ಸೋರುತ್ತಿದೆ ವಿಧಾನಸೌಧ

7
ಐತಿಹಾಸಿಕ ಕಟ್ಟಡದ ಅಂದಗೆಡದಂತೆ ಕ್ರಮ: ಭರವಸೆ

ಸೋರುತ್ತಿದೆ ವಿಧಾನಸೌಧ

Published:
Updated:

ಬೆಳಗಾವಿ: ವಿಧಾನಸೌಧದ ಸಹಜ ಸೌಂದರ್ಯವನ್ನು ಉಳಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಬುಧವಾರ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಉತ್ತರಿಸಿದ ಅವರು, ‘ಈ ಕಟ್ಟಡಕ್ಕೆ 60 ವರ್ಷಗಳಾಗಿವೆ. ನೆಲಹಾಸು ಸವೆದಿದೆ. ಶೌಚಾಲಯದ ಪೈಪುಗಳು ತುಕ್ಕು ಹಿಡಿದು ಹಾಳಾಗಿವೆ. ಕೆಲವು ಕಡೆ ಸೋರಿಕೆಯೂ ಉಂಟಾಗುತ್ತಿದೆ. ಇವುಗಳನ್ನು ಬದಲಾಯಿಸುವ  ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ವಿಷಯ ಪ್ರಸ್ತಾಪಿಸಿದ ತೇಜಸ್ವಿನಿ, ‘ಈ ಕಟ್ಟಡದ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ವೈರ್‌ಗಳು ಜೋತು ಬಿದ್ದಿವೆ. ಕೊಠಡಿಗಳ ನವೀಕರಣದ ಸಂದರ್ಭದಲ್ಲಿ ಮನಬಂದಂತೆ ವಿನ್ಯಾಸ ಬದಲು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕಟ್ಟಡ ನಿರ್ಮಿಸುವಾಗ ಲೋಕಲ್‌ ಏರಿಯಾ ನೆಟ್‌ವರ್ಕ್‌, ಡೇಟಾ ಸೆಂಟರ್‌, ಆಂತರಿಕ ದೂರವಾಣಿ ಸಂಪರ್ಕಗಳ ವೈರ್‌ಗಳನ್ನು ಹಾಗೂ ಕೇಬಲ್‌ಗಳನ್ನು ಅಳವಡಿಸುವ ಸೌಕರ್ಯ ಕಲ್ಪಿಸಿರಲಿಲ್ಲ. ನೂತನ ಕೇಬಲ್‌ ಅಳವಡಿಸುವಾಗ ಹಳೆ ಕೇಬಲ್‌ ತೆರವುಗೊಳಿಸದೇ ಇರುವುದರಿಂದ ಸಮಸ್ಯೆ ಆಗಿದೆ. ಅನುಪಯುಕ್ತ ವೈರ್‌ ತೆರವುಗೊಳಿಸಲು ಹಾಗೂ ಇವು ಎದ್ದುಕಾಣಿಸದಂತೆ ಕ್ರಮ ವಹಿಸಲು ಸೂಚಿಸುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

‘ವಿಧಾನಸೌಧದ ಸ್ವಚ್ಛತೆ ಕಾಪಾಡುವ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರು ಈಗಾಗಲೇ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದುರಸ್ತಿ ಸಂದರ್ಭದಲ್ಲಿ ಐತಿಹಾಸಿಕ ಕಟ್ಟಡದ ಅಂದಕ್ಕೆ ಭಂಗ ಉಂಟಾದಂತೆ ಎಚ್ಚರವಹಿಸುವಂತೆ ಸೂಚಿಸುತ್ತೇವೆ’ ಎಂದರು.

‘ವಿಧಾನಸೌಧದಿಂದ ತೆರವುಗೊಳಿಸಿದ ತೇಗದ ಪೀಠೋಪಕರಣಗಳನ್ನು ನೂತನ ಕಚೇರಿ, ಶಾಲೆ, ಪ್ರವಾಸಿ ಮಂದಿರಗಳಿಗೆ ಹಾಗೂ ವಸತಿ ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಜೆರಾಕ್ಸ್‌ ಯಂತ್ರ, ಕಂಪ್ಯೂಟರ್‌, ಪ್ರಿಂಟರ್‌ಗಳನ್ನು ವಿನಿಮಯ ಮಾಡಿ ಹೊಸ ವಸ್ತು ಖರೀದಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

’ಇಲಿ ಕಾಟ ತಪ್ಪಿಸಿ’

ವಿಧಾನಸೌಧದಲ್ಲಿ ಇಲಿ ಕಾಟ ತಪ್ಪಿಸಿ ಎಂದು ಕಾಂಗ್ರೆಸ್‌ನ ಐವನ್‌ ಡಿಸೋಜ ಒತ್ತಾಯಿಸಿದರು.

‘ಇಲಿಗಳನ್ನು ಹಿಡಿಯಲು ಗುತ್ತಿಗೆ ನೀಡಲಾಗಿದೆ. ಅವರು ತಿಂಗಳಿಗೆ 40 ಇಲಿಗಳನ್ನು ಮಾತ್ರ ಹಿಡಿಯುತ್ತಾರೆ. ಆ ತಿಂಗಳ ಕೋಟಾ ಮುಗಿದ ಬಳಿಕ ಇಲಿ ಕಾಣಿಸಿಕೊಂಡರೆ ಅವರು ಹಿಡಿಯುವುದಿಲ್ಲ. ಸಚೇತಕನಾಗಿದ್ದಾಗ ನನಗೆ ಒದಗಿಸಿದ್ದ ಕೊಠಡಿಯಲ್ಲಿ ಇಲಿಗಳು ಓಡಾಡುತ್ತಿದ್ದವು. ಅದನ್ನು ಹಿಡಿಯುವಂತೆ ಕೇಳಿದರೆ, ಈ ತಿಂಗಳ ಕೋಟಾ ಮುಗಿದಿದೆ ಎಂದು ನಿರಾಕರಿಸಿದರು’ ಎಂದರು.

 

 

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !