ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ಕೋಟಿ ದೇವರು ಎಲ್ಲಿ ಹೋದರು: ಕೊರೊನಾ ಕುರಿತು ಮರಿತಿಬ್ಬೇಗೌಡ

ವಿಧಾನ ಪರಿಷತ್‌ನಲ್ಲಿ ನಗೆ ಉಕ್ಕಿಸಿದ ಭಾಷಣ
Last Updated 13 ಮಾರ್ಚ್ 2020, 1:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕಣ್ಣಿಗೆ ಕಾಣಿಸದ ಕೊರೊನಾ ವೈರಸ್‌ಗೆ ಜಗತ್ತಿನಾದ್ಯಂತ ಮಹಾನ್‌ ನಾಯಕರು ಗಡ ಗಡ ನಡುಗುತ್ತಿದ್ದಾರೆ, ಮುಕ್ಕೋಟಿ ದೇವರು, ಸ್ವಾಮೀಜಿಗಳು, ಜ್ಯೋತಿಷಿಗಳು ಎಲ್ಲಿ ಹೋದರು...?

ವಿಧಾನ ಪರಿಷತ್‌ನಲ್ಲಿ ಗುರುವಾರ ಸಂವಿಧಾನ ಕುರಿತು ಮಾತನಾಡಿದ ಜೆಡಿಎಸ್‌ನ ಮರಿತಿಬ್ಬೇಗೌಡ ಒಂದಾದ ಮೇಲೆ ಒಂದು ಪ್ರಸಂಗಗಳನ್ನು ಉಲ್ಲೇಖಿಸುತ್ತ ಗಂಭೀರ ಚರ್ಚೆಗೆ ಹಾಸ್ಯದ ಲೇಪ ಹಚ್ಚಿದರು.

‘ಕೊರೊನಾ ಕಾರಣಕ್ಕೆ ಹೋಟೆಲ್‌ ಬಂದ್ ಮಾಡಿ ಎಂದಿರಿ, ಬ್ರಾಂದಿ ಬಂದ್ ಮಾಡಿಲ್ಲ, ಅಂದರೆ ವೈರಸ್‌ ಕೊಲ್ಲಲು ಬ್ರಾಂದಿಯಿಂದ ಮಾತ್ರ ಸಾಧ್ಯ ಎಂದು ಹೇಳಿದಂತಾಯ್ತು’ ಎಂದು ಹೇಳಿದಾಗ, ‘ಸರ್ವ ರೋಗಕ್ಕೂ ಸಾರಾಯಿಯೇ ಮದ್ದು’ ಎಂದು ಡಾ.ವೈ.ಎ.ನಾರಾಯಣಸ್ವಾಮಿ ಒಗ್ಗರಣೆ ಸೇರಿಸಿದರು.

ಮರಿತಿಬ್ಬೇಗೌಡ ಅವರುಬಿಜೆಪಿ ಸದಸ್ಯರನ್ನು ಉಲ್ಲೇಖಿಸಿ ಮತ್ತೆ ಮತ್ತೆ ದೇವರು, ಜ್ಯೋತಿಷಿ, ಸ್ವಾಮೀಜಿಗಳ ಉಲ್ಲೇಖ ಮಾಡುತ್ತಿದ್ದಂತೆಯೇ ಕಾಲೆಳೆದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ‘ಲಿಂಬೆ ಹಣ್ಣು ರೇವಣ್ಣರಿಗೆ ಇದನ್ನು ಹೇಳಿ’ ಎಂದು ಚುಚ್ಚಿದರು. ‘ಪ್ಲೇಗಮ್ಮ ದೇವಸ್ಥಾನ ತಲೆ ಎತ್ತಿದಂತೆ, ಕೋವಿಡಮ್ಮ ದೇವಸ್ಥಾನವೂ ತಲೆ ಎತ್ತಬಹುದು’ ಎಂದು ಪಿ.ಆರ್.ರಮೇಶ್‌ ದನಿಗೂಡಿಸಿದರು.

ಸ್ವಾಮೀಜಿ ಪುರಾಣ
‘ಸೂರ್ಯನನ್ನೇ 7 ನಿಮಿಷ ತಡೆಹಿಡಿದಿದ್ದಾಗಿ ನಿತ್ಯಾನಂದ ಸ್ವಾಮೀಜಿ ಹೇಳುತ್ತಾರೆ, ಮತ್ತೊಬ್ಬ ಸ್ವಾಮೀಜಿ ವಿರುದ್ಧದ ವಿಚಾರಣೆಯಿಂದ 2–3 ನ್ಯಾಯಮೂರ್ತಿಗಳೇ ಹಿಂದೆ ಸರಿಯುತ್ತಾರೆ. ನಮ್ಮ ಸಂವಿಧಾನದ ಎಂತಹ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಇದೇ ನಿದರ್ಶನ’ ಎಂದು ಮರಿತಿಬ್ಬೇಗೌಡ ಹೇಳಿದರು.

‘ಸಂವಿಧಾನವನ್ನು ನಾವು ಪೂಜಿಸುತ್ತಿದ್ದೇವೆ, ಆದರೆ ಆಚರಿಸುತ್ತಿಲ್ಲ. ಬಡವರಿಗೊಂದು ಶಿಕ್ಷಣ, ಶ್ರೀಮಂತರಿಗೊಂದು ಶಿಕ್ಷಣ ಎಂಬಂತಹ ಸ್ಥಿತಿ ಇದೆ. ಅಧಿಕಾರಶಾಹಿ ಸರಿಯಾಗಿ ಕೆಲಸ ಮಾಡದೆ, ನ್ಯಾಯಾಂಗವೂ ಭ್ರಷ್ಟವಾದ ಮೇಲೆ ಸಂವಿಧಾನದ ಆಶಯಗಳು ಜಾರಿಗೆ ಬರಲಾರದು, ಇನ್ನೂ ಹಲವು ವರ್ಷ ಕಳೆದರೂ ಮುಂದುವರಿದ ರಾಷ್ಟ್ರಗಳ ಸಾಲಿಗೆ ದೇಶ ಬಂದು ನಿಲ್ಲುವುದು ಕಷ್ಟ’ ಎಂಬ ಗಂಭೀರ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT