ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ತವರಿನಲ್ಲಿ ಜಯದ ಛಲ

ವಿರಾಟ್ ಬಳಗಕ್ಕೆ ಗೆಲ್ಲಲೇಬೇಕಾದ ಒತ್ತಡ
Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ’ಸರ್ಕಾರ ಯಾರದ್ದಂತೆ..ಬಿಜೆಪಿಯವರೇ ಮಾಡ್ತಾರಂತಾ, ಕುಮಾರಸ್ವಾಮಿ–ಕಾಂಗ್ರೆಸ್‌ ಕೈಮೇಲಾ ಗುತ್ತಾ? ರಾಜ್ಯಪಾಲರು ಏನ್ ನಿರ್ಧಾರ ಮಾಡಿದ್ರಂತೆ?’

ಬುಧವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ಆಟಗಾರರ ಅಭ್ಯಾಸ ನೋಡುತ್ತಿದ್ದವರು ನಡೆಸುತ್ತಿದ್ದ ಚರ್ಚೆ ಇದು.

ಆದರೆ, ಆರ್‌ಸಿಬಿ ಆಟಗಾರರಿಗೆ ಇದಾವುದರ ಪರಿವೆಯೇ ಇಲ್ಲ. ಏಕೆಂದರೆ ಗುರುವಾರ ಬಲಿಷ್ಠ ಸನ್‌ರೈಸರ್ಸ್‌ ತಂಡದ ಸವಾಲು ಮೀರಿ ನಿಂತರೆ ಮಾತ್ರ ತಂಡವು ಪ್ಲೇ ಆಫ್‌ ಪ್ರವೇಶಿಸುವ ಕನಸು ಜೀವಂತವಾಗಿ ಉಳಿಯಲಿದೆ. ಅದಕ್ಕಾಗಿ ನೆಟ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸ್ಕೂಪ್, ಪುಲ್‌ಗಳ ಅಭ್ಯಾಸ ಮಾಡುತ್ತಿದ್ದರು.

ಇನ್ನೂ ಕೆಲವರು ಫೀಲ್ಡಿಂಗ್‌ ಅಭ್ಯಾಸ ದಲ್ಲಿ ಮಗ್ನರಾಗಿದ್ದರು. ಬೌಲರ್‌ಗಳು ತಮ್ಮ ಸ್ವಿಂಗ್ ಮತ್ತು ಸ್ಪಿನ್ ಅಸ್ತ್ರಗಳಿಗೆ ಸಾಣೆ ಹಿಡಿಯುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಇರಲಿಲ್ಲ.

ಲೀಗ್‌ನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್‌ ತಂಡವನ್ನು ಮಣಿಸುವುದು ಸುಲಭವಲ್ಲ ಎನ್ನುವುದು ವಿರಾಟ್ ಕೊಹ್ಲಿಗೆ ಚೆನ್ನಾಗಿ ಗೊತ್ತಿದೆ.

ಯಾವುದೇ ಪರಿಸ್ಥಿತಿಯಲ್ಲಿಯೂ ಪಂದ್ಯದ ಮೇಲೆ ಹಿಡಿತ ಸಾಧಿಸಬಲ್ಲ  ಆಟಗಾರರು ಸನ್‌ರೈಸರ್ಸ್‌ನಲ್ಲಿದ್ದಾರೆ. ಅಲ್ಲದೇ ಈಗಾಗಲೇ ಪ್ಲೇ ಅಫ್‌ ಹಂತಕ್ಕೆ ತಂಡವು ಪ್ರವೇಶಿಸಿರುವುದರಿಂದ ಒತ್ತಡ ರಹಿತವಾಗಿ ಆಡುವ ಅವಕಾಶವೂ ಕೇನ್ ಬಳಗಕ್ಕೆ ಇದೆ.

ಒಂದೊಮ್ಮೆ ಸೋತರೂ ನಷ್ಟವೇನಿಲ್ಲ. ಆದರೆ ಜಯದ ಲಯವನ್ನು ಬಿಟ್ಟುಕೊಡಲು ತಾವು ಸಿದ್ಧರಿಲ್ಲ ಎಂದು ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.

ಆರ್‌ಸಿಬಿಯ ಛಲದ ಆಟ: ಕಳೆದ ಹದಿನಾರು ದಿನಗಳಲ್ಲಿ ಆರ್‌ಸಿಬಿ ತಂಡವು ತವರಿನಲ್ಲಿ ಒಂದು ಮತ್ತು ಹೊರಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಅದರಲ್ಲಿ ಮೇ 1ರಂದು ಇಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಗೆದ್ದಿತ್ತು.

ಮೇ 5ರಂದು ಪುಣೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಸೋತಿತ್ತು.  ಅದಾಗಿ ಎರಡು ದಿನಗಳ ನಂತರ ಹೈದರಾಬಾದ್‌ನಲ್ಲಿ ಕೇನ್ ಬಳಗದ ವಿರುದ್ಧ ಆರ್‌ಸಿಬಿ ಶರಣಾಗಿತ್ತು.

ಆದರೆ ಕಳೆದ ಪಂದ್ಯಗಳಲ್ಲಿ ಅಮೋಘವಾಗಿ ಆಡಿರುವ ತಂಡವು ಜಯದ ಅಲೆಯಲ್ಲಿ ತೇಲುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ ವಿಭಾಗಗಳಲ್ಲಿ ಮಹತ್ವದ ಸುಧಾರಣೆಗಳು ಈ ಪಂದ್ಯಗಳಲ್ಲಿ ಕಂಡುಬಂದಿದ್ದವು. ಇದೇ ಲಯವನ್ನು ಮುಂದುವರಿಸಿದರೆ ಜಯದ ಓಟವೂ ನಿರಂತರ
ವಾಗಬಹುದು.

ಹೈದರಾಬಾದ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್, ಕೇನ್, ಮನೀಷ್ ಪಾಂಡೆ, ಯೂಸುಫ್ ಪಠಾಣ್ ಅವರನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿಯ ಉಮೇಶ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ಟಿಮ್ ಸೌಥಿಯ ಮುಂದೆ ಇದೆ. ಆದರೆ ಸನ್‌ರೈಸರ್ಸ್‌ ತಂಡದ ಬೌಲಿಂಗ್ ವಿಭಾಗ ಶ್ರೇಷ್ಠವಾಗಿದೆ. ಸಿದ್ಧಾರ್ಥ್ ಕೌಲ್,  ಭುವನೇಶ್ವರ್ ಕುಮಾರ್, ಸ್ಪಿನ್ನರ್ ರಶೀದ್ ಖಾನ್ ಮತ್ತು ಶಕೀಬ್ ಅಲ್ ಹಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡವನ್ನು ಗೆಲ್ಲಿಸುವ ಕಾರ್ಯವನ್ನು ಕಳೆದ ಹಲವು ಪಂದ್ಯಗಳಲ್ಲಿ ಅವರು ಮಾಡಿದ್ದಾರೆ. ಇವರನ್ನು ಎದುರಿಸಿ ನಿಲ್ಲುವ ಸವಾಲು ಆತಿಥೇಯ ತಂಡದ ನಾಯಕ ವಿರಾಟ್, ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್ ಮತ್ತು ಮನದೀಪ್ ಸಿಂಗ್ ಅವರ ಮುಂದಿದೆ. ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ.

ತಂಡಗಳು ಇಂತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಬ್ರೆಂಡನ್ ಮೆಕ್ಲಮ್, ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮನದೀಪ್ ಸಿಂಗ್, ಕ್ರಿಸ್ ವೋಕ್ಸ್‌, ವಾಷಿಂಗ್ಟನ್ ಸುಂದರ್, ಕುಲವಂತ್ ಖೆಜ್ರೋಲಿಯಾ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮೋಯಿನ್ ಅಲಿ, ಮನನ್ ವೊಹ್ರಾ, ಅನಿಕೇತ್ ಚೌಧರಿ, ನವದೀಪ್ ಸೈನಿ, ಮುರುಗನ್ ಅಶ್ವಿನ್, ಪವನ್ ನೇಗಿ, ಮೊಹಮ್ಮದ್ ಸಿರಾಜ್, ಕೋರಿ ಆ್ಯಂಡರ್ಸನ್, ಪಾರ್ಥಿವ್ ಪಟೇಲ್, ಅನಿರುದ್ಧ ಜೋಶಿ, ಪವನ್ ದೇಶಪಾಂಡೆ, ಟಿಮ್ ಸೌಥಿ. ಡೇನಿಯಲ್ ವೆಟೋರಿ (ಮುಖ್ಯ ಕೋಚ್).

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಶಿಖರ್ ಧವನ್, ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಸಿದ್ಧಾರ್ಥ್ ಕೌಲ್, ದೀಪಕ್ ಹೂಡಾ. ಖಲೀಲ್ ಅಹಮದ್, ಸಂದೀಪ್ ಶರ್ಮಾ, ಯೂಸುಫ್ ಪಠಾಣ್, ಶ್ರೀವತ್ಸ ಗೋಸ್ವಾಮಿ, ರಿಕಿ ಭುಯ್, ಬೇಸಿಲ್ ಥಂಪಿ, ಟಿ. ನಟರಾಜನ್, ಸಚಿನ್ ಬೇಬಿ, ವಿಪುಲ್ ಶರ್ಮಾ, ಮೆಹದಿ ಹಸನ್, ತನ್ಮಯ್ ಅಗರವಾಲ್, ಅಲೆಕ್ಸ್‌ ಹೇಲ್ಸ್‌, ಕಾರ್ಲೋಸ್ ಬ್ರಾಥ್‌ವೈಟ್, ರಶೀದ್ ಖಾನ್, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ, ಕ್ರಿಸ್ ಜೋರ್ಡಾನ್, ಟಾಮ್ ಮೂಡಿ (ಮುಖ್ಯ ಕೋಚ್).

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT