ ಪದೇ ವಿನಂತಿಸಿದ ಬಳಿಕವೂ ಉಭಯ ಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು. ಇದರಿಂದ ಸಿಟ್ಟಿಗೆದ್ದ ಸಭಾಪತಿ, 'ಹಾಗಾದರೆ ನೀವೇ ಕಲಾಪ ನಡೆಸಿಕೊಳ್ಳಿ' ಎಂದು ಕಿಡಿಕಾರಿದರು. ಗಲಾಟೆ ಹತೋಟಿಗೆ ಬಾರದ ಕಾರಣ ಕಲಾಪವನ್ನು5 ನಿಮಿಷ ಮುಂದೂಡಿದರು.

ಕಲಾಪ ಮತ್ತೆ ಆರಂಭವಾದಾಗಲೂ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸದನದ ಗೌರವಕ್ಕೆ ಧಕ್ಕೆ ತರುವ ಬೆಳವಣಿಗೆ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಭಾಪತಿಯವರು,'ಈಗ ಸದನ ನಡೆಸಬೇಕೇ ಬೇಡವೇ. ನೀವು ನೋಟಿಸ್ ನೀಡಿಲ್ಲ. ಇಚ್ಛೆ ಬಂದಂತೆ ಕಲಾಪ ನಡೆಸಲು ಇದು ನಿಮ್ಮ ಮನೆ ಅಲ್ಲ. ಕುಳಿತುಕೊಳ್ಳಿ' ಎಂದು ಗದರಿದರು. ಚರ್ಚೆಗೆ ಅವಕಾಶ ಸಿಗದ ಕಾರಣ ಆಡಳಿತ ಪಕ್ಷದ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದರು.

ಇದನ್ನು ಖಂಡಿಸಿದ ಶ್ರೀನಿವಾಸ ಪೂಜಾರಿ, 'ಮುಖ್ಯಮಂತ್ರಿ ರಾಜೀನಾಮೆ ನೀಡಲಿ. ನಂತರ ಬೇಕಿದ್ದರೆ ಪ್ರತಿಭಟನೆ ನಡೆಸಲಿ' ಎಂದರು.

ಗದ್ದಲ ಮುಂದುವರಿದಿದ್ದರಿಂದ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಮತ್ತೆ ಕಲಾಪ ಸೇರಿದ ಬಳಿಕ ಆಡಳಿತ ಪಕ್ಷದ ಸದಸ್ಯರ ವರ್ತನೆ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆಗಲೂ ಸಭಾಪತಿ ಪೀಠದ ಮುಂದಿದ್ದ ‘ದೋಸ್ತಿ’ ಸದಸ್ಯರನ್ನು ಸಭಾನಾಯಕಿ ಜಯಮಾಲ ಮನವೊಲಿಸಿ ಧರಣಿ ಹಿಂದಕ್ಕೆ ಪಡೆಯುವಂತೆ ಮಾಡಿದರು.

ಮಧ್ಯಾಹ್ನ ಆಡಳಿತ ಪಕ್ಷದ ಸದಸ್ಯರು ನಿಯಮ 342 ರ ಅಡಿ ನೋಟಿಸ್‌ ನೀಡಿದರು. ಬಿಜೆಪಿ ಸದಸ್ಯರು ತಕರಾರು ಎತ್ತಿದ್ದರಿಂದ, ಸಂಜೆ ಕಲಾಪ ಮುಗಿಯುವವರೆಗೆ ಯಾವ ನಿಯಮದಡಿ ಚರ್ಚೆ ನಡೆಸಬೇಕು ಎಂಬ ಬಗ್ಗೆಯೇ ಚರ್ಚೆ ನಡೆಯಿತು. ಸಭಾಪತಿ ರೂಲಿಂಗ್‌ ಕಾದಿರಿಸಿದ್ದು, ಮಂಗಳವಾರ ರೂಲಿಂಗ್‌ ನೀಡಲಿದ್ದಾರೆ.

‘ಬೀದಿ ಬಸವಿಯಂತೆ ಹರಾಜು’

‘ಇತ್ತೀಚಿನ ಬೆಳವಣಿಗೆಗಳು ಕಳವಳಕಾರಿ. ಶಾಸಕರು ಬೀದಿ ಬಸವಿಯರ ಹಾಗೆ ಹರಾಜಾಗುತ್ತಿದ್ದಾರೆ. ರಾಜಕಾರಣಿಗಳಿಗೆ ಮೂರು ಕಾಸಿನ ಗೌರವ ಉಳಿದಿಲ್ಲ. ಹೊರಗಡೆ ಮುಖ ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಶಾಸಕರ ಬಗ್ಗೆ ಜನ ತೀರಾ ಅಗೌರವದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಎಲ್ಲರನ್ನೂ ಹಳದಿ ಕಣ್ಣಲ್ಲಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಕೆಳಮನೆ ಚರ್ಚೆ ಪ್ರಬುದ್ಧ; ಇಲ್ಲೇನಾಗಿದೆ?’

‘ಕೆಳಮನೆ ಚರ್ಚೆಯ ಪ್ರಬುದ್ಧತೆ ನೋಡಿದಾಗ, ಮೇಲ್ಮನೆಯವರಾದ ನಮ್ಮ ನಡವಳಿಕೆಯಲ್ಲಿ ನೋಡಿ ಎಲ್ಲೋ ತಪ್ಪು ಮಾಡುತ್ತಿದ್ದೇವೆಯೇ ಎಂಬ ಭಾವನೆ ಮೂಡಿಬರುತ್ತದೆ’ ಎಂಬ ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಮಾತು ಕಲಾಪದ ವೈಖರಿಗೆ ಸಾಕ್ಷಿಯಾಗಿತ್ತು.

ವಿಧಾನಸಭಾಧ್ಯಕ್ಷರ ಮೇಲೆ ಆರೋಪದ ಕುರಿತು ನಿಯಮ 342 ರ ಅಡಿ ಕೈಗೆತ್ತಿಕೊಳ್ಳಬೇಕೆ; ಬೇಡವೆ ಎಂಬ ಕುರಿತ ಚರ್ಚೆ ಮಧ್ಯಾಹ್ನದ ಬಳಿಕ ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು. ಕಲಾಪದ ವೇಳೆ ಕೆಲವು ಸದಸ್ಯರ ಮಾತುಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು.

ಇವೆಲ್ಲವನ್ನು ನೋಡಿದ ಪೂಜಾರಿಯವರು ‘ಚರ್ಚಾ ಪ್ರಬುದ್ಧತೆ’ಯನ್ನೇ ಪ್ರಶ್ನಿಸಿದರು. ಕೆಳಮನೆಯಲ್ಲಿ ಆಡಳಿತ, ವಿರೋಧಪಕ್ಷಗಳು ಪ್ರಬುದ್ಧತೆ ಮೆರೆದಿದ್ದಾರೆ. ಇಲ್ಲಿ ಏಕೆ ಹೀಗಾಗುತ್ತಿದೆ ಎಂಬ ವ್ಯಥೆ ತೋಡಿಕೊಂಡರು.

***

ಇಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಆಡಳಿತ ಪಕ್ಷದವರೇ ಸದನದಲ್ಲಿ ಧರಣಿ ನಡೆಸುವುದೆಂದರೆ ಏನರ್ಥ

–ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT